Advertisement

ದೂರಲಿರುವ ದೂರವಾಣಿ, ಪರಿಹಾರದ ದಿಕ್ಕು ತೋರಿಸುತ್ತಿದೆ! 

02:29 PM Dec 25, 2017 | |

ಒಂದಂತೂ ನಿಜ, ಗ್ರಾಹಕನ ದೂರು ದಾಖಲಿಸಲು ಹೊಸ ಹೊಸ ವ್ಯವಸ್ಥೆಗಳು ಬಂದಿವೆ. ಎಸ್‌ಎಂಎಸ್‌, ಆನ್‌ಲೈನ್‌, ಟ್ವಿಟ್ಟರ್‌, ಮಿಸ್‌ ಕಾಲ್‌…. ಓಬಿರಾಯನ ಕಾಲದ ಅರ್ಜಿ ಸಲ್ಲಿಸಿ ಉತ್ತರಕ್ಕೋ, ಪರಿಹಾರಕ್ಕೋ ಕಾಯಬೇಕಾದ ಸ್ಥಿತಿ ಈಗಿಲ್ಲ. ಹಲವು ವ್ಯವಸ್ಥೆಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಬಹುಪಾಲು ಸಂದರ್ಭಗಳಲ್ಲಿ ಈ ರೀತಿಯ ಸೌಲಭ್ಯಗಳು ಇವೆ ಎಂಬುದು ಗೊತ್ತಿಲ್ಲದ ಜನ ಅರ್ಥಾತ್‌ ನಾವು ನಮ್ಮ ಆಯುಧಗಳನ್ನು ವ್ಯರ್ಥಪಡಿಸಿಕೊಳ್ಳುತ್ತಿದ್ದೇವೆ.

Advertisement

ಮತ್ತೆ ಇದಕ್ಕೆ ಸೇವದಾತರನ್ನು ದೂರುವ ಬದಲು ನಾವು ನಮ್ಮ ಅರಿತುಕೊಳ್ಳಬೇಕು ಎಂಬ ಅಗತ್ಯದತ್ತ ತೋರಿದ ನಿರ್ಲಕ್ಷ್ಯದತ್ತ ಆತ್ಮಾವಲೋಕನ ಮಾಡಿಕೊಳ್ಳೋಣ. ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ ಒಂದು ದೃಷ್ಟಾಂತ ನೆನಪಾಗುತ್ತದೆ. ಮಳೆಗಾಲವಿರಲಿ, ಬೇಸಿಗೆಯಿರಲಿ ಗ್ರಾಹಕರಿಗೆ ಗೊತ್ತಿಲ್ಲದಂತೆ ಏನಾದರೂ ನೆಪವೊಡ್ಡಿ ವಾರದ ಯಾವುದೇ ದಿನದ ಯಾವುದೇ ಸಮಯದಲ್ಲಿ ಮೆಸ್ಕಾಂ ವಿದ್ಯುತ್‌ ಕಡಿತಗೊಳಿಸುತ್ತಿತ್ತು.

ಕಾರಣ ತಿಳಿಯಲು ಆವತ್ತಿನ ಉಚಿತ ಸಹಾಯವಾಣಿ 1800-425-1088ಗೆ ಫೋನಾಯಿಸಿದರೆ ಅದು ಚಾಲ್ತಿಯಲ್ಲಿಲ್ಲ ಎಂಬ ಉತ್ತರ. ಇರಲಿ, ಎಷ್ಟೋ ಸಾರಿ ಮೆಸ್ಕಾಂ ಸ್ಥಳೀಯ ಕಚೇರಿಗೆ ದೂರಿದರೆ ಅದಕ್ಕೆ ಏನಾದರೊಂದು ಸಮಜಾಯಿಷಿ, ಅದನ್ನೂ ಸ್ವೀಕರಿಸುವವರು ಕೂಡ ಇಲ್ಲ. ಗೃಹಿಣಿಯರಿಗಂತೂ ನಿತ್ಯದ ಅಡುಗೆ ಮಾಡಿಕೊಳ್ಳಲು ಯುಪಿಎಸ್‌ ಮೊರೆ ಹೋಗಬೇಕಾದ ಪರಿಸ್ಥಿತಿ. 

