Advertisement

ಅಗೌರವ ಆರೋಪ; ಬಿಜೆಪಿ ಸದಸ್ಯರ ಸಭಾತ್ಯಾಗ

09:01 AM Dec 01, 2018 | Team Udayavani |

ಉಡುಪಿ: ಮರಳು ಕೊರತೆ, ಸ್ಥಳೀಯರಿಂದ ಟೋಲ್‌ ಸಂಗ್ರಹ ಸಹಿತ ಜಿಲ್ಲೆಯ ಪ್ರಮುಖ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಜಿ.ಪಂ.ನ ನಿರ್ಣಯಗಳಿಗೆ ಬೆಲೆ ನೀಡುತ್ತಿಲ್ಲ. ಅಧ್ಯಕ್ಷರು, ಸದಸ್ಯರಿಗೆ ಗೌರವವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿ ಉಡುಪಿ ಜಿ.ಪಂ.ನ ಆಡಳಿತಾರೂಢ ಬಿಜೆಪಿ ಸದಸ್ಯರು ಶುಕ್ರವಾರ ಆಯೋಜನೆಗೊಂಡಿದ್ದ ಜಿ.ಪಂ. ಸಾಮಾನ್ಯ ಸಭೆಗೆ ಆಗಮಿಸಿ ಬಳಿಕ ಬಹಿಷ್ಕರಿಸಿದರು.

Advertisement

ಕೋರಂ ಕೊರತೆಯಿಂದ ಅರ್ಧ ತಾಸು ವಿಳಂಬವಾಗಿ ಸಭೆ ಆರಂಭವಾಯಿತು. ಸಭೆಯಲ್ಲಿ ಸಾಸ್ತಾನ ಮತ್ತು ಪಡುಬಿದ್ರಿಯ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯರಿಗೆ ಟೋಲ್‌ ವಿನಾಯಿತಿ ನೀಡಬೇಕೆಂದು ನಡೆಯುತ್ತಿರುವ ಪ್ರತಿ
ಭಟನೆ ಉಲ್ಲೇಖವಾಯಿತು. ಸ್ಥಳೀಯರಿಗೆ ವಿನಾಯಿತಿ ಬಗ್ಗೆ ನಿರ್ಧಾರ ಆಗಿಲ್ಲ ಎಂದು ನವಯುಗ ಸಂಸ್ಥೆಯ ಅಧಿಕಾರಿ ತಿಳಿಸಿದರು. ಸ್ಥಳೀಯರಿಂದ ಟೋಲ್‌ ಸಂಗ್ರಹಿಸುವುದಿಲ್ಲ ಎಂದು ಅಧಿಕಾರಿಗಳು ಈ ಹಿಂದಿನ ಸಭೆಯಲ್ಲಿ ಹೇಳಿದ್ದರು ಎಂದು ಹಲವು ಸದಸ್ಯರು ಆಕ್ಷೇಪವೆತ್ತಿದರು. 

ಜಿ.ಪಂ. ಸಾಮಾನ್ಯಸಭೆ ಇರುವ ದಿನದಂದೇ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿಗದಿ ಮಾಡುವ ಮೂಲಕ ಜಿ.ಪಂ. ಅಧ್ಯಕ್ಷರು, ಸದಸ್ಯರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಮಾಡಲಾಗಿದೆ.

ಇದು ಜಿ.ಪಂ.ಗೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತವಾಯಿತು. ಕೆಲವು ಸದಸ್ಯರು ಜಿಲ್ಲಾಧಿಕಾರಿಯವರು ಅಸಹಕಾರ, ಅಗೌರವ ತೋರುತ್ತಿದ್ದಾರೆ ಎಂದು ಆಕ್ಷೇಪಿಸಿ ಸಭೆಯನ್ನು ಬಹಿಷ್ಕರಿಸಿದರು. 
ಸಭೆಯಿಂದ ನಿರ್ಗಮಿಸಿದ ಸದಸ್ಯರನ್ನು ವಾಪಸು ಕರೆತರಲು ಅಧ್ಯಕ್ಷ ದಿನಕರ ಬಾಬು ಅವರು ಮಾತುಕತೆ ನಡೆಸಿದರಾದರೂ ಸದಸ್ಯರು ಒಪ್ಪಲಿಲ್ಲ. ಅನಂತರ ಸಭೆಯನ್ನು ಮುಂದೂಡಲಾಯಿತು. 

ಡಿಸಿ ವರ್ತನೆಯಿಂದ ನೋವು: ದಿನಕರ ಬಾಬು ಸಭೆಯ ಅನಂತರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿಯವರು ನಮ್ಮನ್ನು ಪೂರ್ಣವಾಗಿ ಕಡೆಗಣಿಸಿದ್ದಾರೆ. ಅವರ ವರ್ತನೆಯಿಂದ ತುಂಬಾ ನೋವಾಗಿದೆ. ಕೆಲವೊಮ್ಮೆ ಸಭೆ ಕರೆದು ಅನಂತರ ರದ್ದು ಮಾಡುತ್ತಾರೆ. ಮಾಹಿತಿ ಕೂಡ ನೀಡುವುದಿಲ್ಲ. ನಾನು ಹೋಗಿ ಹಾಗೆಯೇ ವಾಪಸಾಗುತ್ತೇನೆ. ಜಿ.ಪಂ. ಸಭೆ ಇರುವುದನ್ನು ಕೂಡ ಸಾಕಷ್ಟು ಮುಂಚಿತವಾಗಿ ತಿಳಿಸಿದ್ದೇನೆ. ಆದರೂ ಇದೇ ದಿನ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭ ಇಟ್ಟುಕೊಳ್ಳಲಾಗಿದೆ ಎಂದರು.

Advertisement

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್‌. ಕೋಟ್ಯಾನ್‌, ಜಿ.ಪಂ. ಸಿಇಒ ಸಿಂಧು ರೂಪೇಶ್‌, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಮುಖ್ಯ ಲೆಕ್ಕಾಧಿಕಾರಿ ನಾಗೇಶ್‌ ರಾಯ್ಕರ್‌ ಉಪಸ್ಥಿತರಿದ್ದರು.

ಮೊದಲ ಬಾರಿಗೆ ಕೋರಂ ಕೊರತೆ
ಜಿ.ಪಂ.ನ ಈ ಆಡಳಿತದ ಎರಡೂವರೆ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಕೋರಂ ಕೊರತೆ ಕಂಡುಬಂತು. ಒಟ್ಟು 39 ಮಂದಿ ಸದಸ್ಯರ ಪೈಕಿ 20 ಮಂದಿಯ ಹಾಜರಾತಿ ಇರಬೇಕಿತ್ತು. ಆದರೆ 18 ಮಂದಿ ಮಾತ್ರ ಇದ್ದರು. ಅನಂತರ ಅರ್ಧ ತಾಸಿನ ಬಳಿಕ ಮತ್ತೆ ನಾಲ್ವರು ಸದಸ್ಯರು ಆಗಮಿಸಿದ ಬಳಿಕ ಸಭೆ ಆರಂಭಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next