Advertisement

ಉತ್ತರ ಕನ್ನಡ ಬಿಜೆಪಿಯಲ್ಲೀಗ ಅಸಮಾಧಾನದ ಹೊಗೆ 

04:16 PM Apr 18, 2018 | Team Udayavani |

ಭಟ್ಕಳ: ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಅಂತಿಮಗೊಂಡ ಕ್ಷಣದಿಂದ ಚುನಾವಣಾ ರಂಗ ಕಾವೇರಿದ್ದು ಅಸಮಾಧಾನದ ಕಿಡಿ ಬೆಂಕಿ ಹೊತ್ತುವ ಎಲ್ಲಾ ಸಾಧ್ಯತೆಗಳೂ ಇವೆ. ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಬಿಜೆಪಿ ಶತಾಯ ಗತಾಯ ಭಟ್ಕಳ ಕ್ಷೇತ್ರವನ್ನು ಗೆಲ್ಲಬೇಕೆನ್ನುವ ಗುರಿಯೊಂದಿಗೆ ಯುವ ನಾಯಕ ಸುನಿಲ್‌ ನಾಯ್ಕರಿಗೆ ಟಿಕೆಟ್‌ ನೀಡಿದ್ದು ಮೂಲ ಹಿಂದೂ ಸಂಘಟಕರಿಗೆ ಹಾಗೂ ಕಾರ್ಯಕರ್ತರಿಗೆ ಇರುಸು ಮುರುಸಾಗಿದೆ.

Advertisement

ಟಿಕೆಟ್‌ ಘೋಷಣೆಯಾಗುತ್ತಲೇ ಬಿಜೆಪಿಯ ಒಂದು ಗುಂಪು ಭಾರೀ ವಿರೋಧ ವ್ಯಕ್ತಮಾಡಿದ್ದು ಚುನಾವಣೆಯಲ್ಲಿ ತಟಸ್ಥ ಇಲ್ಲವೇ ಬೇರೆ ಆಭ್ಯರ್ಥಿ ಬೆಂಬಲಿಸುವ ಕುರಿತು ಚಿಂತಿಸಿದೆ ಎನ್ನಲಾಗಿದೆ.

ಬಿಜೆಪಿಯಲ್ಲಿದ್ದುಕೊಂಡು ಹಿಂದೂ ಸಂಘಟನೆಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿ ಹೋರಾಟಗಳಲ್ಲಿ ಜೈಲು ವಾಸ ಕೂಡಾ ಅನುಭವಿಸಿದವರನ್ನು ಕಡೆಗಣಿಸಿ, ವಲಸೆ ಬಂದವರಿಗೆ ಟಿಕೆಟ್‌ ಘೋಷಣೆ ಮಾಡಿದ್ದು ತೀವ್ರ ವಿರೋಧಕ್ಕೆ ಕಾರಣ ಎನ್ನಲಾಗಿದೆ. ಈ ಹಿಂದಿನಿಂದಲೂ ಬಿಜೆಪಿಯಲ್ಲಿ ಹೋರಾಟಗಾರರನ್ನು ಕಡೆಗಣಿಸಲಾಗುತ್ತಿದೆ. ಭಟ್ಕಳ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಕಳೆದ 1993ರಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದ ಗೋವಿಂದ ನಾಯ್ಕರಿಗೆ ಕಳೆದ ಬಾರಿ ಟಿಕೆಟ್‌ ನೀಡಿದ್ದು, ಕೆಜೆಪಿಯಿಂದಾಗಿ ಗೆಲ್ಲುವ ಅವಕಾಶ ತಪ್ಪಿತ್ತು. ಈ ಬಾರಿ ಬಿಜೆಪಿಯಿಂದ ಅವರಿಗೆ ಟಿಕೆಟ್‌ ನೀಡಿದ್ದರೆ ಗೆಲ್ಲುವ ಅವಕಾಶ ಹೆಚ್ಚಿತ್ತು ಎನ್ನಲಾಗುತ್ತಿದೆ. ಹಿಂದಿನಿಂದಲೂ ಮೃಧು ಸ್ವಭಾವದ ಹಿಂದುತ್ವದ ಕುರಿತು ಹಲವು ಹೋರಾಟ ಮಾಡಿದ್ದಲ್ಲದೇ ಕ್ರಿಮಿನಲ್‌ ಪ್ರಕರಣವನ್ನು ಕೂಡಾ ಎದುರಿಸಿದ್ದ ಜೆ.ಡಿ. ನಾಯ್ಕರಿಗೆ ಟಿಕೆಟ ನೀಡಿದ್ದರೆ ತಮ್ಮದೇನು ತಕರಾರು ಇರಲಿಲ್ಲ. ಯಾವುದೇ ಹೊರಾಟದ ಹಿನ್ನೆಲೆಯಿಲ್ಲದ ವ್ಯಕ್ತಿಗೆ ಟಿಕೆಟ್‌ ಘೋಷಿಸಿದ್ದು ಸರಿಯಲ್ಲ ಎನ್ನುವುದು ಆವರ ವಾದ.

