Advertisement

ಒಂದು ದಶಕದಲ್ಲಿ  6.28 ಲಕ್ಷಕ್ಕೂ ಅಧಿಕ ಸಸಿ ವಿತರಣೆ

09:39 PM Jul 28, 2021 | Team Udayavani |

ಉಡುಪಿ: ಮಣ್ಣಿನ ಸವಕಳಿ ತಡೆಗಟ್ಟಲು, ಪರಿಸರ ಸಮತೋಲನ ಕಾಯ್ದುಕೊಳ್ಳಲು ಅರಣ್ಯ ಇಲಾಖೆಯು 2011ರಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಗೊಳಿಸಿದೆ. ಒಂದು ದಶಕದಲ್ಲಿ ಕುಂದಾಪುರ ವಿಭಾಗದಲ್ಲಿ 6.28 ಲಕ್ಷಕ್ಕೂ ಅಧಿಕ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ.

Advertisement

ರೈತರು, ತಮ್ಮ ಕೃಷಿ ಭೂಮಿಯ ಮಣ್ಣಿನ ಸವಕಳಿ ತಡೆಗಟ್ಟಲು ನಿಗದಿತ ಪ್ರದೇಶದಲ್ಲಿ ಗಿಡಮರಗಳನ್ನು ಬೆಳೆಸಿದರೆ, ಅರಣ್ಯಾಭಿವೃದ್ಧಿಗೆ ಅನುಕೂಲ ಮಾಡಿ ದಂತಾಗುತ್ತದೆ. ಮುಖ್ಯವಾಗಿ ಪರಿಸರ ಸಂರಕ್ಷಣೆ ಮಾಡಿದಂತಾಗುತ್ತದೆ ಎಂಬುದು ಈ ಯೋಜನೆಯ ಮೂಲ ಉದ್ದೇಶ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ಮರಗಿಡ aರೈತರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಒಂದು ಸಸಿಗೆ 125 ರೂ.:

ಯೋಜನೆಯನ್ವಯ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಅರಣ್ಯ ಇಲಾಖೆಯ ಹತ್ತಿರದ ಸಸ್ಯ ಕ್ಷೇತ್ರ (ನರ್ಸರಿ)ಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಬೇಕು. ಬದುಕುಳಿದ ಪ್ರತೀ ಸಸಿಗೆ ಮೊದಲ ವರ್ಷಾಂತ್ಯದಲ್ಲಿ 35 ರೂ. ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ 40 ಹಾಗೂ 50 ರೂ. ಹೀಗೆ ಮೂರು ವರ್ಷಗಳವರೆಗೆ ಸಸಿಗಳನ್ನು ಕಾಪಾಡಲು ಒಟ್ಟು 125 ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ಪಾವತಿಸಲಾಗುತ್ತದೆ.

3 ವರ್ಷಗಳಲ್ಲಿ 1 ಕೋ.ರೂ. ಪಾವತಿ:

Advertisement

ಕುಂದಾಪುರ ಅರಣ್ಯ ವಿಭಾಗದಲ್ಲಿ 3 ವರ್ಷಗಳಲ್ಲಿ 1,05,58,120 ರೂ.ಗಳನ್ನು ರೈತರಿಗೆ ಪಾವತಿಸಲಾಗಿದೆ. ಆರಂಭದಲ್ಲಿ ಪ್ರೋತ್ಸಾಹ ಧನ ಕಡಿಮೆ ಇದ್ದು, 2 ವರ್ಷಗಳಿಂದ ಹೆಚ್ಚಿಸಲಾಗಿದೆ. 2018-19ನೇ ಸಾಲಿನಲ್ಲಿ 16,345 ರೂ., 2019-20ರಲ್ಲಿ 44,51,775 ರೂ. ಪಾವತಿಸಲಾಗಿದೆ. ಕಳೆದ ವರ್ಷ 60.90 ಲಕ್ಷ ರೂ.ಗಳನ್ನು ರೈತರಿಗೆ ನೀಡಲಾಗಿದೆ.