ಇದು ಒಂದು ವರ್ಷದಷ್ಟು ಹಿಂದಿನ ಕತೆ. ಇದರಿಂದ ಬೇಸತ್ತ ಸಾಗರದ ಪ್ರಶಾಂತಿ ಮೆಸ್ಕಾಂ ಮಂಗಳೂರು ವಿಭಾಗದ ಸಹಾಯವಾಣಿ ದೂರವಾಣಿ ಸಂಖ್ಯೆ 1800-425-1917ಗೆ ತಮಗಾದ ತೊಂದರೆಯನ್ನು ವಿವರಿಸುತ್ತಾರೆ. ಅಲ್ಲಿಂದಲೇ ನೇರವಾಗಿ ಸಾಗರದ ಮೆಸ್ಕಾಂ ಕಚೇರಿಗೆ ದೂರವಾಣಿ ಮೂಲಕ ಗ್ರಾಹಕರ ತೊಂದರೆಗೆ ಕಾರಣವನ್ನು ವಿವರಿಸಲು ನೇರ ಸಂವಾದ ಆರಂಭಿಸುತ್ತಾರೆ ಅಲ್ಲಿಯ ಸಿಬ್ಬಂದಿ.

ಧನ್ಯವಾದಗಳೊಂದಿಗೆ ಸಂಪರ್ಕ ಕಡಿತಗೊಳ್ಳುತ್ತದೆ. ಮ್ಯಾಜಿಕ್‌ ಎಂಬಂತೆ ಕೆಲ ನಿಮಿಷಗಳಲ್ಲಿ ಮನೆಯ ದೀಪ ಹೊತ್ತಿಕೊಳ್ಳುತ್ತದೆ. ಅಂದರೆ ಮೇಲಿನಿಂದ ಒತ್ತಡ ಬಂದಾಗಲೇ ಇಲ್ಲಿನ ಸಿಬ್ಬಂದಿ ಎಚ್ಚೆತ್ತುಕೊಳ್ಳುತ್ತಾರೆಂಬುದು ಸ್ಪಷ್ಟವಾಯಿತಲ್ಲ? ಈ ತರಹ ಈಗಾಗಲೇ ಮೂರು ಬಾರಿ ಆಗಿದೆ ಎನ್ನುತ್ತಾರೆ ಪ್ರಶಾಂತಿ. ಮತ್ತೂಂದು ಊರಿನಲ್ಲಿ ಟ್ರಾನ್ಸ್‌ಫಾರ ಹಾಳಾದಾಗ ಅದನ್ನು ಸರಿಪಡಿಸಿಕೊಡಲೇ ಲೈನ್‌ಮನ್‌ ಲಂಚ ಕೇಳಿದ.

Advertisement

ಒಬ್ಬ ಜಾಣ ನೇರವಾಗಿ ಮೆಸ್ಕಾಂ ಮುಖ್ಯ ಕಚೇರಿಗೆ ಸಹಾಯವಾಣಿ ಮೂಲಕ ದೂರು ಸಲ್ಲಿಸಿದ. ಆಗಲೇ ನಡೆದದ್ದು ಪವಾಡ. ಲೈನ್‌ಮನ್‌ ಓಡಿ ಬಂದು ಸರಿಪಡಿಸಿಕೊಟ್ಟು ಮಂಗಳೂರು ತನಕ ದೂರು ಒಯ್ಯಬೇಡಿ, ಪ್ಲೀಸ್‌ ಎಂದ!  ಇನ್ನೊಂದು ಪುಟ್ಟ ನಗರದಲ್ಲಿ ಪ್ರತಿ ದಿನ ಸಂಜೆ 7ರಿಂದ 8ರವರೆಗೆ ಅನಧಿಕೃತ ಲೋಡ್‌ ಶೆಡ್ಡಿಂಗ್‌ ಮಾಡುತ್ತಿದ್ದರು. ಮಂಗಳೂರು ಫೋನ್‌ನಿಂದ ಈ ಸಮಸ್ಯೆಗೂ ಪರಿಹಾರ ಸಿಕ್ಕಿತ್ತು.

 ದೂರು ದುಮ್ಮಾನಕ್ಕೆ ಶಂಖನಾದ!:  ಗ್ರಾಹಕರ ದೂರುದುಮ್ಮಾನ ಕೇಳಲು ಎಲ್ಲ ವಿದ್ಯುತ್‌ ಸರಬರಾಜು ಕಂಪನಿ ಎಸ್ಕಾಂಗಳು ದಿನದ 24 ಗಂಟೆಯೂ  ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನು ನಡೆಸುತ್ತವೆ. ಸ್ಥಳೀಯ ಕಚೇರಿಗೆ ದೂರು ಸಲ್ಲಿಸುವುದಕ್ಕಿಂತ ಶಂಖದಿಂದ ಬಂದರೆ ಮಾತ್ರ ತೀರ್ಥ ಎಂಬ ಗಾದೆಯಂತೆ ವಿಶೇಷ ನಂಬರ್‌ಗಳಿಗೇ ಫೋನ್‌ ಮಾಡುವುದು ವಿಹಿತ.

