ಮೊಳಕಾಲ್ಮೂರು: ತಾಲೂಕಿನಲ್ಲಿನ ಕೃಷಿ ರೈತರಿಗೆ ಬಿತ್ತನೆ ಮಾಡಲು ಗುಣಮಟ್ಟದ ಕೃಷಿ ಪರಿಕರಗಳನ್ನು ವಿತರಿಸಬೇಕು ಎಂದು ಕೃಷಿ ಅಧಿಕಾರಿ ವೆಂಕಟೇಶ್ ತಿಳಿಸಿದರು..
ತಾಲೂಕಿನ ರಾಂಪುರ ಗ್ರಾಮದಲ್ಲಿ ರೈತರಿಗೆ ಮಾರಾಟ ಮಾಡುವ ಬೀಜ ಮತ್ತು ಗೊಬ್ಬರ ಅಂಗಡಿಗಳ ದಾಸ್ತಾನನ್ನು ಪರಿಶೀಲಿಸಿ ಅವರು ಮಾತನಾಡಿದರು. ಮುಂಗಾರು ಹಂಗಾಮು ಆರಂಭವಾಗಿದ್ದು, ಮಾರಾಟ ಅಂಗಡಿಗಳಲ್ಲಿ ಕೃಷಿಕರು ಬಿತ್ತನೆ ಮಾಡುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಮಾರಾಟ ಮಾಡುವುದರಿಂದ ಇಳುವರಿ ಕಡಿಮೆಯಾಗಿ ರೈತರಿಗೆ ಹೆಚ್ಚಿನ ನಷ್ಟ ಸಂಭವಿಸಲಿದೆ. ರೈತರು ಸಾಲಬಾಧೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ದುಸ್ಥಿತಿ ನಿರ್ಮಾಣವಾಗಲಿದೆ. ರೈತರ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಕೃಷಿ ಪರಿಕರ ವ್ಯಾಪಾರಸ್ಥರು ಗುಣಮಟ್ಟದ ಬೀಜಗಳು ಮತ್ತು ಕೃಷಿ ಪರಿಕರಗಳನ್ನು ವಿತರಿಸಬೇಕು ಎಂದು ಹೇಳಿದರು.
ಸಾವಯವ ಭಾಗ್ಯ ಯೋಜನೆ ರಾಜಣ್ಣ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕೂಡಲೇ ಜಮೀನುಗಳನ್ನು ಸಿದ್ಧತೆ ಮಾಡಿಕೊಂಡು ಸಕಾಲಕ್ಕೆ ಬಿತ್ತನೆ ಮಾಡಬೇಕು. ಬಿತ್ತನೆಯ
ಪೂರ್ವದಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಗೊಬ್ಬರವನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬೇಕು. ಕೃಷಿ ಪರಿಕರಣಗಳನ್ನು ಮಾರಾಟ ಮಾಡುವ ವ್ಯಾಪಾರಸ್ಥರು ಗುಣಮಟ್ಟದ ಕೃಷಿಪರಿಕರಳನ್ನು ವಿತರಿಸಿ ಅವರ ಉತ್ತಮ ಬದುಕಿಗೆ ಸಹಕಾರ ನೀಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವಸಮುದ್ರ ಹೋಬಳಿಯ ರಾಂಪುರ ಹಾಗೂ ಇನ್ನಿತರ ಗ್ರಾಮಗಳಲ್ಲಿ ರೈತರಿಗೆ ಮಾರಾಟ ಮಾಡುವ ಬೀಜ ಮತ್ತು ಗೊಬ್ಬರ ಅಂಗಡಿಗಳ ದಾಸ್ತಾನನ್ನು ಪರಿಶೀಲಿಸಿ ಗುಣಮಟ್ಟದ ಕೃಷಿ ಪರಿಕರಗಳನ್ನು ವಿತರಿಸಬೇಕು. ತಪ್ಪಿದ್ದಲ್ಲಿ ಅಂಗಡಿ ಪರವಾನಿಗೆ ರದ್ದುಪಡಿಸಲು ನೋಟೀಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆತ್ಮ ಯೋಜನೆಯ ಶಿವಣ್ಣ ಹಾಗೂ ರೈತ ಅನುವುಗಾರರು ಹಾಜರಿದ್ದರು.