Advertisement

ಅನಿಲಭಾಗ್ಯ ಯೋಜನೆ ಕಿಟ್‌ ವಿತರಣೆ ಇನ್ನೂ ಲೇಟ್‌

06:50 AM Aug 16, 2018 | Team Udayavani |

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ್ದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯ ಫ‌ಲಾನುಭವಿಗಳಿಗೆ ಸಮ್ಮಿಶ್ರ ಸರ್ಕಾರ ನೀಡಿರುವ ಭರವಸೆಯಂತೆ ಆಗಸ್ಟ್‌ 15ರಿಂದಲೇ ಕಿಟ್‌ ವಿತರಣೆ ಆಗಬೇಕಿತ್ತು. ಆದರೆ ಅದು ಕಾರ್ಯಗತಗೊಂಡಿಲ್ಲ.

Advertisement

ಆದರೆ, ಈ ಕುರಿತು ಅಧಿಕಾರಿಗಳನ್ನು ವಿಚಾರಿಸಿದಾಗ, “ಆ.15ರಿಂದ ಕಿಟ್‌ ವಿತರಿಸುತ್ತೇವೆ ಎಂದಿಲ್ಲ, ತೈಲ ಕಂಪನಿಗಳು ಅರ್ಹ ಫ‌ಲಾನುಭವಿಗಳಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಿಸಲಿವೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.

ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ಜುಲೈ 24ರಂದು ಅಧಿಕಾರಿಗಳ ಸಭೆ ನಡೆಸಿದ್ದ ಆಹಾರ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 1 ಲಕ್ಷ ಗ್ಯಾಸ್‌ ಸಿಲಿಂಡರ್‌ ಸಂಪರ್ಕ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಎರಡು ತಿಂಗಳಲ್ಲಿ ಕಿಟ್‌ ವಿತರಣೆ ಮಾಡಲಾಗುವುದು. ಇದಕ್ಕೆ ಆ.15ರಿಂದ ಚಾಲನೆ ನೀಡಲಾಗುವುದು ಎಂದಿದ್ದರು.

ಅಡುಗೆ ಅನಿಲ ಸಂಪರ್ಕರಹಿತ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್‌ ಸಂಪರ್ಕ ನೀಡಲು 2017-18ರ ಬಜೆಟ್‌ನಲ್ಲಿ ಸರ್ಕಾರ “ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ’ ಘೋಷಣೆ ಮಾಡಿತ್ತು. ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಜಾರಿಯಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಪ್ರತಿಷ್ಠೆಯ ಪೈಪೋಟಿ ಏರ್ಪಟ್ಟಿದ್ದರಿಂದ ಸಿಎಂ ಅನಿಲ ಭಾಗ್ಯ ಯೋಜನೆ ನೆನೆಗುದಿಗೆ ಬಿದ್ದಿತು. 2018ರ ಫೆಬ್ರವರಿಯಲ್ಲಿ ಯೋಜನೆಗೆ ಚಾಲನೆ ಸಿಕ್ಕಿತ್ತು. ಆ ಬೆನ್ನಲ್ಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಯೋಜನೆ ಅನುಷ್ಠಾನಗೊಂಡಿಲ್ಲ. ಈಗ ಸಮ್ಮಿಶ್ರ ಸರ್ಕಾರ ಮತ್ತೆ ಚಾಲನೆ ನೀಡಿದೆ ಎಂದಿದ್ದರು.