ಸಾಮಾನ್ಯವಾಗಿ ಎಲ್ಲ ಎಸ್ಕಾಂಗಳ ಸಹಾಯವಾಣಿ ನಂಬರ್‌ 1912. ಇದರೊಂದಿಗೆ ಎಸ್ಕಾಂಗಳಲ್ಲಿ ವಿಶೇಷ ಉಚಿತ ದೂರವಾಣಿ ಸೌಲಭ್ಯವನ್ನು ಒದಗಿಸಲಾಗಿದೆ. ಈ ನಂಬರಿಗೆ ಆಯಾ ಎಸ್ಕಾಂನ ಗ್ರಾಹಕರು-ಅವರು ಎಲ್ಲೇ ಇದ್ದರೂ-ದೂರವಾಣಿ ಕರೆ ಮಾಡಿ ತಮ್ಮ ದೂರನ್ನು ದಾಖಲಿಸಬಹುದು. ಮೆಸ್ಕಾಂ ಉಚಿತ ದೂರವಾಣಿ ನಂಬರ್‌: 1800 425 1917. ಜೆಸ್ಕಾಂ ಹಾಗೂ ಹೆಸ್ಕಾಂ ಉಚಿತ ದೂರವಾಣಿ ನಂಬರ್‌: 1912. ಬೆಸ್ಕಾಂನಲ್ಲಿ 58888ಗೆ ಎಸ್‌ಎಂಎಸ್‌ ಮೂಲಕ ದೂರು ನೀಡಬಹುದು.

ವಾಟ್ಸ್‌ಪ್‌ ಅಥವಾ ಸ್ಕೈಪೆ ಮೂಲಕವೂ 94498 44640 ನಂಬರ್‌ಗೆ ದೂರು ಸಲ್ಲಿಸಬಹುದು. ಅವರ ಸಹಾಯವಾಣಿ 080-22873333ಗೂ ಕರೆ ಮಾಡಬಹುದು. ಸೆಸ್ಕ್ನಲ್ಲಿ 56263ಕ್ಕೆ ಎಸ್‌ಎಂಎಸ್‌ ಮೂಲಕ ದೂರು ಸಲ್ಲಿಸಬಹುದಾಗಿದೆ.  ಕೇವಲ ದೂರು, ಸಮಸ್ಯೆಗಳನ್ನು ಹೇಳುವುದು ಮಾತ್ರವಲ್ಲದೆ ಹೆಸ್ಕಾಂ ಸೇವೆಗಳನ್ನು ಸುಧಾರಿಸುವಂತಹ ಅಥವಾ ಅದರ ಸೇವೆಗಳಿಗೆ ಸಂಬಂದಿಸಿದ ಇನ್ನಿತರ ಅಭಿಪ್ರಾಯಗಳಿದ್ದಲ್ಲಿ ಅದನ್ನು ಕಂಪನಿಗೆ ಮುಟ್ಟಿಸಲು ಸಾಧ್ಯವಾಗುವಂತೆ ಹೆಸ್ಕಾಂ ತನ್ನ ಅಧಿಕೃತ ಅಂತಜಾìಲದ ತಾಣದ‌ಲ್ಲಿ ಫೀಡ್‌ಬ್ಯಾಕ್‌ ಪುಟವೊಂದನ್ನು ಗ್ರಾಹಕರಿಗೆ ಒದಗಿಸಿದೆ.

ಅದರ ಲಿಂಕ್‌: //www.hescom.in/contact-us.html ಈ ಲಿಂಕ್‌ಗೆ ಹೋಗಿ ಅದರ ಉಪಯೋಗ ಪಡೆಯಬಹುದು. ಇದೇ ರೀತಿ ಬೆಸ್ಕಾಂ, ಮೆಸ್ಕಾಂ ಸೇರಿದಂತೆ ಎಲ್ಲ ಎಸ್ಕಾಂಗಳು ಈ ರೀತಿಯ ಸೇವೆ ನೀಡುತ್ತಿರಬಹುದು, ಪರಿಶೀಲಿಸಿ. ಒಂದೊಮ್ಮೆ ಈ ಮಾದರಿಯ ಸೌಲಭ್ಯ ಇಲ್ಲ ಎಂತಾದರೆ ಹೆಸ್ಕಾಂನ ಉದಾಹರಣೆಯನ್ನು ಉದ್ಧರಿಸಿ ಗ್ರಾಹಕ ಸೇವಾರಂಭಕ್ಕೆ ಹಕ್ಕೋತ್ತಾಯ ಮಾಡಬೇಕು. ಅದು ಫ‌ಲ ನೀಡದೆ ಇರುವುದಿಲ್ಲ.

