Advertisement

ಮತಬೇಟೆಗೆ ನಕಲಿ ಬಾಂಡ್‌ಗಳ ವಿತರಣೆ!

02:31 PM May 29, 2018 | |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮೇ 12 ರಂದು ನಡೆದ ವಿಧಾನಸಭಾ ಚುನಾವಣೆ ವೇಳೆ ಮತದಾರರ ಓಲೈಕೆಗಾಗಿ ಅಖಾಡದಲ್ಲಿದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತೋರಿದ್ದ ವಿವಿಧ ಆಸೆ, ಆಮಿಷಗಳ ಸರಮಾಲೆ ಇದೀಗ ಚುನಾವಣೆ ಮುಗಿದ ಬಳಿಕ ಒಂದೊಂದಾಗಿ ಬಯಲಾಗುತ್ತಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಹಾಗೂ ಚರ್ಚೆಗೆ ಗ್ರಾಸವಾಗಿದೆ.

Advertisement

ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಪಣತೊಟ್ಟು ಅಖಾಡದಲ್ಲಿದ್ದ ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ಅವರ ಮನೆಬಾಗಿಲಿಗೆ ಚಿಕನ್‌ ಹಾಗೂ ಪೆಟ್ರೋಲ್‌ ಖರೀದಿಗೆ ಸಾವಿರಾರು ಟೋಕನ್‌ಗಳು ವಿತರಿಸಿ ಹೊಸ ಸಂಪ್ರದಾಯಕ್ಕೆ ನಾಂದಿಯಾಗಿದ್ದ ವಿಷಯ ಜಿಲ್ಲಾದ್ಯಂತ ಬಾರೀ ಸದ್ದು ಮಾಡಿದ್ದನ್ನು ನಾವು ಕೇಳಿದ್ದವು.

ಆದರೆ, ಇದೀಗ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ  ಹಾಲಿ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ ಬೆಂಬಲಿಗರು ಎನ್ನಲಾಗಿರುವ ಕೆಲವರು ಚುನಾವಣಾ ವೇಳೆ ಕ್ಷೇತ್ರದ ಮತದಾರರಿಗೆ ಸ್ಥಳೀಯ ಸಹಕಾರ ಸಂಘವೊಂದರ ಹೆಸರಲ್ಲಿ ನಕಲಿ ಬಾಂಡ್‌ಗಳನ್ನು ವಿತರಿಸಿ ವಂಚಿಸಿರುವ ಗೋಲ್‌ಮಾಲ್‌ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಎಗ್ಗಿಲ್ಲದೇ ನಡೆದಿರುವ ಚುನಾವಣಾ ಅಕ್ರಮಗಳನ್ನು ಬಟಾಬಯಲು ಮಾಡಿರುವುದು ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ.

ಕೊಟ್ಟ ಬಾಂಡ್‌ನ‌ ಕಂಪನಿಯೇ ಇಲ್ಲ!: ಬಾಗೇಪಲ್ಲಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿಗೆ ಮತ ಹಾಕಬೇಕೆಂದು ಸ್ಥಳೀಯರಲ್ಲದ ಆರ್‌.ಮುನಿರಾಜು, ರಾಮಚಂದ್ರಪ್ಪ ಎಂಬುವವರು ಪ್ರಾರ್ಥನ ಪತ್ತಿನ ಸಹಕಾರ ಸಂಘದ ಹೆಸರಿನಲ್ಲಿ ಮತದಾರರಿಗೆ ಬಾಂಡ್‌ ವಿತರಿಸಿದ್ದರು. ಆದರೆ, ಚುನಾವಣೆ ಮುಗಿದ ಬಳಿಕ ವಿತರಣೆಯಾಗಿರುವ ಎಲ್ಲಾ ಬಾಂಡ್‌ಗಳು ನಕಲಿ ಎನ್ನುವುದು ಗೊತ್ತಾಗಿದೆ.