ಮಾಜಿ ಶಾಸಕ ಜೆ.ಡಿ. ನಾಯ್ಕರ ಹೆಸರು ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲನೆಯದಾಗಿತ್ತು ಎನ್ನುವುದು ಕಳೆದ ಕೆಲವು ದಿನಗಳಿಂದ ಕೇಳಿ ಬಂದಿದ್ದರೂ ಕೊನೆ ಘಳಿಗೆಯಲ್ಲಿ ಅವರಿಗೆ ಟಿಕೆಟ್‌ ತಪ್ಪಿಸಲಾಯಿತು. ಎರಡು ಬಾರಿ ಶಾಸಕರಾಗಿ ಅತ್ಯಂತ ಸರಳ, ಸಜ್ಜನರಾಗಿದ್ದ ಅವರು ಎಲ್ಲ ಪಕ್ಷದವರಲ್ಲಿಯೂ ಉತ್ತಮ ಸಂಬಂಧವನ್ನು ಇಟ್ಟುಕೊಂಡು ಬಂದವರು. ಎಲ್ಲ ಸಮಾಜದವರೊಂದಿಗೂ ತಮ್ಮ ಮೃದು ಮಾತುಗಳಿಂದ ಸಂಪರ್ಕ ಸಾಧಿಸಿದ್ದ ಅವರಿಗೆ ಈ ಬಾರಿಯ ಟಿಕೆಟ್‌ ಖಚಿತ ಎನ್ನುವುದು ತಿಳಿದು ಬಂದಿತ್ತು. ಆದರೆ ಕೊನೆಯ ಹಂತದಲ್ಲಿ ಅವರಿಗೆ ಟಿಕೆಟ್‌ ತಪ್ಪಿದ್ದು ಕಾರಣ ಮಾತ್ರ ನಿಗೂಢವಾಗಿದೆ.

ಕಳೆದ ಬಾರಿ ಸೋತಿದ್ದ ಅವರಿಗೆ ಈ ಬಾರಿ ಕ್ಷೇತ್ರದಲ್ಲಿ ಅನುಕಂಪದ ಮತಗಳು ಬೀಳುತ್ತವೆ ಎನ್ನುವ ಕಾರ್ಯಕರ್ತರ ಲೆಕ್ಕಾಚಾರ ತಲೆಕೆಳಗಾಗಿದೆ. ಟಿಕೆಟ್‌ ದೊರೆಯುತ್ತದೆ ಎನ್ನುವ ವಿಶ್ವಾಸದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಜೆ.ಡಿ. ನಾಯ್ಕ ಹಾಗೂ ಅವರ ಅಭಿಮಾನಿಗಳು ಈಗ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಬಿಜೆಪಿಯಲ್ಲಿಯೇ ಇರುವಂತೆ ಹಿರಿಯ ನಾಯಕರು ಒತ್ತಡ ಹೇರುತ್ತಿರುವಂತೆಯೇ, ಬೇರೆ ಬೇರೆ ಪಕ್ಷದ ಪ್ರಮುಖರು ಸಂಪರ್ಕ ಮಾಡಿ ತಮ್ಮ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದ್ದು ಜೆ.ಡಿ.ನಾಯ್ಕ ಅವರು ಮಾತ್ರ ತಮ್ಮ ನಿರ್ಧಾರ ಕಾರ್ಯಕರ್ತರ ಅಣತಿಯಂತೆಯೇ ಇರುತ್ತದೆ ಎನ್ನುತ್ತಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಟಿಕೆಟ್‌ ನೀಡುತ್ತಾರೆಂದು ಬಿಜೆಪಿ ಸೇರಿಲ್ಲವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನಿಮಗೇ ಟಿಕೆಟ್‌ ನೀಡುತ್ತೇವೆ. ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ಸೂಚನೆ ನೀಡಲಾಗಿತ್ತು. ಆದರೆ ಟಿಕೆಟ್‌ ತಪ್ಪಿಸಲು ಕಾರಣಗಳೇ ಇಲ್ಲವಾದರೂ ತಪ್ಪಿಸಲಾಗಿದೆ ಎಂದು ದೂರುತ್ತಾರೆ.

