Advertisement

ಎಲುಬಿಲ್ಲದ ನಾಲಗೆಯ ಚಾಳಿ

11:37 PM Dec 08, 2019 | Lakshmi GovindaRaj |

ದೇಶದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಣ್ಣ ಮುಂದಿದೆ. ಈ ದೌರ್ಜನ್ಯವೆಂದರೆ ಬರೀ ದೈಹಿಕ ಹಿಂಸೆಯಷ್ಟೇ ಅಲ್ಲ. ಸಮಾಜದಲ್ಲಿ ಮಹಿಳೆಯನ್ನು ಲಘುವಾಗಿ ಕಾಣುವುದು, ಕೆಟ್ಟ ಅಭಿರುಚಿಯಲ್ಲಿ ಮಾತನಾಡುವುದು, ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು, ಹೇಗೆಂದರೆ ಹೇಗೆ ನಾಲಗೆಯನ್ನು ಹರಿಯಬಿಟ್ಟು ಯಾವುದೋ ಸಂಗತಿಯನ್ನು ಇನ್ಯಾವುದಕ್ಕೋ ಹೋಲಿಸುವುದು..ಎಲ್ಲವೂ ಮತ್ತೂಂದು ಬಗೆಯ ಹಿಂಸೆ.

Advertisement

ಅದರಲ್ಲೂ ಜನ ನಾಯಕರು ಇಂಥ ಹತ್ತಾರು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಅತ್ಯಾಚಾರ ಬಗೆಗಂತೂ ಪಕ್ಷಭೇದವಿಲ್ಲದೆ ಹಲವರು ನೀಡಿರುವ ಅತ್ಯಂತ ಕೆಟ್ಟ ಹಾಗೂ ಅಸೂಕ್ಷ್ಮ ಹೇಳಿಕೆಗಳು ಹೇಳತೀರವು. ಅಧಿಕಾರದಲ್ಲಿ ರುವವರು, ಅಭಿಮಾನಿಗಳನ್ನು ಹೊಂದಿರುವವರು, ಅಭಿಪ್ರಾಯ ರೂಢಕರೂ ಸೇರಿದಂತೆ ಎಲ್ಲರೂ ತಮ್ಮ ಹೇಳಿಕೆಯ ಪರಿಣಾಮವನ್ನು ಗ್ರಹಿಸಿ ಮಾತನಾಡದಿದ್ದರೆ ಆಗುವ ಅನಾಹುತವೇ ಹೆಚ್ಚು. ಇದರ ಕುರಿತಾಗಿಯೇ ಈ ಅವಲೋಕನ.

ಎಲ್ಲ ಯುವಕರಿಗೂ ಐಶ್ವರ್ಯಾ ರೈ ಬೇಕು ಎಂದರೆ ಹೇಗೆ ?
2019: “ರಾಜ್ಯದಲ್ಲಿ ಮತ್ತೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವ ಸಾಧ್ಯತೆ ಇದೆಯೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡುವ ಭರದಲ್ಲಿ ಸಚಿವ ಈಶ್ವರಪ್ಪ ಅವರು, ಉಪ ಮುಖ್ಯಮಂತ್ರಿ ಹುದ್ದೆಯನ್ನು ಬಾಲಿವುಡ್‌ ನಟಿ ಐಶ್ವರ್ಯಾ ರೈಗೆ ಹೋಲಿಕೆ ಮಾಡಿದ್ದಾರೆ. “ಉಪ ಮುಖ್ಯಮಂತ್ರಿ ಆಗುವುದಕ್ಕೆ ರಾಜಕಾರಣದಲ್ಲಿ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ. ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ವಯಸ್ಸಿಗೆ ಬಂದವರೆಲ್ಲ ಐಶ್ವರ್ಯಾ ರೈ ಬೇಕು ಎಂದು ಕೇಳುತ್ತಾರೆ. ಆದರೆ ಅವಳು ಇರುವುದು ಒಬ್ಬಳೇ ತಾನೇ?’ ಎಂದು ಹೇಳಿಕೆ ನೀಡಿದ್ದಾರೆ.

