ಮಂಗಳೂರು: ಹೆತ್ತವರಪ್ರೀತಿ, ಕಾಳಜಿ ಯಾರೂ ನೀಡಲು ಸಾಧ್ಯವಿಲ್ಲ. ತಾಯಿ ಭಾರತಿ ನಿಮ್ಮೊಂದಿಗಿದ್ದಾಳೆ. ಪಿ.ಎಂ. ಕೇರ್ಸ್ ಯೋಜನೆ ಮೂಲಕ ಕೇಂದ್ರ ಸರಕಾರ ನಿಮ್ಮೆಲ್ಲರ ಹಿತಾಸಕ್ತಿ ಕಾಯಲು ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್ನಿಂದ ಹೆತ್ತವರನ್ನು ಕಳೆದುಕೊಂಡ ದ.ಕ. ಜಿಲ್ಲೆಯ 11 ಮಕ್ಕಳಿಗೆ ಧೈರ್ಯ ತುಂಬಿದರು.
ಹೊಸದಿಲ್ಲಿಯಿಂದ ಸೋಮವಾರ ವೀಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ಮಾತನಾಡಿದ ವೇಳೆ ಜಿಲ್ಲೆಯ 18 ವರ್ಷದೊಳಗಿನ 11 ಮಕ್ಕಳು ಸಂವಾದದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ಮೋದಿ ಅವರು 1-12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಡಿಜಿಟಲ್ ಮೋಡ್ ಮೂಲಕ ಸ್ಕಾಲರ್ ಶಿಪ್ ಹಣ ವರ್ಗಾವಣೆಗೊಳಿಸಿದರು.
ಕೋವಿಡ್ ಸೋಂಕಿನ ಸಂಕಷ್ಟದ ದಿನಗಳನ್ನು ಎದುರಿಸಿ ಬಂದಿರುವ ನಿಮ್ಮ ಧೈರ್ಯಕ್ಕೆ ನಾನು ಸೆಲ್ಯೂಟ್ ಹೊಡೆಯುವೆ ಎಂದ ಪ್ರಧಾನಮಂತ್ರಿಗಳು ನಿಮ್ಮ ಕನಸನ್ನು ಸಾಕಾರಗೊಳಿಸುವ ಪಿ.ಎಂ.ಕೇರ್ಸ್ನ ಸಣ್ಣ ಪ್ರಯತ್ನವಾಗಿದೆ. ಇಡೀ ದೇಶ, ದೇಶದ ಸಂವೇದನೆ ನಿಮ್ಮೊಂದಿಗೆ ಇದೆ ಎಂದು ಮಕ್ಕಳಿಗೆ ಅಭಯ ನೀಡಿದರು.
ಜಿಲ್ಲಾಧಿಕಾರಿಗಳಿಂದ ಕಿಟ್ ವಿತರಣೆ
ಸಂವಾದದ ಅನಂತರ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು 10 ಲಕ್ಷ ರೂ.ಗಳ ಅಂಚೆ ಇಲಾಖೆ ಪಾಸ್ ಬುಕ್, ಮಕ್ಕಳಿಗೆ ಪ್ರಧಾನ ಮಂತ್ರಿಗಳು ಬರೆದ ಸ್ನೇಹಪತ್ರ, ಆಯುಷ್ಮಾನ್ ಆರೋಗ್ಯ ಕಾರ್ಡ್ ಒಳಗೊಂಡ ಕಿಟ್ ವಿತರಿಸಿ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು..
Related Articles
10 ಲಕ್ಷ ರೂ. ಆ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಮಕ್ಕಳ ಜಂಟಿ ಖಾತೆಯಲ್ಲಿ ಇರುತ್ತದೆ. 18 ವರ್ಷ ಪೂರೈಸಿದ ಅನಂತರ ಆ ಮಕ್ಕಳ ಸ್ವಂತ ಖಾತೆಗೆ ಹಣ ವರ್ಗಾವಣೆಯಾಗುತ್ತದೆ, ಆ ಮಕ್ಕಳು 23ನೇ ವರ್ಷಕ್ಕೆ ಹಣವನ್ನು ಬಳಸಬಹುದಾಗಿದೆ. 18 ರಿಂದ 23 ವರ್ಷದ ವರೆಗೆ ಠೇವಣಿ ಇರಿಸಿದ ಹಣಕ್ಕೆ ಆ ಮಕ್ಕಳಿಗೆ ಬಡ್ಡಿ ಹಣ ಸಂದಾಯವಾಗಲಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪಾಪಬೋವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯಮುನ, ಹಿರಿಯ ಅಂಚೆ ನಿರೀಕ್ಷಕ ಶ್ರೀಹರ್ಷ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಬಾಲನ್ಯಾಯ ಮಂಡಳಿ ಸದಸ್ಯೆ ಐಡಾ ಡಿಸೋಜಾ, ಯುನಿಸೆಫ್ ಸದಸ್ಯರಾದ ಸಿಸ್ಟರ್ ಡುಲ್ಸಿನ್ ಮತ್ತಿ ತರರಿದ್ದರು.