ಯಾವುದೇ ಪಕ್ಷದಿಂದಾಗಲೀ, ಸ್ವತಂತ್ರವಾಗಿಯಾಗಲೀ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳುವ ಅವರು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಬೇಕು ಎನ್ನುತ್ತಾರೆ.

ಹಳಿಯಾಳದಲ್ಲಿ ಬಿಜೆಪಿ ಬಂಡಾಯ

ಹಳಿಯಾಳ: ಹಳಿಯಾಳ ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠಾ ಸಮುದಾಯದ ತಮಗೆ ಈ ಬಾರಿಯ ವಿಧಾನ ಸಭಾ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಮೊಸ ಮಾಡಿದ್ದು ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮುಖಂಡ ಹಾಗೂ ಮಾಜಿ ಎಸ್ಪಿ ಜಿ.ಆರ್‌. ಪಾಟೀಲ್‌ ಹೇಳಿದರು.

ಪೊಲೀಸ್‌ ಹುದ್ದೆ ನಿವೃತ್ತಿ ಬಳಿಕ ಕಳೆದ ಒಂದು ವರ್ಷದ ಹಿಂದೆ ಮೊದಿಜಿ ಕಾರ್ಯ ಮೆಚ್ಚಿ ಬಿಜೆಪಿಗೆ ಸೇರಿದ್ದ ತಾವು ಕ್ಷೇತ್ರದಲ್ಲಿ ಬಹುಸಂಖ್ಯಾತರಿರುವ ಮರಾಠಾ ಸಮುದಾಯ ಬೆಂಬಲಿಸುತ್ತಿದ್ದು, ಈ ಬಾರಿಯ ವಿಧಾನಸಭಾ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದೆ. ಅಲ್ಲದೇ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮರಾಠಾ ಸಮುದಾಯದವರಿಗೆ ಟಿಕೆಟ್‌ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೇ ಸಂಘಟನೆ ಮಾಡುವಂತೆ ಹೇಳಿದ್ದರು. ಅದರಂತೆ ತಾವು ನಡೆದುಕೊಂಡಿದ್ದರು ಕೊಟ್ಟ ಮಾತಿಗೆ ತಪ್ಪಿರುವ ಬಿಜೆಪಿಯವರು ಕಳಂಕಿತರಿಗೆ ಟಿಕೆಟ್‌ ನೀಡಿದ್ದಾರೆಂದು ಆಕ್ರೊಶ ವ್ಯಕ್ತಪಡಿಸಿದರು.

ಬಿಜೆಪಿ 2ನೇ ಪಟ್ಟಿಯಲ್ಲಿ ಹಳಿಯಾಳ ಕ್ಷೇತ್ರಕ್ಕೆ ಮಾಜಿ ಶಾಸಕ ಸುನೀಲ್‌ ಹೆಗಡೆ ಹೆಸರು ಘೊಷಣೆಯಾಗುತ್ತಿದ್ದಂತೆ ಅಸಮಾಧಾನಗೊಂಡ ಅವರು ಹಾಗೂ ಅಭಿಮಾನಿಗಳು ಮಂಗಳವಾರ ಪಟ್ಟಣದ ಮರಾಠಾ ಭವನದಲ್ಲಿ ಸಭೆ ಸೇರಿ ಬಹುಸಂಖ್ಯಾತ ನಿರ್ಣಾಯಕ ಮತದಾರರಾಗಿರುವ ಮರಾಠರಿಗೆ ಪ್ರಾತಿನಿಧ್ಯ ನೀಡದ ಬಿಜೆಪಿ ನಿಲುವನ್ನು ಖಂಡಿಸುವುದಾಗಿ ಹೇಳಿದರು.