ಜನಸಂಖ್ಯೆಯೂ ಹೆಚ್ಚಾಗುತ್ತಿದೆ
2013: ನೀವು ಹೇಳುತ್ತೀರಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಎಂದು. ಜನ ಸಂಖ್ಯೆಯೂ ಹೆಚ್ಚಾಗುತ್ತಿದೆಯಲ್ಲ ; ರಾಜ್ಯದಲ್ಲಿ ಜನಸಂಖ್ಯೆ ಬಿಸಿ ರಾಯ್‌ ಅವರ ಕಾಲದಲ್ಲಿದ್ದಷ್ಟೇ ಇದೆಯೇ (ಬಿ.ಸಿ. ರಾಯ್‌ ಪಶ್ಚಿಮ ಬಂಗಾಲದ ಎರಡನೆ ಮುಖ್ಯಮಂತ್ರಿ)? ಕಾರೂಗಳೂ ಹೆಚ್ಚಾಗುತ್ತಿವೆ, ಮಾಲ್‌ಗ‌ಳೂ ಹೆಚ್ಚುತ್ತಿವೆ. ಹುಡುಗ ಮತ್ತು ಹುಡುಗಿಯರೂ ಆಧುನಿಕರಾಗುತ್ತಿದ್ದಾರೆ’. ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಲದ ಮುಖ್ಯಮಂತ್ರಿ (ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಸಂದರ್ಭ, ವಿಪಕ್ಷದವರು ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ಬಗೆಗಿನ ಹೇಳಿಕೆಗೆ ಪ್ರತಿಕ್ರಿಯೆಯಾಗಿ)

ಗಂಡ ಸತ್ತು ತಿಂಗಳು ಕಳೆದಿಲ್ಲ, ರಾಜಕೀಯ ಬೇಕಾಯ್ತಾ?
2019: ಕಳೆದ ಲೋಕಸಭಾ ಚುನಾ ವಣೆಯ ಸಂದರ್ಭ. ಸುಮಲತಾ ಅವರು ಮಂಡ್ಯದಿಂದ ಚುನಾ ವಣೆಗೆ ಸ್ಪರ್ಧಿಸುವ ಬಗ್ಗೆ ಮಾತ ನಾಡುತ್ತಾ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಅವರು, “ಗಂಡ ಸತ್ತು ಒಂದು ತಿಂಗಳಾಗಿಲ್ಲ, ಆಗಲೇ ರಾಜಕೀಯ ಬೇಕಾಯ್ತಾ?’ ಎಂದು ಸುಮಲತಾ ಬಗ್ಗೆ ಅಸೂಕ್ಷ್ಮ ಹೇಳಿಕೆ ನೀಡಿದ್ದರು. ಆ ಸೂಕ್ಷ್ಮವನ್ನೂ ಮರೆತು ನಾಲಿಗೆ ಹರಿಬಿಟ್ಟ ಮಾಜಿ ಪ್ರಧಾನಿ ಪುತ್ರ ರೇವಣ್ಣ ವಿರುದ್ಧ ರಾಜಕಾರಣಿಗಳು, ಸಾಮಾಜಿಕ ಮಾಧ್ಯಮದವರು, ಮಹಿಳಾಪರರು, ಸಾಹಿತಿಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

ರಾತ್ರಿ 12 ಗಂಟೆ ಬಳಿಕ ನೀನು ಮನೆ ಬಿಟ್ಟು ಏಕೆ ಹೊರಗೆ ಹೋಗಬೇಕಿತ್ತು?
2017: ಹರಿಯಾಣದ ಐಎಎಸ್‌ ಅಧಿಕಾರಿಯ ಪುತ್ರಿಯನ್ನು ಹಿಂಬಾ ಲಿಸಿ, ಅಪಹರಣಕ್ಕೆ ಯತ್ನಿಸಿದ ಘಟನೆ ನಡೆದಿತ್ತು. ಆಗ ಬಿಜೆಪಿ‌ ಉಪಾಧ್ಯಕ್ಷ ರಾಮವೀರ್‌ ಭಟ್ಟಿ, “ಆ ಹುಡುಗಿ ಏಕೆ ರಾತ್ರಿ 12 ಗಂಟೆ ಅನಂತರ ಮನೆ ಬಿಟ್ಟು ಹೊರಗೆ ಹೋಗಬೇಕಿತ್ತು? ವಾತಾವರಣ ಸರಿ ಇಲ್ಲ ಎಂಬುದು ಆಕೆಗೆ ಗೊತ್ತಿಲ್ಲವೇ?’ ಎಂದು ಪ್ರಶ್ನಿಸಿದ್ದರು.

