Advertisement

ಪ್ರತಿದಿನ 10 ಸಾವಿರ ಆಯುಷ್ಮಾನ್‌ ಕಾರ್ಡ್‌ ವಿತರಿಸಿ

02:33 PM Aug 06, 2022 | Team Udayavani |

ಕಲಬುರಗಿ: ದಿನಕ್ಕೆ 10,000 ಸಾವಿರದಷ್ಟು ಆಯುಷ್ಯಾನ್‌ ಭಾರತ್‌- ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸುವ ಗುರಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಯಶವಂತ್‌ ವಿ.ಗುರುಕರ್‌ ಸೂಚಿಸಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ, ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಜಿಲ್ಲಾ ಸಮಿತಿ, ಜಿಲ್ಲಾ ಆರೋಗ್ಯ ಅಭಿಯಾನ ಸಭೆ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳ ನೆರವಿನೊಂದಿಗೆ ಜಿಲ್ಲೆಯಲ್ಲಿನ ಎಲ್ಲ ಗ್ರಾಮಗಳಲ್ಲಿ ಎಬಿ- ಎಆರ್‌ಕೆ ಕಾರ್ಡ್‌ಗಳನ್ನು ಒಂದು ತಿಂಗಳಲ್ಲಿ ವಿತರಿಸುವ ಗುರಿ ಸಾಧಿಸಬೇಕು. ಗ್ರಾಮ ಮಟ್ಟದಲ್ಲಿ ಕ್ಯಾಂಪ್‌ಗ್ಳ ತೆರೆದು ಕಾರ್ಡ್‌ ವಿತರಿಸಬೇಕು ಎಂದು ಸಲಹೆ ನೀಡಿದರು.

ಜುಲೈ 18ರಿಂದ ಆಗಸ್ಟ್‌ 15ರ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಂಡಿದ್ದು, ಎಲ್ಲರೂ ಒಗ್ಗೂಡಿ ಶ್ರಮಿಸುವ ಮೂಲಕ ಕರ್ನಾಟಕವನ್ನು ಕ್ಷಯ ಮುಕ್ತ ರಾಜ್ಯವನ್ನಾಗಿಸಲು ಎಲ್ಲಾ ಶ್ರಮಿಸಬೇಕು ಎಂದರು.

ಜಂತುಹುಳು: ಆ. 10ರಂದು 1ರಿಂದ 19 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆಯನ್ನು ಎಲ್ಲ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ದಾಖಲಾಗದ ಹಾಗೂ ಶಾಲೆಯಿಂದ ಹೊರೆಗುಳಿದ ಮಕ್ಕಳಿಗೂ ಜಂತುಹುಳು ನಾಶಕ ಮಾತ್ರೆಯನ್ನು ಅಂಗನವಾಡಿ ಕೇಂದ್ರಗಳಲ್ಲೇ ನೀಡಲಾಗುತ್ತಿದೆ. ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಜಂತುಹುಳು ನಾಶಕ ಮಾತ್ರೆ ನೀಡದೇ ಬಾಕಿ ಇರುವ ಮಕ್ಕಳಿಗೆ ಆಗಸ್ಟ್‌ 17 ರಂದು ನಿರ್ಮೂಲನಾ ದಿನದಂದು ಈ ಮಾತ್ರೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಹಾಗೂ ಜಂತುಹುಳು ನಿವಾರಣಾ ದಿನದ ಪೋಸ್ಟರ್‌ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್‌ ಬದೋಲೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಜಶೇಖರ ಮಾಲಿ, ಆರ್‌.ಸಿ.ಎಚ್‌ ಅಧಿಕಾರಿ ಡಾ| ಪ್ರಭುಲಿಂಗ ಮಾನಕರ್‌, ಜಿಲ್ಲಾ ಸರ್ಜನ್‌ ಡಾ| ಅಂಬಾರಾಯ ರುದ್ರವಾಡಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ರಾಜಕುಮಾರ ಕುಲಕರ್ಣಿ, ವಿವಿಧ ಇಲಾಖೆ ಅಧಿಕಾರಿಗಳು, ತಾಲೂಕು ವೈದ್ಯಾಧಿಕಾರಿಗಳು ಹಾಗೂ ಮುಂತಾದ ವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next