Advertisement

ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ: ತನಿಖೆ

01:00 AM Feb 20, 2019 | Harsha Rao |

ಉಡುಪಿ: ಕೊಕ್ಕರ್ಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೋಟಂಬೈಲು ಪ್ರದೇಶದಲ್ಲಿ 4 ವರ್ಷಗಳ ಹಿಂದೆ 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ದೂರುಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಉಡುಪಿ ಜಿಲ್ಲಾ ಪಂಚಾಯತ್‌ ನಿರ್ಣಯ ಕೈಗೊಂಡಿದೆ.

Advertisement

ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಂಗಳವಾರ ಜರಗಿದ ಸಾಮಾನ್ಯಸಭೆಯಲ್ಲಿ ಸದಸ್ಯ ಸುಧಾಕರ ಶೆಟ್ಟಿ ಮೈರ್ಮಾಡಿ ಅವರು ವಿಷಯ ಪ್ರಸ್ತಾವಿಸಿ, “ಕಾಮಗಾರಿ ಕಳಪೆಯಾಗಿದೆ. ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಜನಾರ್ದನ ತೋನ್ಸೆ ಅವರು “ಈ ಬಗ್ಗೆ ಲೋಕಾಯುಕ್ತ ಅಥವಾ ಜಿ.ಪಂ. ಸದನ ಸಮಿತಿಯಿಂದ ತನಿಖೆಯಾಗಲಿ’ ಎಂದರು. ಪ್ರತಿ ಕ್ರಿಯಿಸಿದ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ “ಜಿ.ಪಂ.ನಲ್ಲಿ ಸದನ ಸಮಿತಿ ರಚಿಸಲು ಸಾಧ್ಯವಿಲ್ಲ. ಅಧ್ಯಕ್ಷರ ನೇತೃತ್ವದಲ್ಲಿ ತನಿಖೆ ನಡೆಸಬಹುದು’ ಎಂದರು.

ನಿಷ್ಪ್ರಯೋಜಕ ಕಾಮಗಾರಿಗಳು
ಹೆಜಮಾಡಿಯಲ್ಲಿ ಅಳಿವೆ ಇಲ್ಲದ ಜಾಗದಲ್ಲಿ 84 ಲ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡ ಲಾಗಿದೆ. ಇದು ನಿಷ್ಪ್ರಯೋಜಕವಾಗಿದೆ ಎಂದು ಸಾಮಾಜಿಕ ನ್ಯಾಯ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ದೂರಿದರು. ಜಿಲ್ಲೆಯಲ್ಲಿ 59 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಕೆಲವು ಘಟಕಗಳು ನಿಷ್ಪ್ರಯೋಜಕವಾಗಿವೆ ಎಂದು ತೋನ್ಸೆ ಹೇಳಿದರು.

ವರ್ಗಾವಣೆಯೇ ಇಲ್ಲ
“ಕೆಲವು ಕಡೆ ಪಿಡಿಒಗಳು 6-7 ವರ್ಷಗಳಿಂದ ಇದ್ದಾರೆ. ಇಂತಹ ಗ್ರಾ.ಪಂ.ಗಳಲ್ಲೇ ಹೆಚ್ಚು ಗುಂಪು ಗಾರಿಕೆ ನಡೆಯುತ್ತಿದೆ. 3 ವರ್ಷಗಳಿಗಿಂತ ಹೆಚ್ಚು ಸಮಯ ಒಂದೇ ಕಡೆ ಇರುವ ಪಿಡಿಒ ಗಳನ್ನು ವರ್ಗಾಯಿಸಿದರೆ ಸಮಸ್ಯೆಗಳು ಸ್ವಲ್ಪವಾದರೂ ಪರಿಹಾರವಾದೀತು’ ಎಂದು ಸುಮಿತ್‌ ಶೆಟ್ಟಿ ಹಾಗೂ ಪ್ರತಾಪ್‌ ಹೆಗ್ಡೆ ಮಾರಾಳಿ ಹೇಳಿದರು.

