Advertisement

ರಾಜ್ಯದ 3,100 ವಿಶೇಷ ಚೇತನರಿಗೆ ಉಚಿತ ಸಲಕರಣೆ ವಿತರಣೆ

10:46 PM May 16, 2022 | Team Udayavani |

ಬೆಳ್ತಂಗಡಿ: ವಿಶೇಷ ಚೇತನರಿಗೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿವಿಧ ಸಲಕರಣೆಗಳನ್ನು ನೀಡಲಾಗುತ್ತದೆ. ಇದರಂತೆ ಪ್ರಸ್ತುತ ವರ್ಷ 3,100 ವಿವಿಧ ಉಚಿತ ಸಲಕರಣೆಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ ತಿಳಿಸಿದರು.

Advertisement

ರಾಜ್ಯದಲ್ಲಿ ಸುಮಾರು 10.41 ಲಕ್ಷ ವಿಶೇಷ ಚೇತನರಿದ್ದಾರೆ ಎಂಬ ಮಾಹಿತಿಯಿದೆ. ಕೆಲವರಿಗೆ ಹುಟ್ಟಿನಿಂದಲೇ ಕುರುಡು, ಅಂಗವೈಕಲ್ಯ ಸಮಸ್ಯೆಗಳು ಇದ್ದರೆ, ಇನ್ನು ಕೆಲವರಿಗೆ ದುರದೃಷ್ಟವಶಾತ್‌ ಅಪಘಾತಗಳು,
ಮಾರಕರೋಗಗಳಿಂದ ಬರುತ್ತವೆ. ಗಂಭೀರ ಸಮಸ್ಯೆಯಿರುವ ವಿಶೇಷ ಚೇತನರ ಪಾಲನೆ -ಪೋಷಣೆ ಕಷ್ಟಕರ. ಇವರ ಯೋಗಕ್ಷೇಮ ನೋಡುವುದಕ್ಕಾಗಿಯೇ ಮನೆಯಲ್ಲಿ ಒಂದೆರಡು ಮಂದಿ ಇರಬೇಕಿದೆ. ಮುಖ್ಯವಾಗಿ ಸ್ನಾನ, ಶೌಚ, ಊಟೋಪಚಾರಗಳನ್ನು ಸ್ವಯಂ ಮಾಡಿಕೊಳ್ಳಲು ಸಾಧ್ಯವಾಗದ ಎಷ್ಟೋ ಮಂದಿ ಇತರರ ಅವಲಂಬನೆಯಲ್ಲಿ ಬದುಕಬೇಕಿದೆ. ಮನೆಯಿಂದ ಹೊರ ಹೋಗಲಾರದೆ, ಮಲಗಿದಲ್ಲೇ ಇರುವ ವಿಶೇಷ ಚೇತನರ ಬದುಕಂತೂ ಅತ್ಯಂತ ಶೋಚನೀಯವಾಗಿರುತ್ತದೆ. ನಿತ್ಯ ಕೂಲಿ ಮಾಡಿ ಬದುಕುವ ಎಷ್ಟೋ ಕುಟುಂಬಗಳು ಇದರಿಂದಾಗಿ ಆರ್ಥಿಕ ಸಂಕಷ್ಟವನ್ನಷ್ಟೇ ಎದುರಿಸುವುದಲ್ಲದೆ ಮಾನಸಿಕವಾಗಿಯೂ ನೊಂದಿರುತ್ತಾರೆ.
ಇದನ್ನರಿತ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ವೀ. ಹೆಗ್ಗಡೆಯವರು ಇವರಿಗಾಗಿ ವಿವಿಧ ಉಚಿತ ಸಲಕರಣೆಗಳನ್ನು ನೀಡುವ “ಜನಮಂಗಲ’ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ.

ಇದರಡಿ ಹಾಸಿಗೆ ಹಿಡಿದವರಿಗೆ ಹುಣ್ಣು (ಬೆಡ್‌ ಸೋರ್‌) ಆಗದಂತೆ ನೀರು ಹಾಸಿಗೆ (ವಾಟರ್‌ ಬೆಡ್‌), ಅಪಘಾತಕ್ಕೊಳಗಾಗಿ ನಡೆದಾಡಲು ಸಾಧ್ಯವಿಲ್ಲದವರಿಗೆ ಓಡಾಡಲು ಗಾಲಿಕುರ್ಚಿ (ವೀಲ್‌ ಚಯರ್‌), ಏಕ ಕಾಲಿನ ಕೈಗೋಲು (ಸಿಂಗಲ್‌ ಲೆಗ್‌ ವಾಕಿಂಗ್‌ ಸ್ಟಿಕ್‌), ಮೂರುಕಾಲಿನ ಕೈಗೋಲು (ತ್ರಿಲೆಗ್‌ ವಾಕಿಂಗ್‌ ಸ್ಟಿಕ್‌), ಹಾಸಿಗೆ ಹಿಡಿದ ರೋಗಿಗಳಿಗೆ ಸ್ನಾನಕ್ಕೆ, ಶೌಚಕ್ಕೆ ಹೋಗಲು ಗಾಲಿಕುರ್ಚಿ (ಕಮೋಡ್‌ ವೀಲ್‌ ಚಯರ್‌), ಅಪ ಘಾತ ಕ್ಕೊಳಗಾದವರಿಗೆ ಊರುಗೋಲು (ಆಕ್ಸಿಲರಿ ಕ್ರಚಸ್‌), ಸ್ಟ್ರೋಕ್‌ (ಪ್ಯಾರಾಲಿಸಿಸ್‌)ಗೆ ತುತ್ತಾದವರಿಗೆ ನಡುಗೋಲು ವಿತರಿಸಲಾಗುತ್ತಿದೆ.

ಈ ಎಲ್ಲ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದು, ವಿಶೇಷ ಚೇತನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆಯಲ್ಲದೇ ಸಲಕರಣೆಗಳ ಬಳಕೆಯ ಕುರಿತಂತೆ ಸಂಸ್ಥೆಯ ಕಾರ್ಯಕರ್ತರು ವಿವರಿಸಿ ಮಾಹಿತಿ ನೀಡುತ್ತಾರೆ. ಪ್ರಸ್ತುತ ವರ್ಷವು ಸುಮಾರು 3,100 ಸಲಕರಣೆಗಳನ್ನು ವಿತರಿಸಿದ್ದು, ಇದುವರೆಗೆ ಒಟ್ಟು 13,200 ಸಲಕರಣೆ ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಸಲಕರಣೆಗಳಿಂದಾಗಿ ವಿಶೇಷ ಚೇತನರ ದೈನಂದಿನ ಬದುಕಿನಲ್ಲಿ ಕನಿಷ್ಠ ಸಹಾಯವಾದರೂ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಲು ಸಾಧ್ಯವಾಗಬಹುದೆಂಬುದು ನಮ್ಮ ನಂಬಿಕೆಯಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್‌.ಎಚ್‌. ಮಂಜುನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next