Advertisement

ಪ್ರತಿ ಕಟ್ಟಡ ಕಾರ್ಮಿಕನಿಗೂ ಬಸ್‌ ಪಾಸ್‌ ವಿತರಿಸಿ: ಸಿಎಂ ಬೊಮ್ಮಾಯಿ

09:24 PM Sep 20, 2022 | Team Udayavani |

ಬೆಂಗಳೂರು: ಕಾರ್ಮಿಕರ ಕಲ್ಯಾಣಕ್ಕೆ ರಾಜ್ಯ ಸರ್ಕಾರವು ಮೊದಲ ಪ್ರಾಶಸ್ತ್ಯ ನೀಡಲಿದೆ. ರಾಜ್ಯದಲ್ಲಿರುವ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್‌ಪಾಸ್‌ ವಿತರಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯ ನೂತನ ಮೊಬೈಲ್‌ ತಂತ್ರಾಂಶ, ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ವಿತರಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರವು ಆದ್ಯತೆ ನೀಡಿದೆ. ಕನಿಷ್ಠ ವೇತನ, ದಿನಭತ್ಯೆ, ಸಾರಿಗೆ ಭತ್ಯೆ ಮತ್ತು ನಿವೃತ್ತಿ ವೇತನವನ್ನು ನಿಗದಿತ ಸಮಯಕ್ಕೆ ನೀಡಲಾಗುತ್ತಿದೆ. ಇದೀಗ ಹೊಸ ಯೋಜನೆಯಾಗಿ ಕಟ್ಟಡ ಕಾರ್ಮಿಕರಿಗೆ ಬಸ್‌ ಪಾಸ್‌ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಪ್ರಗತಿಯಲ್ಲಿ ಕಾರ್ಮಿಕರು ಪ್ರಮುಖ ಪಾತ್ರ ವಹಿಸಲಿದ್ದಾರೆ. ರೈತರ ಶ್ರಮ ಮತ್ತು ಕಾರ್ಮಿಕರ ಬೆವರಿಗೆ ಅರ್ಥ ಸಿಗಬೇಕಿದೆ. ಕಾರ್ಮಿಕರಿಗೆ ಬದುಕಿನ ಭರವಸೆ ಕಲ್ಪಿಸುವುದಕ್ಕಾಗಿ ಇಲಾಖೆಯಲ್ಲಿರುವ ಸಾವಿರಾರು ಕೋಟಿ ರೂ. ಅನುದಾನವನ್ನು ಬಳಸಿ ಕಾರ್ಮಿಕರ ಆರೋಗ್ಯ ಮತ್ತು ಅವರ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೈತರು ಮತ್ತು ಕಾರ್ಮಿಕರ ಮಕ್ಕಳಿಗೂ ವಿದ್ಯಾಸಿರಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಟಾರ್‌ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 600ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ 2,307 ಕಾರ್ಮಿಕರ ಮಕ್ಕಳಿಗೆ ತಲಾ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅದೇ ರೀತಿ ಪ್ರಸ್ತುತ ಬಿಎಂಟಿಸಿ ಕಟ್ಟಡ ಕಾರ್ಮಿಕರಿಗೆ ನೀಡುತ್ತಿರುವ ರಿಯಾಯಿತಿ ಬಸ್‌ ಪಾಸ್‌ ಯೋಜನೆಗಳನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಬಸ್‌ ಪಾಸ್‌ ಯೋಜನೆಯ ಯಶಸ್ವಿಗಾಗಿ ಇತರೆ ಇಲಾಖೆಗಳೊಡನೆ ಸಮನ್ವಯ ಸಾಧಿಸಲು ರಾಜ್ಯಮಟ್ಟದ ಮೇಲುಸ್ತುವಾರಿ ಅಧಿಕಾರಿ ಮತ್ತು ಜಿಲ್ಲಾ ಮಟ್ಟದ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗುತ್ತದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್‌ ಆರ್‌. ನಿರಾಣಿ, ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷ ಚಂದ್ರಪ್ಪ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ ಉಪಸ್ಥಿತರಿದ್ದರು.

ಬಸ್‌ ಪಾಸ್‌ ಪಡೆಯುವುದು ಹೇಗೆ? :

ಕಟ್ಟಡ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ಗಳನ್ನು ರಾಜ್ಯದಲ್ಲಿರುವ ಎಲ್ಲ ಕಟ್ಟಡ ಕಾರ್ಮಿಕರು ತಮಗೆ ಸಮೀಪವಿರುವ ಬೆಂಗಳೂರು-ಒನ್‌, ಕರ್ನಾಟಕ-ಒನ್‌ ಮತ್ತು ಗ್ರಾಮ ಒನ್‌ ಕಂದ್ರಗಳಲ್ಲಿ ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಪಾಸ್‌ ಪಡೆಯಬಹುದು. ಪಾಸ್‌ಗಳ ಅವಧಿಯು ಮೂರು ತಿಂಗಳುಗಳಾಗಿರುತ್ತದೆ. ಅವಧಿ ಮುಗಿದ ನಂತರ ಮತ್ತೆ ನವೀಕರಣ ಮಾಡಿಕೊಳ್ಳಬಹುದು. ಕಟ್ಟಡ ಕಾರ್ಮಿಕರು ತಾವು ವಾಸಿಸುತ್ತಿರುವ ಸ್ಥಳದಿಂದ 45 ಕಿಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿದೆ.

ಮೊಬೈಲ್‌ ಆ್ಯಪ್‌ನಲ್ಲಿ ನೋಂದಣಿ ಹೇಗೆ? :

ಕಾರ್ಮಿಕರ ಇಲಾಖೆ ಮತ್ತು ಅದರ ಅಧೀನದಲ್ಲಿರುವ ಇತರೆ ಮಂಡಳಿಗಳ ನೋಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ನೂತನವಾಗಿ ಆ್ಯಪ್‌ ಸಿದ್ಧಪಡಿಸಲಾಗಿದೆ ಮತ್ತು ಪ್ರತ್ಯೇಕ ವೆಬ್‌ಸೈಟ್‌ ಲೋಕಾರ್ಪಣೆ ಮಾಡಲಾಗಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ kbocwwb labour  (ಕೆಬಿಒಸಿಡಬ್ಲ್ಯುಡಬ್ಲ್ಯುಬಿ ಲೇಬರ್‌) ಡೌನ್‌ಲೋಡ್‌ ಮಾಡಿಕೊಂಡು ನಂತರ ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ನೋಂದಣಿ ಮಾಡಿಕೊಳ್ಳಬಹುದು. ಇಲ್ಲಿಯವರೆಗೂ ಕಾರ್ಮಿಕ ಇಲಾಖೆಯಲ್ಲಿ 37 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ, ಪಿಂಚಣಿ ಸೌಲಭ್ಯ ಹಾಗೂ ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಸಹಾಯಧನ, ತಾಯಿ ಮಗು ಸಹಾಯಹಸ್ತ ಯೋಜನೆ ಅಡಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next