Advertisement

ಜಿಂಕೆ ಹಾವಳಿ ತಪ್ಪಿಸಲು ಹಂಪ್ಸ್‌!
ಹಾವಂಜೆ-ಪೆರ್ಡೂರು ರಸ್ತೆಯಲ್ಲಿ ರಕ್ಷಿತಾರಣ್ಯದಿಂದ ಜಿಂಕೆಗಳು ಓಡಿಬರುವ ಕಾರಣ ಅಪಘಾತಗಳಾಗುತ್ತಿವೆ. ಇಲ್ಲಿ ಬೇಲಿ ಹಾಕಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಜನಾರ್ದನ ತೋನ್ಸೆ ಹೇಳಿದರು. ಬೇಲಿ ಹಾಕಿದರೆ ಜಿಂಕೆಗಳ ಓಡಾಟಕ್ಕೆ ಅಡ್ಡಿಯಾಗುತ್ತದೆ. ವಾಹನಗಳೇ ನಿಧಾನವಾಗುವಂತೆ ಮಾಡಲು ಹಂಪ್ಸ್‌, ಎಚ್ಚರಿಕೆಗಾಗಿ ರಿಫ್ಲೆಕ್ಟರ್‌ ಬೋರ್ಡ್‌ಗಳನ್ನು ಹಾಕಬಹುದು ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದರು.

ಪ್ಲಾಸ್ಟಿಕ್‌ ನಿಷೇಧ ಜಾರಿ ವೈಫ‌ಲ್ಯ
“ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧವಿದೆ. ಆದರೆ ಕೆಲವು ಗ್ರಾ.ಪಂ.ಗಳಲ್ಲಿ ಬೇಕಾಬಿಟ್ಟಿ ಪ್ಲಾಸ್ಟಿಕ್‌ ಬಳಕೆ ನಡೆಯುತ್ತಿದೆ. ಪಾಲನೆ ಮಾಡುವುದಾದರೆ ಎಲ್ಲೆಡೆ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದು ಸುಮಿತ್‌ ಶೆಟ್ಟಿ, ರೇಷ್ಮಾ ಶೆಟ್ಟಿ, ಶಿಲ್ಪಾ ಸುವರ್ಣ ಮೊದಲಾದವರು ಒತ್ತಾಯಿಸಿದರು. “ಪ್ಲಾಸ್ಟಿಕ್‌ ಬಳಕೆ ಮಾಡದ ಮದುವೆಗಳಿಗೆ ಗ್ರೀನ್‌ ಮ್ಯಾರೇಜ್‌ ಪ್ರಮಾಣಪತ್ರ ನೀಡುವ ಮೊದಲು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು’ ಎಂದು ಜನಾರ್ದನ ತೋನ್ಸೆ ಹೇಳಿದರು. 

ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌ ಮಾತನಾಡಿ, “ಜಿಲ್ಲೆಯಲ್ಲಿ 2016ರಲ್ಲೇ ಪ್ಲಾಸ್ಟಿಕ್‌ ನಿಷೇಧ ಕಾಯಿದೆ ಜಾರಿಗೆ ಬಂದಿದೆ. ಎಲ್ಲ ಗ್ರಾ.ಪಂ.ಗಳು ಮತ್ತು ನಗರ ವ್ಯಾಪ್ತಿಗಳಲ್ಲಿ ಇದು ಕಡ್ಡಾಯವಾಗಿ ಜಾರಿಗೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರೀನ್‌ ಮ್ಯಾರೇಜ್‌ ಪ್ರಮಾಣಪತ್ರಕ್ಕೆ ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದರು.

“ಪ್ಲಾಸ್ಟಿಕ್‌ ಉತ್ಪಾದನೆಯನ್ನೇ ನಿಯಂತ್ರಿಸ ಬೇಕು’ ಎಂದು ಪ್ರತಾಪ್‌ ಹೆಗ್ಡೆ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next