ತೈಲ ಕಂಪನಿಗಳಿಂದ ಅನುಮತಿ ಇಲ್ಲ?:
ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಒಟ್ಟು 10 ಲಕ್ಷ ಕುಟುಂಬಗಳ ಗುರಿ ಇಟ್ಟುಕೊಳ್ಳಲಾಗಿದೆ. ಸದ್ಯ ನಮ್ಮಲ್ಲಿ 1 ಲಕ್ಷ ಸ್ಟವ್‌ಗಳು ದಾಸ್ತಾನು ಇರುವುದರಿಂದ ಮೊದಲ ಹಂತದಲ್ಲಿ 1 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಈಗಾಗಲೇ 30 ಸಾವಿರ ಫ‌ಲಾನುಭವಿಗಳ ಪಟ್ಟಿ ಸಿದ್ಧವಾಗಿದೆ. ಉಳಿದ ಫ‌ಲಾನುಭವಿಗಳ ನೋಂದಣಿ ಕಾರ್ಯ ತ್ವರಿತಗೊಳಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಗ್ಯಾಸ್‌ ಸಿಲಿಂಡರ್‌ಗಳಿಗೆ ಸಂಪರ್ಕ ಕೊಡಲು ತೈಲ ಕಂಪನಿಗಳು ಇನ್ನೂ ಅನುಮತಿ ನೀಡಿಲ್ಲ. ಇಲಾಖಾ ಮಟ್ಟದಲ್ಲಿ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ನಾವು ಕಿಟ್‌ ವಿತರಣೆಗೆ ಚಾಲನೆ ನೀಡುತ್ತೇವೆ. ಈಗಿನ ಸ್ಥಿತಿ ಗಮನಿಸಿದರೆ ಸೆಪ್ಟಂಬರ್‌ ಮೊದಲ ವಾರದಿಂದ ಕಿಟ್‌ ವಿತರಣೆ ಆರಂಭವಾಗಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಆಗಸ್ಟ್‌ 15ರಿಂದ ಕಿಟ್‌ ವಿತರಣೆ ಮಾಡುತ್ತಿಲ್ಲ. ಆದರೆ, ಇಂದಿನಿಂದ (ಆ.15) ತೈಲ ಕಂಪನಿಗಳಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅರ್ಜಿ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಿಟ್‌ ವಿತರಣೆ ಆರಂಭಿಸಲಾಗುವುದು.
– ಪಂಕಜ್‌ಕುಮಾರ್‌ ಪಾಂಡೆ, ಕಾರ್ಯದರ್ಶಿ, ಆಹಾರ ಇಲಾಖೆ.

ಸಿದ್ದರಾಮಯ್ಯ ಭಾವಚಿತ್ರದ ತಲೆಬಿಸಿ
“ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ’ ಅನುಷ್ಠಾನದ ತರಾತುರಿಯಲ್ಲಿರುವ ಅಧಿಕಾರಿಗಳಿಗೆ ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವಚಿತ್ರದ್ದೇ ತಲೆಬಿಸಿ. ಹಿಂದಿನ ಸರ್ಕಾರದಲ್ಲಿ ಜಾರಿಗೆ ತರಲಾಗಿದ್ದ ಸಿಎಂ ಅನಿಲಭಾಗ್ಯ ಯೋಜನೆಯ ಸ್ಟವ್‌ಗ‌ಳ ಬಾಕ್ಸ್‌ಗಳ ಮೇಲೆ ಸಿದ್ದರಾಮಯ್ಯನವರ ಫೋಟೋ ಹಾಕಲಾಗಿತ್ತು. ಈಗ ಮುಖ್ಯಮಂತ್ರಿ ಬದಲಾಗಿದ್ದರಿಂದ ಹಳೆಯ ಫೋಟೋ ತೆಗೆದು ಹೊಸ ಕುಮಾರಸ್ವಾಮಿಯವರ ಫೋಟೋ ಹಾಕುವ ಕೆಲಸದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಒಂದು ಕುಟುಂಬಕ್ಕೆ 4 ಸಾವಿರ ವೆಚ್ಚ:
ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಅರ್ಹ ಬಿಪಿಎಲ್‌ ಕುಟುಂಬಕ್ಕೆ ಒಂದು ಗ್ಯಾಸ್‌ ಕನೆಕ್ಷನ್‌, 1 ಸ್ಟೌವ್‌ ಹಾಗೂ 2 ರೀಫಿಲ್ಲಿಂಗ್‌ ಒಳಗೊಂಡ ಕಿಟ್‌ ನೀಡಲಾಗುತ್ತದೆ. ಇದಕ್ಕೆ ಒಂದು ಕುಟುಂಬಕ್ಕೆ 4,250 ರೂ. ವೆಚ್ಚವಾಗಲಿದೆ. ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಎಲ್ಲ 30 ಲಕ್ಷ ಕುಟುಂಬಗಳಿಗೆ 1,280 ಕೋಟಿ ರೂ. ವೆಚ್ಚವಾಗಲಿದೆ. ಮೊದಲ ಹಂತದಲ್ಲಿ 10 ಲಕ್ಷ ಕುಟುಂಬಗಳಿಗೆ ಕಿಟ್‌ ವಿತರಿಸಲು 400 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ ಸದ್ಯ 1 ಲಕ್ಷ ಕುಟುಂಬಗಳಿಗೆ ಕಿಟ್‌ ವಿತರಿಸಲು ಸರ್ಕಾರ ತೀರ್ಮಾನಿಸಿದೆ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next