ಉಡುಪಿ: ಕೋವಿಡ್ 19ನಿಂದ ತಂದೆ, ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಕೇಂದ್ರ ಸರಕಾರ ಪಿಎಂ ಕೇರ್ ಆಫ್ ಚಿಲ್ಡ್ರನ್ಸ್ ಯೋಜನೆಯಲ್ಲಿ ಸೌಲಭ್ಯಗಳನ್ನು ವಿತರಿಸಲಾಯಿತು. ಜಿಲ್ಲೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಸೌಲಭ್ಯದ ಪ್ರಮಾಣಪತ್ರ, ಸಮಗ್ರ ಕಿಟ್‌ಗಳನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿತರಿಸಿದರು.
ಕೋವಿಡ್‌ನಿಂದ ನಿಮಗಾದ ನಷ್ಟವನ್ನು ಭರಿಸಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನಿಮ್ಮ ಜೀವನಕ್ಕೆ ಯಾವುದೆ ರೀತಿಯ ಸಮಸ್ಯೆಯಾಗದಂತೆ ಭವಿಷ್ಯದಲ್ಲಿ ಸದೃಢರಾಗಲು ನಾವು ಸಹಕಾರ ನೀಡುತ್ತೇವೆ. ನೀವು ಸಹ ನಮ್ಮ ಕುಟುಂಬದ ಸದಸ್ಯರಂತೆ. ಯಾವುದೆ ಸಮಯದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ ಸಹಿತ ಎಲ್ಲ ರೀತಿಯ ನೆರವಿಗೆ ಜಿಲ್ಲಾಡಳಿತ ನಿಮ್ಮೊಂದಿಗೆ ಇರಲಿದೆ ಎಂದು ಮಕ್ಕಳಿಗೆ ಸ್ಫೂರ್ತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಅಪರ ಡಿಸಿ ವೀಣಾ, ಜಿ.ಪಂ ಸಿಇಒ ಎಚ್. ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪ ನಿರ್ದೇಶಕಿ ವೀಣಾ ವಿವೇಕಾನಂದ, ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಅಮೃತಕಲಾ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗಳೇ ಗಾರ್ಡಿಯನ್
ಪಿಎಂ ಕೇರ್ ಯೋಜನೆ ಅಡಿ ಸೌಲಭ್ಯ ಪಡೆಯುತ್ತಿರುವ ಈ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಗಾರ್ಡಿಯನ್ ಗಳಾಗಿರುತ್ತಾರೆ. ಮೂವರು ಮಕ್ಕಳಿಗೆ ಒಬ್ಬರಿಗೆ 10 ಲ. ರೂ., ಇಬ್ಬರಿಗೆ ತಲಾ 8 ಲ. ರೂ., ಮೊತ್ತವನ್ನು ಅಂಚೆ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಜಂಟಿ ಖಾತೆಯಲ್ಲಿ ಠೇವಣಿ ಇಡಲಾಗುತ್ತದೆ ಎಂದು ಕೂರ್ಮಾರಾವ್ ತಿಳಿಸಿದರು.
15 ವರ್ಷದ ತುಂಬಿದ ಇದರ ಬಡ್ಡಿ ಮೊತ್ತವನ್ನು ಸ್ಟೈಫಂಡ್ ರೂಪದಲ್ಲಿ ಪ್ರತಿ ತಿಂಗಳು ಪಡೆಯಬಹುದು. ಮಕ್ಕಳಿಗೆ 23 ವರ್ಷ ತುಂಬಿದ ಬಳಿಕ ಉನ್ನತ ಶಿಕ್ಷಣ ವೆಚ್ಚಕ್ಕೆ ಅಥವಾ ಇನ್ನಿತರ ಉಪಯೋಗಕ್ಕೆ ಮೊತ್ತವನ್ನು ಹಿಂಪಡೆಯಬಹುದು. ವಿಶೇಷ ವಿದ್ಯಾರ್ಥಿವೇತನ ಸೌಲಭ್ಯದ ಜತೆಗೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 5 ಲ. ರೂ. ವರೆಗೆ ಆರೋಗ್ಯ ವಿಮೆ ಸೌಲಭ್ಯ ಈ ಮಕ್ಕಳಿಗಿದೆ. ಈಗಾಗಲೆ ಎನ್‌ಡಿಆರ್‌ಎಫ್ ನಿಧಿಯಿಂದ 50 ಸಾವಿರ ತುರ್ತು ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.