ಬಿಲ್‌ ವಿದ್ಯೆ ತಡೆಗೆ ಬ್ರಹ್ಮಾಸ್ತ್ರ!: ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಗಳಾಗಿರಲಿ, ವ್ಯಾಟ್‌ ಬಂದಿರಲಿ…. ಜಿಎಸ್‌ಟಿ ಕಾಲಿಟ್ಟಿರಲಿ, ನಾನಾ ಕ್ರಮದಲ್ಲಿ ಅಂಗಡಿಯವರು ತೆರಿಗೆ ವಂಚಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಮಾತ್ರ ಖರೆ. ವ್ಯಾಟ್‌ ಬಂದಾಗ ಇನ್ನು ತೆರಿಗೆ ವಂಚನೆ ಸಾಧ್ಯವೇ ಇಲ್ಲ. ವಸ್ತು ತಯಾರಿಕೆಯಾದಲ್ಲಿಯೇ ತೆರಿಗೆ ಬಿದ್ದಿರುತ್ತದೆ. ಹಾಗಾಗಿ ಅಂಗಡಿಯವ ಕೇಳದಿದ್ದರೂ ಬಿಲ್‌ ಕೊಡುತ್ತಾನೆ ಎಂಬರ್ಥದ ಮಾತು ಕೇಳಿಬಂದಿತ್ತು.

ಆದರೆ ಆಗಿದ್ದೇ ಬೇರೆ. ಅಲ್ಲೂ “ಬಿಲ್‌ ವಿದ್ಯೆ ಕೆಲಸ ಮಾಡಿತ್ತು. ಮುಖ್ಯವಾಗಿ ವಂಚನೆಗೆ ದಾರಿ ಸಿಕ್ಕಿತ್ತು. ಈಗ ಜಿಎಸ್‌ಟಿ ಬಂದಾಗಲೂ ಅದೇ ಮಾತು ಅನುರಣಿಸುತ್ತಿದೆ. ಇದಕ್ಕೆ ತಡೆಯೊಡ್ಡಲು ವಾಣಿಜ್ಯ ತೆರಿಗೆ ಇಲಾಖೆ ಸುಲಭ ಕ್ರಮದಲ್ಲಿ ದೂರು ಸಲ್ಲಿಸುವ ಕ್ರಮವೊಂದನ್ನು ಜಾರಿಗೆ ತಂದಿದೆ. arsid11484115 ಗ್ರಾಹಕರು ಬಿಲ್‌ ಕೊಡದಿದ್ದ ಅಂಗಡಿಯವರ ಹೆಸರು, ವಿಳಾಸವನ್ನು ಟೈಪ್‌ ಮಾಡಿ 6488888888 ಅಥವಾ 6477777777ಕ್ಕೆ ಎಸ್‌ಎಂಎಸ್‌ ಹಾಕಿದರೆ ಸಾಕು.

ದೂರು ಸ್ವೀಕೃತಿಯ ವಿಶಿಷ್ಟ ನೊಂದಣಿ ಸಂಖ್ಯೆ ಮತ್ತದೇ ಎಸ್‌ಎಂಎಸ್‌ ರೂಪದಲ್ಲಿ ನಿಮ್ಮ ಮೊಬೈಲ್‌ಗೆ ಬಂದುಬೀಳುತ್ತದೆ. ಹೆಚ್ಚುವರಿ ಮಾಹಿತಿ ಪಡೆಯಲು ಇಲಾಖೆಯವರೇ ನಿಮಗೆ ಕರೆ ಮಾಡುತ್ತಾರೆ. ಇದು ಸಾಂಕ್ರಾಮಿಕವಾದರೆ ಫ‌ಲಿತಾಂಶ ಸಾಧ್ಯ. ಇಲಾಖೆಯೂ ಎಷ್ಟೂ ಅಂತ ದೂರುಗಳನ್ನು ಮುಚ್ಚಿ ಹಾಕುತ್ತಿರಲು ಸಾಧ್ಯ? ಇದರರ್ಥ ಎಲ್ಲ ದೂರವಾಣಿ ದೂರುಗಳು ಸಫ‌ಲವಾಗುತ್ತವೆ ಎಂದಲ್ಲ.