ಅಪಾರ ಪ್ರೋತ್ಸಾಹಧನ:

ರೈತರು ಮಳೆಗಾಲದಲ್ಲಿ ತಮ್ಮ ಕೃಷಿ ಚಟುವಟಿಕೆಗಳ ಜತೆಗೆ ಸಸಿ ಬೆಳೆಸಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಸಹಕಾರಿಯಾಗಲಿದೆ. ಆಸಕ್ತಿ ಇರುವ ಎಲ್ಲ ರೈತರು ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಸಸಿಗಳನ್ನು ಪಡೆದು ನೆಡಬೇಕು ಮತ್ತು ಸಸಿ ನೆಟ್ಟ ಅನಂತರ ನಿರ್ಲಕ್ಷ್ಯ ವಹಿಸದೆ ನೆಟ್ಟ ಗಿಡಗಳನ್ನು ಪೋಷಣೆ ಮಾಡಬೇಕು. ಅರಣ್ಯ ಇಲಾಖೆ ನೀಡುವ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಖರೀದಿಸಲು ಹಾಗೂ ನೆಡಲು ಆಗುವ ಖರ್ಚು ಭರಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿದರೆ ಗಣನೀಯ ಪ್ರಮಾಣದಲ್ಲಿ ಪ್ರೋತ್ಸಾಹಧನ ಪಡೆಯಬಹುದಾಗಿದೆ. ಜತೆಗೆ ಮರಗಳಿಂದ ಸಿಗುವ ಹಣ್ಣುಗಳು, ಬೀಜ, ಮೇವು, ಮರಮಟ್ಟು ಇತ್ಯಾದಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ಯಾವ್ಯಾವ ಜಾತಿಯ ಗಿಡಗಳಿವೆ? :

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗಾಗಿ ಒಟ್ಟು 59,292 ಸಸಿಗಳನ್ನು ಬೆಳೆಸಲಾಗಿದೆ. ಸಾಗುವಾನಿ, ಮಹಾಗನಿ, ನೇರಳೆ, ಹಲಸು, ಶ್ರೀಗಂಧ, ಮಾವು, ರೆಂಜ, ಪುನರ್‌ಪುಳಿ, ರಾಂಪತ್ರೆ, ಬಾದಾಮಿ ಇತ್ಯಾದಿ ತಳಿಗಳ ಸಸಿಗಳು ಲಭ್ಯವಿವೆ. ಬೈಂದೂರು, ಕುಂದಾಪುರ, ಶಂಕರನಾರಾಯಣ, ಉಡುಪಿ, ಹೆಬ್ರಿ, ಕಾರ್ಕಳ, ಮೂಡುಬಿದಿರೆ ಹಾಗೂ ವೇಣೂರು ವಲಯಗಳ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಈ ಸಸಿಗಳನ್ನು ರೈತರು ಪಡೆಯಬಹುದಾಗಿದೆ.

ರೈತರು ತಾವು ನೆಡುವ ಗಿಡಗಳನ್ನು ಕಾಪಾಡಬೇಕು. ಮೂರು ವರ್ಷಗಳಿಗೆ 125 ರೂ.  ಪ್ರೋತ್ಸಾಹಧನವಾಗಿ ನೀಡುತ್ತೇವೆ. ನೇರವಾಗಿ ನಮ್ಮ ನರ್ಸರಿಗೆ ಬಂದು ಆಧಾರ್‌ ಕಾರ್ಡ್‌ ಸಂಖ್ಯೆ, ಜಾಗದ ಆರ್‌ಟಿಸಿ, ಬ್ಯಾಂಕ್‌ ಖಾತೆ ವಿವರ ನೀಡಿ, 10 ರೂ. ಪಾವತಿಸಿ ನೋಂದಾಯಿಸಿಕೊಳ್ಳಬೇಕು. ಅನಂತರ ರಿಯಾಯಿತಿ ದರದಲ್ಲಿ ಸಸಿಗಳನ್ನು ಖರೀದಿಸಿ, ನೆಡಬೇಕು. ಹೀಗೆ ನೆಟ್ಟ ಗಿಡಗಳನ್ನು ಅರಣ್ಯ ಇಲಾಖೆ ಸಿಬಂದಿ ಪರಿಶೀಲಿಸುತ್ತಾರೆ. ಬದುಕುಳಿದ ಗಿಡಗಳಿಗೆ ನಾವು ನಗದು ನೀಡುತ್ತೇವೆ.- ಅಶೀಶ್‌ ರೆಡ್ಡಿ, ಡಿಎಫ್‌ಒ ಅರಣ್ಯ ಇಲಾಖೆ, ಕುಂದಾಪುರ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next