Advertisement

ಸಿಎಸ್ಪಿ ವಿರುದ್ಧ ಅಗೌರವ ನಡೆ ನಿಖೀಲ್ಗೆ ಹಿನ್ನಡೆಯಾಯ್ತೆ?

02:03 PM May 26, 2019 | Team Udayavani |

ಪಾಂಡವಪುರ: ಲೋಕಸಭಾ ಚುನಾವಣೆ ಸಮಯದಲ್ಲಿ ಜೆಡಿಎಸ್‌ನ ನಿಷ್ಠಾವಂತ ನಾಯಕ ಸಿ.ಎಸ್‌.ಪುಟ್ಟರಾಜು ಅವರಿಗೆ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ತೋರಿದ್ದರೆನ್ನಲಾದ ಅಗೌರವ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಮುನ್ನಡೆಗೆ ಕಾರಣವಾಯಿತೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

Advertisement

ನಿಖೀಲ್ ಕುಮಾರಸ್ವಾಮಿ ಅವರು ರಾಜಕೀಯ ಸಭ್ಯತೆ ಮರೆತು ಹಿರಿಯ ನಾಯಕರು, ಸಚಿವರು ಎಂಬ ಗೌರವ-ಮರ್ಯಾದೆ ಇಲ್ಲದೆ ನಡೆದುಕೊಂಡಿದ್ದು ಸಚಿವ ಸಿ.ಎಸ್‌.ಪುಟ್ಟರಾಜು ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಬೆಂಬಲಿಗರು ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಿಲ್ಲ. ಸಿ.ಎಸ್‌.ಪುಟ್ಟರಾಜು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಸಮಯದಲ್ಲಿ ಅವರನ್ನು ಗೆಲ್ಲಿಸಲು ತೋರಿದ ಆಸಕ್ತಿ ಮತ್ತು ಶ್ರಮವನ್ನು ನಿಖೀಲ್ ವಿಚಾರದಲ್ಲಿ ತೋರ್ಪಡಿಸಲೇ ಇಲ್ಲ. ಇದು ಪಕ್ಷೇತರ ಅಭ್ಯರ್ಥಿ ಮುನ್ನಡೆಗೆ ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ನಿರೀಕ್ಷೆಯಿತ್ತು: ಜೆಡಿಎಸ್‌ ಪಕ್ಷದೊಳಗೆ ಅತ್ಯಂತ ನಿಷ್ಠ ನಾಯಕರೆಂದು ಗುರುತಿಸಿಕೊಂಡಿರುವ ಸಿ.ಎಸ್‌.ಪುಟ್ಟರಾಜು 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದು ಮಂತ್ರಿಯಾದರು. ಪಾಂಡವಪುರಕ್ಕೆ ಮೊದಲ ಬಾರಿಗೆ ಸಚಿವ ಸ್ಥಾನ ದೊರಕಿಸಿದ ಕೀರ್ತಿ ಸಿ.ಎಸ್‌.ಪುಟ್ಟರಾಜು ಅವರಿಗೆ ಸಲ್ಲುತ್ತದೆ. ಅಲ್ಲದೆ, ಆ ಗೌರವಕ್ಕೆ ಕಾರಣರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದರು. ಇದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮಟ್ಟದ ಲೀಡ್‌ ಕೊಡಿಸುವರೆಂಬ ಬಗ್ಗೆ ಬಹಳಷ್ಟು ನಿರೀಕ್ಷೆ ಹೊಂದಲಾಗಿತ್ತು.