ಬಾಂಡ್‌ನ‌ಲ್ಲಿ ತಿಳಿಸಿರುವ ವಿಳಾಸ, ಕಂಪನಿ ಹೆಸರೇ ಇಲ್ಲ. ಅದರಲ್ಲಿರುವ ಮೊಬೈಲ್‌ ಹಾಗೂ ದೂರವಾಣಿ ಸಂಖ್ಯೆಗಳು ಸಹ ಸ್ವಿಚ್‌ ಆಫ್ ಆಗಿದೆ. ಬಾಂಡ್‌ ನಂಬಿ ಮತ ಹಾಕಿರುವ ಮತದಾರರಿಗೆ ಈಗ ಅಪರಿಚಿತ ಅಸಾಮಿಗಳು ಚಳ್ಳೆಹಣ್ಣು ತಿನ್ನಿಸಿ ಕಾಂಗ್ರೆಸ್‌ಗೆ ಮತ ಹಾಕಿಸಿಕೊಂಡು ಪರಾರಿಯಾಗಿದ್ದಾರೆ. ನಕಲಿ ಬಾಂಡ್‌ ಪಡೆದು ವಂಚನೆಗೆ ಒಳಗಾಗಿರುವ ಗ್ರಾಹಕರು ಕಾಂಗ್ರೆಸ್‌ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜಾಲತಾಣಗಳಲ್ಲಿ ನಕಲಿ ಬಾಂಡ್‌ಗಳ ವೈರಲ್‌: ಬಾಗೇಪಲ್ಲಿ ಕ್ಷೇತ್ರದಲ್ಲಿ ಸಾವಿರಾರು ರೈತರಿಗೆ ವಿತರಿಸಿರುವ ಬಾಂಡ್‌ಗಳು ಇದೀಗ ನಗದು ಆಗದೇ ಅವು ನಕಲಿ ಎನ್ನುವುದು ಸಾಬೀತಾಗಿದ್ದು, ವಂಚನೆಗೆ ಒಳಗಾದ ರೈತರು ತಮಗೆ ಆದ ಆನ್ಯಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಕಲಿ ಬಾಂಡ್‌ಗಳನ್ನು ತೋರಿಸುವ ಛಾಯಾಚಿತ್ರಗಳು ಇದೀಗ ಫೇಸ್‌ಬುಕ್‌ ಹಾಗೂ ವಾಟ್ಸಪ್‌ಗ್ಳಲ್ಲಿ ಹರಿದಾಡುತ್ತಿದ್ದು, ಬಾಂಡ್‌ ವಿತರಿಸಿರುವ ಅಪರಿಚಿತ ಕಾಂಗ್ರೆಸ್‌ ನಾಯಕರ ಬಣ್ಣವನ್ನು ಬಯಲು ಮಾಡಿದ್ದಾರೆ. ಕಳೆದ ಏ. 9ರಂದು ವಿತರಿಸಿರುವ ಬಾಂಡ್‌ಗಳು 10 ಸಾವಿರ ರೂ.ಗಳ ಮುಖ ಬೆಲೆ ಹೊಂದಿವೆ. ಮೇ 25 ರಂದು ಬಾಂಡ್‌ನ‌ಲ್ಲಿನ ಹಣ ಡ್ರಾ ಆಗಲಿದೆ ಎಂದು ಮತದಾರರನ್ನು ನಂಬಿಸಿ ಬಾಂಡ್‌ಗಳು ವಿತರಣೆ ಆಗಿತ್ತು ಎನ್ನಲಾಗಿದೆ.