ಮ್ಯಾಚ್‌ ಫಿಕ್ಸಿಂಗ್‌: ಹಿರಿಯ ಮುಖಂಡ ಎಸ್‌.ಕೆ. ಗೌಡ ಮಾತನಾಡಿ ಬಿಜೆಪಿ ಸಿದ್ಧಾಂತಗಳನ್ನು ಗಾಳಿಗೆ ತೂರಿ ಕಳಂಕಿತರಿಗೆ ಟಿಕೆಟ್‌ ನೀಡಿದೆ ಹಾಗೂ ಹಳಿಯಾಳ ಕ್ಷೇತ್ರದಲ್ಲಿ ರಾಜಕೀಯ ಮ್ಯಾಚ್‌ ಫಿಕ್ಸಿಂಗ್‌ ಆಗಿದ್ದು ಒಬ್ಬ ಬ್ರಾಹ್ಮಣ ಆರ್‌.ವಿ. ದೇಶಪಾಂಡೆ ಅವರಿಗೆ ಅನುಕೂಲ ಮಾಡಿಕೊಡಲು ಇನ್ನೊಬ್ಬ ಬ್ರಾಹ್ಮಣ ಸುನೀಲ್‌ ಹೆಗಡೆಗೆ ಟಿಕೆಟ್‌ ನೀಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಇನ್ನೊಬ್ಬ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ತಾಲೂಕಾಧ್ಯಕ್ಷ ಎಲ್‌.ಎಸ್‌.ಅರಿಶೀನಗೇರಿ ಮಾತನಾಡಿ ಮರಾಠರು ಸೈನಿಕರಾಗಿ ಕಾವಲು ಕಾಯಬೇಕು. ಆದರೆ ಅವರಿಗೆ ಅಧಿಕಾರ ನೀಡುವುದಿಲ್ಲ. ಮರಾಠಾ ಪ್ರಾಬಲ್ಯವನ್ನು ಕಡೆಗಣಿಸಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುವುದು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಳಿಯಾಳಕ್ಕೆ ಬಂದರೇ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದರು.

ಹಳಿಯಾಳ ಬಿಜೆಪಿಯಲ್ಲಿ ಮೂರು ತಾಲೂಕಾಧ್ಯಕ್ಷರಾದ ಬಸವರಾಜ ಕಳಶೆಟ್ಟಿ, ಮಾಂಜ್ರೆಕರ ಹಾಗೂ ಶೀವಾಜಿ ನರಸಾನಿ ಅವರು ಒಬ್ಬ ವ್ಯಕ್ತಿ ಪರವಾಗಿ ಮಾತ್ರ ಕೆಲಸ ಮಾಡುತ್ತಿರುವುದು, ಅವರ ವಿರುದ್ಧ ತಾವು ಹೈಕಮಾಂಡಗೆ ತಿಳಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆಪಾದಿಸಿದರು. ಮರಾಠಾ ಸಮಾಜದ ಹಲವರ ಹಾಗೂ ಅಭಿಮಾನಿಗಳ ಆಗ್ರಹದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಾವುದೇ ಪಕ್ಷಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಜಿ.ಆರ್‌. ಪಾಟೀಲ್‌ ಸ್ಪಷ್ಟಪಡಿಸಿದರು. ಮುಖಂಡರಾದ ಲೀನಾ ಪಾಟೀಲ್‌, ಪ್ರಕಾಶ ಕಮ್ಮಾರ, ಚಂದ್ರಕಾಂತ ಇಂಗ್ರೊಳ್ಳಿ, ಅಶೋಕ ಶರಣೊಳಕರ, ಬಾಲಕೃಷ್ಣ ಢೇμ, ರಾಘವೇಂದ್ರ ನಾಯ್ಕ, ಶಾಂತಾರಾಮ ಸೂರ್ಯವಂಶಿ, ಶಿವಾಜಿ ಜಾಧವ ಇತರರು ಇದ್ದರು.

ಪಾಟೀಲ್‌ ಆಯ್ಕೆಗೆ ಮತ್ತೂಬ್ಬ ಪಾಟೀಲ್‌ ಅಪಸ್ವರ

ಶಿರಸಿ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಭಿನ್ನಮತ ಸ್ಫೋಟಗೊಂಡಿದೆ. ಮಾಜಿ ಶಾಸಕ ವಿ.ಎಸ್‌. ಪಾಟೀಲ್‌ಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಇನ್ನೊಬ್ಬ ಆಕಾಂಕ್ಷಿ ಎಲ್‌.ಟಿ.ಪಾಟೀಲ್‌ ಹಾಗೂ ಬೆಂಬಲಿಗರು ಮಂಗಳವಾರ ನಗರದಲ್ಲಿ ಅಸಮಾಧಾನ ವ¤ಕ್ತಪಡಿಸಿದ್ದಾರೆ. ಕ್ಷೇತ್ರದ ಅಭ್ಯರ್ಥಿ ಬದಲಾಯಿಸುವಂತೆ ಹಕ್ಕೊತ್ತಾಯ ಮಾಡಿದ್ದಾರೆ.

