Advertisement

ವಿವಾದದ ಸ್ವರೂಪ ಪಡೆದ ಕೆ-ಶಿಪ್‌ ಕಚೇರಿ ಸ್ಥಳಾಂತರ

06:00 AM Aug 11, 2018 | Team Udayavani |

ಬೆಂಗಳೂರು: ಬೆಳಗಾವಿಯಲ್ಲಿದ್ದ ಕೆ-ಶಿಪ್‌ ವಿಭಾಗದ ಕಚೇರಿಯನ್ನು ಹಾಸನಕ್ಕೆ ಸ್ಥಳಾಂತರ ಮಾಡಿರುವ ವಿಚಾರ ವಿವಾದದ ಸ್ವರೂಪ ಪಡೆದಿದೆ.

Advertisement

ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಆಗಿದೆ ಎಂದು ಹೋರಾಟ ನಡೆದಾಗ ಬೆಳಗಾವಿ ಎರಡನೇ ರಾಜಧಾನಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ, ಇದೀಗ ಬೆಳಗಾವಿಯಲ್ಲಿದ್ದ ಕೆ-ಶಿಪ್‌ ವಿಭಾಗದ ಕಚೇರಿ ದಿಢೀರ್‌ ಹಾಸನಕ್ಕೆ ಸ್ಥಳಾಂತರ ಮಾಡಿರುವುದು ಆ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೆ-ಶಿಪ್‌ ವಿಭಾಗದ ಕಚೇರಿ ಸ್ಥಳಾಂತರ ವಿಚಾರ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ಬಿಜೆಪಿ ಕೈಗೆ ಹೊಸ ಅಸ್ತ್ರ ಕೊಟ್ಟಂತಾಗಿದೆ.

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ  ಈ ನಿರ್ಧಾರಕ್ಕೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ ನಾಯಕರದೂ ವಿರೋಧ ವ್ಯಕ್ತವಾಗಿದೆ.

ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡದೆ ಇಂತಹ ಪ್ರಮುಖ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ. ಇದರಿಂದ ಉತ್ತರ ಕರ್ನಾಟಕ ಭಾಗದ ಜನರಿಗೆ ಕಾಂಗ್ರೆಸ್‌ ಬಗ್ಗೆಯೂ ಆಕ್ರೋಶ ಹೆಚ್ಚಾಗಲಿದೆ. ಇದು ನಗರ ಸ್ಥಳೀಯ ಸಂಸ್ಥೆ ಹಾಗೂ ಲೋಕಸಭೆ ಚುನಾವಣೆ ಮೇಲೂ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಈ ಮಧ್ಯೆ, ಹಾಸನ ಎರಡನೇ ರಾಜಧಾನಿ ಮಾಡುವ ಹುನ್ನಾರ ಎಂದು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ.

ಚರ್ಚೆ ಮಾಡ್ತೇವೆ
ಈ ಕುರಿತು ಪ್ರತಿಕ್ರಿಯಿಸಿರುವ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರವಿದೆ. ಸಮನ್ವಯದಿಂದ ಸರ್ಕಾರ ನಡೆಯುತ್ತಿದೆ. ನಾವು ಯಾವುದೇ ವಿಷಯದ ಕುರಿತು ಎಲ್ಲವನ್ನೂ ಬಹಿರಂಗ ಚರ್ಚೆ ಮಾಡಲು ಆಗುವುದಿಲ್ಲ. ಕೆ-ಶಿಪ್‌ ವಿಭಾಗದ ಕಚೇರಿ ಸ್ಥಳಾಂತರ ವಿಷಯವನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ಮಾಡುವೆ ಎಂದು ಹೇಳಿದ್ದಾರೆ.

ಸಚಿವ ರೇವಣ್ಣ ಅವರು ಕೆಲವು ಕಚೇರಿಗಳನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಚರ್ಚಿಸುವುದಿಲ್ಲ ಎಂದು ತಿಳಿಸಿದ್ದಾರೆ.