ಆದರೆ, ಚುನಾವಣಾ ಪ್ರಚಾರ ಸಮಯದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ನಡವಳಿಕೆ ಸಹಜವಾಗಿಯೇ ಎಲ್ಲರಲ್ಲೂ ಅಸಮಾಧಾನ ಮೂಡಿಸಿತ್ತು ಎನ್ನಲಾಗಿದೆ. ಜೆಡಿಎಸ್‌ನ ಸ್ಥಳೀಯ ಮುಖಂಡರು ಕಾರ್ಯಕರ್ತರು ತಾವು ಪ್ರೀತಿಸುವ ನಾಯಕರ ಬಗ್ಗೆ ಗೌರವ-ಮರ್ಯಾದೆ ಇಲ್ಲದೆ ಮಾತನಾಡಿದಾಗ ಅವರೆಲ್ಲರೂ ಚುನಾವಣೆ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡರು. ಅಭ್ಯರ್ಥಿ ಗೆಲುವಿನ ಬಗ್ಗೆಯೂ ನಿರ್ಲಕ್ಷ್ಯ, ನಿರಾಸಕ್ತಿ ವಹಿಸಿದರು. ಇದು ಕ್ಷೇತ್ರದಲ್ಲಿ ಲೀಡ್‌ ಸಿಗದಿರುವುದಕ್ಕೆ ಕಾರಣವಾಯಿತು.

ಕಳೆದ ಮೇಲುಕೋಟೆ ವಿಧಾನಸಭಾ ಚುನಾವಣಾ ಸಮಯದಲ್ಲಿ ರೈತಸಂಘದ ವೋಟುಗಳು ಸಾಕಷ್ಟು ಸಿ.ಎಸ್‌.ಪುಟ್ಟರಾಜು ಅವರ ಕಡೆಗೂ ಹರಿದುಬಂದಿದ್ದವು. ಆದರೆ, ಲೋಕಸಭೆಗೆ ಜೆಡಿಎಸ್‌ ಅಭ್ಯರ್ಥಿ ನಿಖೀಲ್ಕುಮಾರಸ್ವಾಮಿ ಅಭ್ಯರ್ಥಿಯಾಗುತ್ತಿದ್ದಂತೆ ರೈತಸಂಘದ ಕಾರ್ಯಕರ್ತರು ಸುಮಲತಾ ಬೆಂಬಲಕ್ಕೆ ನಿಂತರು. ದೇವೇಗೌಡರ ಕುಟುಂಬ ರಾಜಕಾರಣ ಬೆಳೆಸುವುದಕ್ಕೆ ಮನಸ್ಸು ಕೊಡಲಿಲ್ಲ. ಇದು ನಿಖೀಲ್ಗೆ ಹಿನ್ನಡೆಯಾಗುವುದಕ್ಕೆ ಮತ್ತೂಂದು ಕಾರಣ.

Advertisement

ಕಾರ್ಯಕರ್ತರಿಗೆ ಬೇಸರ ತರಿಸಿತ್ತು: ರಾಜಕೀಯ ಸಭ್ಯತೆ ಮರೆತು ವರ್ತಿಸುತ್ತಿರುವ ನಿಖೀಲ್ಕುಮಾರಸ್ವಾಮಿಗೆ ತಂದೆ ಹಾಗೂ ಸಿಎಂ ಕುಮಾರಸ್ವಾಮಿಯೂ ಹೇಳಿಕೊಡಲಿಲ್ಲ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಚುನಾವಣೆಗೂ ಮುನ್ನ ಇಡೀ ಕ್ಷೇತ್ರದಲ್ಲಿ ಸಂಚರಿಸುವ ಮೂಲಕ ಎಲ್ಲಾ ಮುಖಂಡರು, ಕಾರ್ಯಕರ್ತರ ವಿಶ್ವಾಸ ಗಳಿಸಿಕೊಂಡಿದ್ದರು. ರಾಜಕೀಯ ತಿಳಿವಳಿಕೆ ಮೂಡಿಸಿಕೊಂಡು ಎಲ್ಲರನ್ನೂ ಒಗ್ಗಟ್ಟಾಗಿ ಮುನ್ನಡೆಸಿದ ಪರಿಣಾಮ ಅವರು ಲೋಕಸಭೆ ಪ್ರವೇಶಿಸುವುದಕ್ಕೆ ಕಾರಣವಾಯಿತು. ಅಂತಹದೊಂದು ರಾಜಕೀಯ ತಿಳಿವಳಿಕೆಯೇ ಇಲ್ಲದ ನಿಖೀಲ್ ಕುಮಾರಸ್ವಾಮಿ, ಜೆಡಿಎಸ್‌ ನಾಯಕರನ್ನು ಒಗ್ಗಟ್ಟಾಗಿ ಕೊಂಡೊಯ್ಯುವ ಕೆಲಸ ಮಾಡಲಿಲ್ಲ. ಚುನಾವಣಾ ಜವಾಬ್ದಾರಿಯನ್ನೆಲ್ಲಾ ತಂದೆ ಸಿಎಂ ಕುಮಾರಸ್ವಾಮಿ ಹಾಗೂ ಜಿಲ್ಲಾ ಜೆಡಿಎಸ್‌ ನಾಯಕರಿಗೆ ಬಿಟ್ಟು ಪ್ರಚಾರಕ್ಕಷ್ಟೇ ಸೀಮಿತರಾಗಿದ್ದರು. ಮುಖಂಡರು, ಕಾರ್ಯಕರ್ತರೊಂದಿಗೆ ಬೆರೆಯುವುದಕ್ಕೆ ಮುಂದಾಗಲಿಲ್ಲ. ಇವೂ ಜೆಡಿಎಸ್‌ನ ಕೆಳಹಂತದ ಮುಖಂಡರು, ಕಾರ್ಯಕರ್ತರಿಗೆ ಬೇಸರ ತರಿಸಿತ್ತು. ಇವೆಲ್ಲವೂ ನಿಖೀಲ್ಗೆ ಸೋಲನ್ನು ದಯಪಾಲಿಸಿದವು.