ಇಲ್ಲಿನ ಕೆಎಚ್‌ಬಿ ಕಾಲೋನಿಯಲ್ಲಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಬೆಂಬಲಿಗರೊಂದಿಗೆ ಭೇಟಿ ಮಾಡಲು ಆಗಮಿಸಿದಾಗ ಅಭ್ಯರ್ಥಿ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಭಿನ್ನಮತವನ್ನು ಬಹಿರಂಗವಾಗಿಯೇ ಸ್ಫೋಟಿಸಿದರು.

ಎಲ್‌.ಟಿ. ಪಾಟೀಲ ಮಾತನಾಡಿ, ಬಿಜೆಪಿ ನಡೆಸಿದ ಸರ್ವೆಯಲ್ಲಿ ತನ್ನದೇ ಮೊದಲ ಹೆಸರಿದ್ದರೂ ಇದ್ದಕ್ಕಿದ್ದಂತೆ ಟಿಕೆಟ್‌ ನೀಡಿಕೆಯಲ್ಲಿ ಬದಲಾವಣೆ ಮಾಡಲಾಗಿದೆ. ಕ್ಷೇತ್ರದ ಜನರ ಅಪೇಕ್ಷೆ ಇದ್ದರೂ ತನಗೆ ಟಿಕೆಟ್‌ ವಂಚಿಸಲಾಗಿದೆ. ಇದು ಸರಿಯಲ್ಲ. ಪರಾಜಿತ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದು ಸರಿಯಲ್ಲ ಎಂದು ಏರು ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್‌ ಆಕಾಂಕ್ಷಿ ತಾನಾಗಿದ್ದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಅಪೇಕ್ಷೆಯೂ ಆಗಿತ್ತು ಎಂದೂ ಹೇಳಿದ ಅವರು, ನಮಗೆ ಮೋಸ ಆಗಿದೆ. ಇದು ಹೇಗಾಯ್ತು ತಿಳಿದಿಲ್ಲ. ಕಳೆದ ಮೂರು ಅವಧಿಗೆ ಜಿಪಂ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅದರಂತೆ ಕ್ಷೇತ್ರದಲ್ಲಿ ಕಳೆದ ವರ್ಷದಿಂದ ಸಂಘಟನೆಯಲ್ಲಿ ತೊಡಗಿಕೊಂಡು ಜನರ ವಿಶ್ವಾಸ ಗಳಿಸಿದ್ದೇನೆ. ಪಕ್ಷದ ಪ್ರಮುಖರು ಸಹ ಅಭ್ಯರ್ಥಿಯಾಗಿಸುವ ಭರವಸೆ ಸಹ ನೀಡಿದ್ದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರೆಲ್ಲ ಸೇರಿ ಮುಂದೆ ಯಾವ ಹೆಜ್ಜೆ ಇಡಬೇಕು ಎಂಬ ನಿರ್ಧಾರ ಕೈಗೊಳ್ಳುತ್ತೇವೆ ಎಂದೂ ಹೇಳಿದರು. ಮುಂಡಗೋಡ ತಾಲೂಕು ಅಧ್ಯಕ್ಷ ಗುಡ್ಡಪ್ಪ ಕಾತೂರು, ಗೋಪಾಲಕೃಷ್ಣ ಹಂಡ್ರಮನೆ ಇತರರು ಇದ್ದರು.

ಬಿಜೆಪಿ ಬಂಡಾಯಿಗರ ಪ್ರತಿಭಟನೆ
ಯಲ್ಲಾಪುರ: ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟನ್ನು ಬೇರೆಯವರಿಗೆ ಕೊಡಬೇಕು. ವಿ.ಎಸ್‌. ಪಾಟೀಲರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿ ನಗರದ ಬಸ್‌ ನಿಲ್ದಾಣದಲ್ಲಿ ಟಾಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಯಿತು. ಟಿಕೆಟ್‌ ಆಕಾಂಕ್ಷಿ ಎಲ್‌.ಟಿ. ಪಾಟಿಲ್‌ ಮುಂಡಗೋಡ ತಾಲೂಕಾಧ್ಯಕ್ಷ ಗುಡ್ಡಪ್ಪ ಕಾತೂರ ಲೇಸಮ ಥಾಮಸ್‌, ವಿಠಲ್‌ ಬಾಳೆಂಬರ್‌, ಚಂದ್ರಕಾಂತ ಪಾಟೀಲ್‌ ಮುಂತಾದವರು ಇದರು. ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಭಟ್ಟ, ಪ್ರಮೋದ ಹೆಗಡೆಯವರ ಸಲುವಾಗಿ ಕೆಲ ಹೊತ್ತು ಕಾದರು. ಕೊನೆಗೂ ಅವರು ಪ್ರತಿಭಟನೆಗೆ ಬಾರದೆ ಪರಾರಿಯಾಗಿದ್ದರು. ಪ್ರತಿಭಟನೆ ನೋಡಲು ಸುತ್ತಮುತ್ತ ಬೇರೆ ಬೇರೆ ಪಕ್ಷದವರು ಸೇರಿದಂತೆ ಸಾರ್ವಜನಿಕರು ಜಮಾಯಿಸಿದ್ದರು.

