Advertisement

ಜೆಡಿಎಸ್‌ ಶಾಸಕರಿಂದ ಅಡ್ಡಮತ‌: ಮುಂದುವರಿದ ಗದ್ದಲ

12:18 AM Jun 12, 2022 | Team Udayavani |

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕೃತ ಅಭ್ಯರ್ಥಿಗೆ ಮತ ಹಾಕದೆ ಅಡ್ಡಮತ ಹಾಕಿದ್ದಾರೆನ್ನಲಾದ ಕೋಲಾರದ ಶಾಸಕ ಕೆ. ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ವಿರುದ್ಧ ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರ ಆಕ್ರೋಶ ಮುಂದುವರಿದಿದೆ. ಶುಕ್ರವಾರ ಶ್ರೀನಿವಾಸ ಗೌಡರ ನಿವಾಸದ ಮುಂದೆ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಶನಿವಾರ ಗುಬ್ಬಿಯಲ್ಲಿರುವ ಎಸ್‌.ಆರ್‌. ಶ್ರೀನಿವಾಸ್‌ ನಿವಾಸದ ಮುಂದೆ ಪ್ರಕ್ಷುಬ್ಧ ವಾತಾವರಣವೇ ನಿರ್ಮಾಣವಾಗಿತ್ತು.

Advertisement

ಶ್ರೀನಿವಾಸ್‌ ಮನೆ ಮುಂದೆ ಪ್ರತಿಭಟನೆ
ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಹಾಕದೆ, ಅಡ್ಡ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಗುಬ್ಬಿ ಶಾಸಕ ಎಸ್‌. ಆರ್‌. ಶ್ರೀನಿವಾಸ್‌ ಮನೆಗೆ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿ ದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌.ಸಿ. ಆಂಜಿನಪ್ಪ ನೇತೃತ್ವದಲ್ಲಿ ಜೆಡಿಎಸ್‌ ಕಚೇರಿಯಲ್ಲಿ ಸಭೆ ಸೇರಿದ ಮುಖಂಡರು ಹಾಗೂ ಕಾರ್ಯ ಕರ್ತರು ಶಾಸಕ ಶ್ರೀನಿವಾಸ್‌ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವಂತೆ ಆಗ್ರಹಿಸಿ, ಅನಂತರ ಶಾಸಕರ ಮನೆಗೆ ಮುತ್ತಿಗೆ ಹಾಕಿದರು. ಪ್ರತಿಭಟನಕಾರರು ಶಾಸಕರ ನಿವಾಸದ ಬಳಿ ತೆರಳುತ್ತಿದ್ದಂತೆ, ಶಾಸಕರ ಬೆಂಬಲಿಗರು ಪ್ರತಿಯಾಗಿ ಕುಮಾರಸ್ವಾಮಿಗೆ ಧಿಕ್ಕಾರ ಕೂಗಿದರು.

ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ನುಗ್ಗಿದ ಶಾಸಕರು ಹಾಗೂ ಬೆಂಬಲಿಗರೊಂದಿಗೆ ವಾಗ್ವಾದ ನಡೆಯಿತು. ಪೊಲೀಸರು ಪರಿಸ್ಥಿತಿ ತಿಳಿ ಗೊಳಿಸಲು ಶ್ರಮಪಟ್ಟರು. ಅಡ್ಡ ಮತದಾನದ ಬಗ್ಗೆ ನ್ಯಾಯ ಕೇಳಲು ಬಂದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಾರೆ. ಪ್ರಜಾ ಪ್ರಭುತ್ವದಲ್ಲಿ ನ್ಯಾಯ ಕೇಳುವ ಹಕ್ಕು ಎಲ್ಲರಿಗೂ ಇದೆ, ನೈತಿಕತೆ ಇಲ್ಲದೆ ಶಾಸಕರು ದಬ್ಟಾಳಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ಮುಖಂಡ ಬೆಳ್ಳಿ ಲೋಕೇಶ್‌ ಆರೋಪಿಸಿದರು.