ರೇವಣ್ಣ ಸಮರ್ಥನೆ
ಇನ್ನು ಸ್ಥಳಾಂತರ ಸಮರ್ಥನೆ ಮಾಡಿಕೊಂಡಿರುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಕೆಲಸವಿಲ್ಲದಿದ್ದರೂ ಬೆಳಗಾವಿಯಲ್ಲಿ ಕಚೇರಿ ಉಳಿಸಿ ಇಂಜಿನಿಯರ್‌, ಸಿಬ್ಬಂದಿಗೆ ಪುಕ್ಕಟೆ ಸಂಬಳ ಕೊಡಬೇಕಿತ್ತೆ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ 619 ಕೋಟಿ ರೂ. ಕಾಮಗಾರಿಗಳು ಪೂರ್ಣಗೊಂಡಿದ್ದರಿಂದ ಇಂಜಿನಿಯರುಗಳು, ಸಿಬ್ಬಂದಿ ಕೆಲಸವಿಲ್ಲದೆ ಕುಳಿತ್ತಿದ್ದರು. ಈಗ ಹಾಸನ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಹಾಗಾಗಿ ಬೆಳಗಾವಿಯಿಂದ ಹಾಸನಕ್ಕೆ ಕಚೇರಿಯನ್ನು ಶಿಫ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ವಿಶ್ವಬ್ಯಾಂಕ್‌ ನೆರವಿನಿಂದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ( ಕೆ – ಶಿಪ್‌) ಅಡಿ ಕೈಗೆತ್ತಿಕೊಂಡಿದ್ದ ಕಾಮಗಾರಿಗಳು ಮುಗಿದಿವೆ. ಬಸವನ ಬಾಗೇವಾಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೇವಲ ನಿರ್ವಹಣೆ ಕಾಮಗಾರಿಗಳು ನಡೆಯುತ್ತಿವೆ. ಅಲ್ಲಿ ಉಪ ವಿಭಾಗ ಕಚೇರಿಯ ಇಂಜಿನಿಯರ್‌ ಮತ್ತು ಸಿಬ್ಬಂದಿಗೆ ಕೆಲಸವಿರಲಿಲ್ಲ. ಕಾರ್ಯ ಒತ್ತಡ ಇರುವ ಕೆಡೆಗೆ ವಿಭಾಗ ಕಚೇರಿಯನ್ನು ಸ್ಥಳಾಂತರ  ಮಾಡಬಹುದ ಎಂದು 6 ತಿಂಗಳ ಹಿಂದೆಯೇ ಕೆ -ಶಿಪ್‌ ಯೋಜನಾ ನಿರ್ದೇಶಕರು ವರದಿ ಸಲ್ಲಿಸಿದ್ದರು. ಅಂದಿನಿಂದ ನಡೆದಿದ್ದ ಪ್ರಕ್ರಿಯೆ ಈಗ ಅನುಷ್ಠಾನವಾಗಿದೆ. ಈಗ ಹಾಸನ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ 3000 ಕೋಟಿ ರೂ. ಅಂದಾಜಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗುತ್ತಿವೆ. ಹಾಗಾಗಿ ಹಾಸನಕ್ಕೆ ಕೆ-ಶಿಪ್‌ ವಿಭಾಗೀಯ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಾಸನಕ್ಕೆ ವರ್ಗಾವಣೆ ಮಾಡಿಲ್ಲ. ಕಚೇರಿಗಳ ಸ್ಥಳಾಂತರ ಮಾಡಿದ್ದಕ್ಕೆ ವಿರೋಧವೇಕೆ ? ಅಲ್ಲಿ ಕಾಮಗಾರಿಗಳು ನಡೆದಿದ್ದರೂ ಬೆಳಗಾವಿ ಮತ್ತು ಬಸವನ ಬಾಗೇವಾಡಿಯಲ್ಲಿ ವಿಭಾಗೀಯ ಮತ್ತು ಉಪ ವಿಭಾಗ ಕಚೇರಿಯನ್ನು ಉಳಿಸಿಕೊಂಡು ಇಂಜಿನಿಯರುಗಳು ಮತ್ತು ಸಿಬ್ಬಂದಿಗೆ ಪುಕ್ಕಟೆ ಸಂಬಳ ಕೊಡಬೇಕಿತ್ತಾ ಎಂದಿದ್ದಾರೆ.

ವಾಸ್ತವಾಂಶ ಅರಿತುಕೊಳ್ಳದೆ ವಿರೋಧ ಪಕ್ಷದ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಉತ್ತರ ಕರ್ನಾಟವನ್ನು ಕೊಳ್ಳೆ ಹೊಡದುಕೊಂಡು ಹಾಸನದತ್ತ ಕೊಂಡೊಯ್ಯುತ್ತಿದ್ದಾರೆಂಬ ರೀತಿ ಹೇಳಿಕೆ ನೀಡುವುದು ತರವಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next