Advertisement

ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ವಿತರಣೆ

02:18 AM May 30, 2020 | Sriram |

ಮಂಗಳೂರು/ಉಡುಪಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಮುದಾಯಗಳಿಗೆ ರಾಜ್ಯ ಸರಕಾರವು ಘೋಷಿಸಿರುವ ವಿಶೇಷ ಪ್ಯಾಕೇಜ್ ‌ವಿತರಣೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಆರಂಭಗೊಂಡಿದ್ದು, ಅದರಂತೆ ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರಿಗೆ ಮತ್ತು ಎನ್‌ಆರ್‌ಇಜಿ ಫಲಾನುಭವಿಗಳಿಗೆ ಪರಿಹಾರ ಧನ ಪಾವತಿ ಆರಂಭಿಸಿದೆ.

Advertisement

ಉಡುಪಿಯಲ್ಲಿರುವ ಕಾರ್ಮಿಕ ಸಹಾಯಕ ಆಯುಕ್ತರ ಕಚೇರಿ ಮೂಲಕ 19,485 ಕಟ್ಟಡ ಕಾರ್ಮಿಕರಿಗೆ ಹಾಗೂ ಮಂಗಳೂರಿನಲ್ಲಿರುವ ಇಲಾಖೆಯ ಸಹಾಯಕ ಆಯುಕ್ತರ ಕಚೇರಿ ಮೂಲಕ 13,000 ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ. ಪಾವತಿ ಮಾಡಲಾಗಿದೆ. ಹಾಗೆಯೇ ಉಡುಪಿ ಜಿಲ್ಲೆಯ 7,592 ಹಾಗೂ ದ.ಕ. ಜಿಲ್ಲೆಯ 27,0000 ಎನ್‌ಆರ್‌ಇಜಿ ಫಲಾನುಭವಿಗಳಿಗೆ ಜಿ.ಪಂ. ಮೂಲಕ ವಿತರಣೆಯಾಗಿದೆ ಎಂದು ಇಲಾಖೆಯ ಕಚೇರಿ ಮೂಲಗಳು ತಿಳಿಸಿವೆ.

ನಿಯಮ ಬದಲು ಸಮಸ್ಯೆ
ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ ಬಹಳಷ್ಟು ಮಂದಿಗೆ ಈಗಾಗಲೇ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಹಣ ಸಂದಾಯವಾಗಿದೆ. ಕೇವಲ ಕಾರ್ಮಿಕ ನೋಂದಣಿ ಕಾರ್ಡ್‌ ಹೊಂದಿದ್ದು, ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ನಂಬರ್‌ ನೀಡದವರಿಗೆ ಪಾವತಿಯಾಗಿಲ್ಲ. 2016-17ರ ಬಳಿಕ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ಕಾರ್ಡ್‌ಗಾಗಿ ನೋಂದಣಿ ಮಾಡುವಾಗ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ ಕಡ್ಡಾಯ ಮಾಡಿದ್ದರಿಂದ 2016-17ರ ಬಳಿಕ ಕಾರ್ಮಿಕ ನೋಂದಣಿ ಕಾರ್ಡ್‌ ಪಡೆದ ಬಹುತೇಕ ಮಂದಿಗೆ ಪರಿಹಾರ ಧನ ಸಂದಾಯವಾಗಿದೆ. 2016- 17ಕ್ಕಿಂತ ಮೊದಲು ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆ ನಂಬರ್‌ ನೋಂದಣಿ ಕಡ್ಡಾಯ ಇರದಿದ್ದ ಕಾರಣ ಅಂಥವರಿಗೆ ಸಮಸ್ಯೆಯಾಗಿದೆ. ಅಂಥವರು ಈಗ ಕಾರ್ಮಿಕ ನೋಂದಣಿ ಕಾರ್ಡ್‌ ನಂಬರ್‌ ಜತೆಗೆ ಆಧಾರ್‌ ಮತ್ತು ಬ್ಯಾಂಕ್‌ ಖಾತೆ ನಂಬರನ್ನು ಸೇರಿಸಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪಡೆಯುವುದು ಹೇಗೆ?
ಪರಿಹಾರ ಧನ ಪಡೆಯಲಿಚ್ಛಿ ಸುವವರು ಸರಕಾರದ ಸೇವಾ ಸಿಂಧು ಆ್ಯಪ್‌ನಲ್ಲಿ ನಿಗದಿತ ದಾಖಲೆಗಳೊಂದಿಗೆ ಅರ್ಜಿ ಭರ್ತಿ ಮಾಡಬೇಕು. ಕಟ್ಟಡ ಕಾರ್ಮಿಕರು ಕಾರ್ಮಿಕ ನೋಂದಣಿ ಕಾರ್ಡು ಹೊಂದಿರ ಬೇಕು. ಕಾರ್ಡ್‌ ನಂಬರ್‌, ಹೆಸರು, ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ನಂಬರನ್ನು ನೀಡುವುದು ಕಡ್ಡಾಯ.

ನೊಂದಾಯಿತ 13,000 ಕಟ್ಟಡ ಕಾರ್ಮಿಕರಿಗೆ ತಲಾ 5,000 ರೂ. ವಿತರಣೆಯಾಗಿದೆ. ಇನ್ನೂ 8,000ದಷ್ಟು ಕಟ್ಟಡ ಕಾರ್ಮಿಕರು ಇದ್ದಾರೆ. ಹಂತ ಹಂತವಾಗಿ ಎಲ್ಲರಿಗೂ ವಿತರಣೆ ಆಗಲಿದೆ. 27,000 ಎನ್‌ಆರ್‌ಇಜಿ ಫಲಾನುಭವಿಗಳಿಗೆ ಜಿ.ಪಂ. ಮೂಲಕ ಪರಿಹಾರ ವಿತರಣೆಯಾಗಿದೆ.
– ಕೆ.ಬಿ. ನಾಗರಾಜ್‌, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರು, ಮಂಗಳೂರು

Advertisement

ಉಡುಪಿ ಜಿಲ್ಲೆಯಲ್ಲಿ ನೋಂದಾಯಿತ 19,485 ಮಂದಿ ಕಟ್ಟಡ ಕಾರ್ಮಿಕರಿಗೆ ತಲಾ 5 ಸಾವಿರ ರೂ. ವಿತರಿಸಲಾಗಿದೆ. 7,592 ಮಂದಿ ಫ‌ಲಾನುಭವಿಗಳಿಗೆ ಜಿ.ಪಂ.ಮೂಲಕ ಪರಿಹಾರ ವಿತರಣೆಯಾಗಿದೆ.
-ಬಾಲಕೃಷ್ಣ, ಕಾರ್ಮಿಕ ಇಲಾಖೆಯ ಅಧಿಕಾರಿ, ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next