ನಕಲಿ ಬಾಂಡ್‌ ವಿತರಿಸಿದವರು ನಾಪತ್ತೆ: ಮತದಾರರಿಗೆ ವಿತರಿಸಿರುವ ಬಾಂಡ್‌ಗಳ ಮೇಲೆ ಶಾಸಕ ಸುಬ್ಟಾರೆಡ್ಡಿ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ. ಆದರೆ, ಶಾಸಕ ಎಚ್‌.ಎನ್‌.ಸುಬ್ಟಾರೆಡ್ಡಿಗೆ ಮತ ಹಾಕಿ ಎಂದು ಹೇಳಿ ಮತದಾರರ ಓಲೈಕೆಗಾಗಿ ಚುನಾವಣೆ ಸಮಯದಲ್ಲಿ ನಕಲಿ ಬಾಂಡ್‌ಗಳನ್ನು ವಿತರಿಸಿದ್ದ ಆರ್‌.ಮುನಿರಾಜು, ರಾಮಚಂದ್ರಪ್ಪಎಂಬುವವರು ಕ್ಷೇತ್ರಕ್ಕೆ ಅಪರಿಚಿತರಾಗಿದ್ದು ಇದೀಗ ಇಬ್ಬರು ತಲೆಮರೆಸಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಬಾಂಡ್‌ನ‌ಲ್ಲಿರುವ ವಿಳಾಸ ಕೂಡ ಪತ್ತೆಯಾಗಿಲ್ಲ. ಮೊಬೈಲ್‌ ಸಂಖ್ಯೆಗಳು ಸ್ವಿಚ್‌ ಆಫ್ ಆಗಿವೆ. ಆದರೆ, ಶಾಸಕರ ಹೆಸರು ಅದರಲ್ಲಿ ಇಲ್ಲದಿದ್ದರೂ ಶಾಸಕರಿಗೆ ಮತ ಹಾಕಿ ಎಂದು ಬಾಂಡ್‌ಗಳನ್ನು ವಿತರಿಸಿರುವುದು ಈಗ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂಬ ಕೂಗು ಕೇಳಿ ಬರುತ್ತಿದೆ.

ಮೋಸ ಹೋದವರು ಹೇಳುವುದೇನು?: ಬಾಗೇಪಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಕೆಲ ಅಪರಿಚಿತರು ಈ ಬಾಂಡ್‌ ನಿಮ್ಮ ಬಳಿ ಇಟ್ಟುಕೊಳ್ಳಿ ಮೇ 25ಕ್ಕೆ ಹಣ ಜಮೆಯಾಗಲಿದ್ದು, ಶಾಸಕ ಎಸ್‌,ಎನ್‌.ಸುಬ್ಟಾರೆಡ್ಡಿಗೆ ಮತ ಹಾಕಬೇಕು ಹೇಳಿದ್ದರು.  ಇನ್ನು 100 ಜನರಿಗೆ ಬಾಂಡ್‌ ಕೊಟ್ಟು ಮತ ಹಾಕಿಸಿದರೆ, 5 ಲಕ್ಷ ರೂ.ಗಳ ಇನ್ನೊಂದು ಬಾಂಡ್‌ ಕೊಡುವುದಾಗಿ ಹೇಳಿದರು.

ಹೀಗಾಗಿ ನಾವು 100 ಜನಕ್ಕೆ ಬಾಂಡ್‌ ವಿತರಿಸಿದ್ದೇವೆ. ಇದೀಗ ನಮ್ಮಗಳ ಜೊತೆ ಮೋಸ ಹೋದವರು ನಮ್ಮನ್ನೇ ಮೋಸಗಾರರು ಎನ್ನುತ್ತಿದ್ದಾರೆ. ಬಾಂಡ್‌ ನಕಲಿಯಾಗಿವೆ. ಹಣವೂ ಜಮೆ ಆಗಲಿಲ್ಲ. ಬಾಂಡ್‌ ವಿತರಿಸಿದ್ದಕ್ಕೆ ನಮ್ಮನ್ನು ಕೆಲವರು ಹಣ ಕೇಳುತ್ತಿದ್ದಾರೆ ಎಂದು ಬಾಗೇಪಲ್ಲಿ ತಾಲೂಕು ವಡ್ಡರಪಾಳ್ಯ ನಿವಾಸಿ ಅಶ್ವತ್ಥಪ್ಪ ಅವಲತ್ತುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next