ದ್ರೋಹ ಬಗೆದಿಲ್ಲ: ಎಸ್‌.ಆರ್‌.ಶ್ರೀನಿವಾಸ್‌
ನಾನು ಜೆಡಿಎಸ್‌ ಪಕ್ಷಕ್ಕೆ ದ್ರೋಹ ಬಗೆದಿಲ್ಲ. ಜೆಡಿಎಸ್‌ ಅಭ್ಯರ್ಥಿಗೇ ನಾನು ಮತ ಹಾಕಿದ್ದನ್ನು ಏಜೆಂಟ್‌ ಆಗಿದ್ದ ಎಚ್‌.ಡಿ.ರೇವಣ್ಣ ಅವರಿಗೂ ತೋರಿಸಿದ್ದೇನೆ. ಆದರೆ ತಪ್ಪು ಸಂದೇಶಗಳನ್ನು ನೀಡಿ, ನನ್ನ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಆರೋಪಿಸಿದರು. ಕುಮಾರಸ್ವಾಮಿಗೆ ಪಕ್ಷ ನಡೆಸುವ ಶಕ್ತಿ ಇಲ್ಲ. ಅವನಿಗೆ ಕಚ್ಚೆ, ಬಾಯಿ ಎರಡೂ ಹಿಡಿತದಲ್ಲಿಲ್ಲ. ರಾಜೀನಾಮೆ ನೀಡಲು ನಾನು ಆತನಿಂದ ಗೆದ್ದಿಲ್ಲ. ನಾನು ಶಾಸಕನಾಗಿದ್ದೇ ಪಕ್ಷೇತರ ಅಭ್ಯರ್ಥಿಯಾಗಿ. ಮೊದಲು ಕುಮಾರಸ್ವಾಮಿ ರಾಜೀನಾಮೆ ನೀಡಲಿ ಎಂದರು. ಅವರು ರಾಜೀನಾಮೆ ನೀಡದಿದ್ದರೆ ಪಕ್ಷವನ್ನು ವಿಸರ್ಜಿಸಲಿ. ಇದರಿಂದ ಯಾರಿಗೂ ಉಪಯೋಗವಿಲ್ಲ ಎಂದ ಅವರು, ನಾನು ಇಲ್ಲಿಯವರೆಗೆ ಸುಮ್ಮನಿದ್ದೆ. ನನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದರೆ ನಾನು ಸುಮ್ಮನೆ ಕೂರುವವನಲ್ಲ. ಇವರ ಜಾತಕವನ್ನು ಮುಂದೆ ಬಿಚ್ಚಿಡುತ್ತೇನೆ ಎಂದು ಹೇಳಿದರು.

Advertisement

ನನ್ನನ್ನು ಕೇಳಲು ಕುಮಾರಸ್ವಾಮಿಗೆ ಏನು ಹಕ್ಕಿದೆ?
ಕೋಲಾರ: ಜೆಡಿಎಸ್‌ನಿಂದ ನನ್ನನ್ನು 7 ತಿಂಗಳ ಹಿಂದೆಯೇ ಉಚ್ಚಾಟನೆ ಮಾಡಿರುವುದಾಗಿ ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದ್ದಾರೆ. ಹೀಗಿರುವಾಗ ರಾಜ್ಯಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದ್ದೇನೆ. ನಾನು ಯಾರಿಗೆ ಮತ ಹಾಕಿದರೆ ಅವರಿಗೇನು? ನನ್ನನ್ನು ಕೇಳಲು ಕುಮಾರಸ್ವಾಮಿ ಮತ್ತು ಜೆಡಿಎಸ್‌ ಮುಖಂಡರಿಗೆ ಯಾವ ಹಕ್ಕಿದೆ ಎಂದು ಶಾಸಕ ಕೆ.ಶ್ರೀನಿವಾಸ ಗೌಡ ಪ್ರಶ್ನಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಹೀಗಿರುವಾಗ ನಾನು ಕಾಂಗ್ರೆಸ್‌, ಬಿಜೆಪಿ ಸೇರಿ ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ಅದು ನನ್ನಿಷ್ಟ. ಉಚ್ಚಾಟನೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆಯೇ ಹೊರತು ನನಗೆ ಆ ಪತ್ರ ಈವರೆಗೂ ಸಿಕ್ಕಿಲ್ಲ. ಕೊಟ್ಟರೆ ಕೊಡಲಿ ಇಲ್ಲದಿದ್ದರೆ ಇಟ್ಟುಕೊಂಡು ಪೂಜೆ ಮಾಡಲಿ. ಇದನ್ನೆಲ್ಲ ಅರಿಯದೆ ಜೆಡಿಎಸ್‌ನವರು ಪ್ರತಿಭಟನೆ ಮಾಡಿರುವುದರಲ್ಲಿ ಅರ್ಥವೇ ಇಲ್ಲ ಎಂದರು.

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಜಯ ಗಳಿಸಲು ಜೆಡಿಎಸ್‌ ಕಾರಣವಾಗಿದೆ. ಮೊದಲು ನಾವು ಅಭ್ಯರ್ಥಿಯನ್ನು ಹಾಕಿದೆವು. ಬಿಜೆಪಿ ಗೆಲ್ಲಬಾರದು ಎನ್ನುವುದಾಗಿದ್ದರೆ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದಿತ್ತು.
– ಸಿದ್ದರಾಮಯ್ಯ, ವಿಪಕ್ಷ ನಾಯಕ

ನಾವು ಯಾವುದೇ ರಾಜಕೀಯ ಪಕ್ಷವನ್ನು ಎ ಅಥವಾ ಬಿ ಎಂದು ಇಟ್ಟುಕೊಂಡಿಲ್ಲ. ನಮ್ಮದು ಏನಿದ್ದರೂ ಜನರ ಜತೆಗೆ ಸಹಭಾಗಿತ್ವ ಇರುತ್ತದೆ. ರಾಜ್ಯಸಭಾ ಚುನಾವಣೆಯಲ್ಲಿ ಕೆಲವು ಮಂದಿ ಕಾಂಗ್ರೆಸ್‌, ಜೆಡಿಎಸ್‌ನವರು ನಮಗೆ ಬೆಂಬಲ ಕೊಟ್ಟಿದ್ದು ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ.
-ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next