ಇವತ್ತಿಗೂ ನಗರದ ಸ್ಥಳೀಯ ಸಂಸ್ಥೆಗಳ ದೂರುಗಳನ್ನು ಆಲಿಸಲು “ಜನಹಿತ ಎಂಬ ಕೇಂದ್ರೀಕೃತ ದೂರವಾಣಿ ವ್ಯವಸ್ಥೆಯಿದೆ. ದೂರು ಸಲ್ಲಿಸಿದ ತಕ್ಷಣ ಮಾಹಿತಿ ಎಸ್‌ಎಂಎಸ್‌ ಬರುತ್ತದೆ. ಫಾಲೋಅಪ್‌ ಮಾಡುವ ಭರವಸೆ ಸಿಗುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳನ್ನು ಸರಿಪಡಿಸುವುದು ಸುಲಭವೇ? ನಮ್ಮ ಶ್ರಮ ವ್ಯರ್ಥವಾಗುವ ಶೇಕಡಾ ನೂರರ ಸಾಧ್ಯತೆ ಇದೆ!

ಒತ್ತಾಯಿಸಲು ವಿಳಂಬ ಏಕೆ?: ನಿಮಗ್ಗೊತ್ತು, ಎಸ್‌ಬಿಐನಲ್ಲಿ ಸಾಮಾನ್ಯ ಗ್ರಾಹಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು unhappy ದೂರು ಸಲ್ಲಿಕೆಯ ಅವಕಾಶವಿದೆ. ನೀವು 8008202020 ನಂಬರ್‌ಗೆ UNHAPPY ಎಂದು ಟೈಪ್‌ ಮಾಡಿ ಎಸ್‌ಎಂಎಸ್‌ ಮಾಡಿದರೆ ಅವರೇ ಮರಳಿ ಕರೆ ಮಾಡಿ ವಿಚಾರಿಸಿಕೊಂಡು ದೂರು ಪರಿಹಾರಕ್ಕೆ ಪ್ರಯತ್ನಿಸುತ್ತಾರೆ. ನೀತಿನಿಯಮಗಳಿಗೆ ಹೊರತಾದ ಸಮಸ್ಯೆಗಳು, ಸ್ಥಳೀಯ ಶಾಖೆಯ ವಿಳಂಬದ ಕಾರಣ ಸೃಷ್ಟಿಯಾದ ಸಮಸ್ಯೆಗೆ ಖಚಿತವಾಗಿ ಪರಿಹಾರ ಸಿಗುವ ಸಾಧ್ಯತೆ ಈ ವ್ಯವಸ್ಥೆಯಲ್ಲಿ ಹೆಚ್ಚು.

ಇದು ಕೇವಲ ಎಸ್‌ಬಿಐಗೆ ಸೀಮಿತವಾಗಬೇಕಿಲ್ಲ. ಎಸ್‌ಬಿಐಯೇತರ ಗ್ರಾಹಕರು ತಮ್ಮ ಬ್ಯಾಂಕ್‌ ವ್ಯಾಪ್ತಿಯಲ್ಲಿಯೂ ಇಂತಹ ಸೇವೆ ಒದಗಿಸಿ ಎಂದು ಆಗ್ರಹಿಸಬೇಕು. ಬರೀ ಬ್ಯಾಂಕಿಂಗ್‌ ಎಂತಲ್ಲ. ಈ ತರಹದ ಎಲ್ಲ ಸೇವಾಧಾರಿತ ಕ್ಷೇತ್ರಗಳಲ್ಲೂ ಈ ಮಾದರಿಯ ಸೇವೆಗಳು ಹೆಚ್ಚಬೇಕು. ಇಂದಿನ ತಾಂತ್ರಿಕತೆಯಲ್ಲಿ ಈ ತರಹದ ಸೇವೆ ಆರಂಭ ಕಠಿಣವಲ್ಲ. ಮನಸ್ಸು ಬೇಕು. ಈ ನಿಟ್ಟಿನಲ್ಲಿ ಬಳಕೆದಾರರ ಒತ್ತಡ ಅನಿವಾರ್ಯ. 
 
* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next