ಸಚಿವ ಸಿ.ಎಸ್‌.ಪುಟ್ಟರಾಜು ಕ್ಷೇತ್ರ ಮೇಲುಕೋಟೆ, ಶಾಸಕ ಕೆ.ಸುರೇಶ್‌ಗೌಡರ ಕ್ಷೇತ್ರ ನಾಗಮಂಗಲ ಇವೆರಡನ್ನೂ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಪಕ್ಷೇತರ ಅಭ್ಯರ್ಥಿ ಸುಮಲತಾ ಲೀಡ್‌ ಸಾಧಿಸುವರೆಂಬ ಮಾಹಿತಿ ಚುನಾವಣಾ ಸಮಯದಲ್ಲೇ ಗೊತ್ತಾಗಿತ್ತು. ಗುಪ್ತಚರ ಇಲಾಖೆ ವರದಿಯೂ ಇದನ್ನೇ ಹೇಳಿತ್ತು. ಆದರೆ, ನಾಗಮಂಗಲದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ 7442 ಮತಗಳ ಲೀಡ್‌ ಪಡೆಯುವುದಕ್ಕಷ್ಟೇ ಸಮರ್ಥರಾದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಜೆಡಿಎಸ್‌ ಅಭ್ಯರ್ಥಿಗಿಂತಲೂ 15886 ಹೆಚ್ಚು ಮತ ಗಳಿಸುವಲ್ಲಿ ಯಶಸ್ವಿಯಾದರು. ಸಚಿವ ಸಿ.ಎಸ್‌.ಪುಟ್ಟರಾಜು ಅವರಿಗೆ ಕ್ಷೇತ್ರದ ಮೇಲೆ ಈಗಲೂ ಸಂಪೂರ್ಣ ಹಿಡಿತವಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ದೊಡ್ಡ ಶಕ್ತಿಯಾಗಿದ್ದಾರೆ. ಆ ಶಕ್ತಿಯನ್ನು ಸಮರ್ಪಕವಾಗಿ ಗೆಲುವಿನ ಅಸ್ತ್ರವಾಗಿ ಬಳಸಿಕೊಳ್ಳುವಲ್ಲಿ ನಿಖೀಲ್ ಎಡವಿದಂತೆ ಕಂಡುಬರುತ್ತಿದ್ದಾರೆ.
● ಕುಮಾರಸ್ವಾಮಿ
Advertisement

Udayavani is now on Telegram. Click here to join our channel and stay updated with the latest news.

Next