ಅತ್ಯಾಚಾರ ಕೆಲವೊಮ್ಮೆ ತಪ್ಪಿ ನಡೆಯುವ ಘಟನೆ
2014: ಅತ್ಯಾಚಾರ ಘಟನೆಗಳ ಬಗ್ಗೆ ಛತ್ತೀಸ್‌ಗಢದ ಗೃಹ ಸಚಿವ ಪೈಕ್ರಾ ಸುದ್ದಿ ವಾಹಿನಿಯೊಂದರಲ್ಲಿ, “ಅತ್ಯಾಚಾರಗಳು ತಪ್ಪಾಗಿ ಸಂಭವಿಸುತ್ತವೆ ವಿನಾ ಉದ್ದೇಶಪೂರ್ವಕವಾಗಿ ನಡೆಯುವುದಲ್ಲ’ ಎಂದು ಹೇಳಿ ಕೋಲಾಹಲ ಸೃಷ್ಟಿಸಿದ್ದರು.

ಹೇಮಾ ಮಾಲಿನಿಯ ಕೆನ್ನೆಯಷ್ಟೇ ಮೃದುವಾದ ರಸ್ತೆ ಮಾಡುತ್ತೇವೆ
2000: 2000ನೇ ಇಸವಿಯಲ್ಲಿ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್‌ ಅವರು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ “ಬಿಹಾ ರದ ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಷ್ಟೇ ಮೃದುವಾಗಿಸುತ್ತೇವೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

ಬಿಸಿಲಿನಲ್ಲಿ ಸತ್ಯಾಗ್ರಹ ಮಾಡಿದರೆ ಒಳ್ಳೆಯ ವರ ಸಿಗಲಾರ
2015: “ಮಹಿಳೆಯರು ಬಿಸಿಲಿನಲ್ಲಿ ಕುಳಿತು ಉಪವಾಸ ಸತ್ಯಾಗ್ರಹ ಮಾಡಬಾರದು. ಯಾಕೆಂದರೆ, ಸೂರ್ಯನ ಬಿಸಿಲಿನಿಂದ ನಿಮ್ಮ ಸೌಂದರ್ಯ ಹಾಳಾಗುತ್ತದೆ, ಮೈ ಬಣ್ಣ ಕಪ್ಪಾದರೆ, ಒಳ್ಳೆಯ ವರ ಸಿಗುವುದು ಕಷ್ಟವಾಗುತ್ತದೆ’. ಲಕ್ಷ್ಮೀಕಾಂತ್‌ ಪರ್ಶೇಕರ್‌, ಗೋವಾದ ಮಾಜಿ ಮುಖ್ಯಮಂತ್ರಿ (2015 ರಲ್ಲಿ ದಾದಿಯರು ವೃತ್ತಿ ಸಂಬಂಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭ)

ಸಾಮೂಹಿಕ ಅತ್ಯಾಚಾರ ಎಂದರೆ 4ರಿಂದ 5 ಜನರಿರಬೇಕು
2015: ಬಿಪಿಒ ಉದ್ಯೋಗಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸುವ ಭರದಲ್ಲಿ ಆಗಿನ ಗೃಹ ಸಚಿವ ಕೆ.ಜೆ. ಜಾರ್ಜ್‌, “ಅದನ್ನು ಗ್ಯಾಂಗ್‌ ರೇಪ್‌ ಅಂತ ಹೇಗೆ ಕರೆಯುತ್ತೀರಿ? ಸಾಮೂಹಿಕ ಅತ್ಯಾಚಾರ ಎಂದರೆ ಕನಿಷ್ಠ ನಾಲ್ಕರಿಂದ ಐದು ಜನರಿರಬೇಕು’ ಎಂಬ ಅತ್ಯಂತ ಅಸೂಕ್ಷ್ಮವಾದ ಹೇಳಿಕೆ ಹೇಳಿದ್ದರು. ಸಚಿವರ ಈ ಹೇಳಿಕೆ ದೇಶ ಮಟ್ಟದಲ್ಲಿ ವಿವಾದಕ್ಕೆ ನಾಂದಿ ಹಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next