Advertisement

ಹರ್ಯಾಣ BJP ಸರ್ಕಾರದಲ್ಲಿ ಭಿನ್ನಮತ?

09:29 PM Jun 09, 2023 | Team Udayavani |

ನವದೆಹಲಿ: ಹರ್ಯಾಣದಲ್ಲಿ ಅಧಿಕಾರದಲ್ಲಿ ಇರುವ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ ಮತ್ತು ಡಿಸಿಎಂ ದುಷ್ಯಂತ್‌ ಚೌಟಾಲ ಅವರ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮೈತ್ರಿ ಸರ್ಕಾರದಲ್ಲಿ ಭಿನ್ನಮತದ ಬಿರುಕುಗಳು ಮೂಡಲಾರಂಭಿಸಿವೆ. 2024ರ ಲೋಕಸಭೆ ಚುನಾವಣೆ ಜತೆಯಲ್ಲಿಯೇ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಬಿಜೆಪಿಗೆ ಸವಾಲಿನದ್ದೇ ಆಗಿರಲಿದೆ. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ನಾಲ್ವರು ಸ್ವತಂತ್ರ ಶಾಸಕರು ಹರ್ಯಾಣದಲ್ಲಿ ಬಿಜೆಪಿ ಉಸ್ತುವಾರಿ ಬಿಪ್ಲಬ್‌ ಕುಮಾರ್‌ ದೇಬ್‌ ಅವರನ್ನು ಭೇಟಿ ಮಾಡಿದ್ದಾರೆ.

Advertisement

ಪಕ್ಷೇತರ ಶಾಸಕರಾಗಿರುವ ಧರ್ಮಪಾಲ್‌ ಗೋಂಡರ್‌, ರಾಕೇಶ್‌ ದೌಲತಾಬಾದ್‌, ರಣಬೀರ್‌ ಸಿಂಗ್‌ ಮತ್ತು ಸೋಮವೀರ್‌ ಸಾಂಗ್ವಾನ್‌ ಅವರ ಜತೆಗೆ ಮಾತುಕತೆ ನಡೆಸಲಾಗಿದೆ. ಅವರೆಲ್ಲರೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರ ನೆರವು ನೀಡಲಿದೆ ಎಂದು ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಬಿಪ್ಲಬ್‌ ತಿಳಿಸಿದ್ದಾರೆ.

2019ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ 40, ಜೆಜೆಪಿ 10, ಹರ್ಯಾಣ ಲೋಕಹಿತ ಪಾರ್ಟಿ 1, ಸ್ವತಂತ್ರರು 7, ಕಾಂಗ್ರೆಸ್‌ 30, ಇಂಡಿಯನ್‌ ನ್ಯಾಷನಲ್‌ ಲೋಕದಳ 1 ಸ್ಥಾನಗಳಲ್ಲಿ ಗೆದ್ದಿದ್ದವು. ಬಿಜೆಪಿ ಜತೆಗೆ ಜೆಜೆಪಿ, ಹರ್ಯಾಣ ಲೋಕಹಿತ ಪಾರ್ಟಿ, ಸ್ವತಂತ್ರ ಶಾಸಕರ ಪೈಕಿ ಐವರು ಸೇರಿಕೊಂಡು 57 ಶಾಸಕರ ಬಲದಿಂದ ಸರ್ಕಾರ ರಚನೆ ಮಾಡಿದ್ದವು. ಬಿಜೆಪಿಗೆ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಲು ಸಾಧ್ಯವಾಗದೇ ಇದ್ದುದರಿಂದ ಜೆಜೆಪಿ ಜತೆ ಸೇರಿಕೊಂಡು ಸರ್ಕಾರ ರಚನೆ ಮಾಡಲಾಯಿತು ಮತ್ತು ದುಷ್ಯಂತ್‌ ಚೌಟಾಲರನ್ನು ಡಿಸಿಎಂ ಸ್ಥಾನಕ್ಕೆ ಏರಿಸಲಾಗಿತ್ತು.

ಕೆಲ ದಿನಗಳ ಹಿಂದೆ ಸ್ಥಾನ ಹೊಂದಾಣಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಪ್ಲಬ್‌ ಕುಮಾರ್‌ ದೇಬ್‌ ಬಿಜೆಪಿಗೆ ಅನುಕೂಲವಾಗಲಿ ಎಂದು ಜೆಜೆಪಿ ಬೆಂಬಲ ನೀಡಲಿಲ್ಲ. ಏಕೆಂದರೆ ಅದು ಪ್ರಾದೇಶಿಕ ಪಕ್ಷ ಎಂದು ಹೇಳಿದ್ದರು. 2024 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಡಿಸಿಎಂ ದುಷ್ಯಂತ್‌ ಚೌಟಾಲ “ಸಮಯಕ್ಕೆ ಸರಿಯಾಗಿಯೇ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ, ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಹೇಳಲು ಜ್ಯೋತಿಷಿಯಲ್ಲ. ಕೇವಲ 10 ಕ್ಷೇತ್ರಗಳಲ್ಲಿಯೇ ನಮ್ಮ ಬಲ ಇರುವುದೇ? ಬಿಜೆಪಿಗೆ 40 ಕ್ಷೇತ್ರಗಳಲ್ಲಿ ಸಾಮರ್ಥ್ಯವೇ? ಎಂದು ಪ್ರಶ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next