ಸಂಸದರ ಮನೆ ಎದುರು ಪ್ರತಿಭಟನೆ 

ಯಲ್ಲಾಪುರ: ಶಿರಸಿಯಲ್ಲಿ ಸಂಸದರ ಮನೆ ಎದುರು ಎಲ್‌.ಟಿ.ಪಾಟೀಲರಿಗೆ ಟಿಕೇಟ್‌ ನೀಡುವಂತೆ ಆಗ್ರಹಿಸಿ ಬುಧವಾರ ಕೆಲವರು ನಡೆಸಿದ ಪ್ರತಿಭಟನೆಯಲ್ಲಿ ಯಲ್ಲಾಪುರ ತಾಲೂಕಿನ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಹಂಡ್ರಮನೆ, ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಹಾಗೂ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾದ ಎಂ.ಕೆ. ಭಟ್ಟ ಪಾಲ್ಗೊಳ್ಳುವ ಮೂಲಕ ಅ ಧಿಕೃತ ಅಭ್ಯರ್ಥಿಯನ್ನು ವಿರೋಧಿಸಿ ಪಕ್ಷ ವಿರೋಧವನ್ನು ಪ್ರಕಟಿಸಿದರು.

ತಾಲೂಕಾಧ್ಯಕ್ಷರೇ ಸ್ವತಃ ಉಳಿದವರನ್ನೂ ಕರೆದುಕೊಂಡು ಹೋಗುವ ಮೂಲಕ ತಾಲೂಕಿನಲ್ಲಿಯೂ ಬಂಡಾಯ ಹುಟ್ಟುಹಾಕಿದ ಕೀರ್ತಿಗೆ ಪಾತ್ರರಾಗಿದ್ದಾರೆ. ನಂತರ ದೂರವಾಣಿಯಲ್ಲಿ ಸಂಸದರಿಂದ ಉಗಿಸಿಕೊಂಡ ಬಳಿಕ ಅಲ್ಲಿಂದ ವಾಪಸ್ಸಾಗಿ ಸಂಜೆ ನಗರದ ರೆಸಾರ್ಟ್‌ ಒಂದರಲ್ಲಿ ಎಲ್‌.ಟಿ. ಪಾಟೀಲ್‌ ಪರ ಗುಂಪಿನ ಸಭೆಯೊಂದನ್ನು ಏರ್ಪಡಿಸಿದ್ದರು. ಇದಕ್ಕೆ ಸಂಸದರು ಬರುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಸಂಸದರು ಬಾರದ ಕಾರಣ ಇವರು ಕಾದು ಸುಸ್ತಾಗಿ ವಾಪಸ್ಸಾದ ಘಟನೆಯೂ ನಡೆಯಿತು.

ಪ್ರಮೋದ ಯೂ ಟರ್ನ್

ಎಲ್‌.ಟಿ. ಪಾಟೀಲರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ನಂತರ ಜಾಲತಾಣಗಳಲ್ಲಿ ಘೋಷಿತ ಅಭ್ಯರ್ಥಿ ಪರವಾಗಿ ಹೇಳಿಕೆ ನೀಡುವ
ಮೂಲಕ ಯೂ ಟರ್ನ್ ಹೊಡೆದಿದ್ದು ಮತ್ತೂ ಅಚ್ಚರಿ ಮೂಡಿಸಿದ್ದು ಬನವಾಸಿ ಮಧುಕೇಶ್ವರನ ಎದುರು ಮಾಡಿದ ಆಣೆಗೆ ಬದ್ಧರಾಗಿ ಎಲ್ಲರೂ ಅಭ್ಯರ್ಥಿ ಪರವಾಗಿ ಕೆಲಸಮಾಡಿ ಬಿಜೆಪಿ ಗೆಲ್ಲಿಸಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next