ಸುರಪುರ: ಆಸ್ತಿ ಹಂಚಿಕೆ ಹಿನ್ನೆಲೆಯಲ್ಲಿ ನಡೆದ ಕಲಹದಿಂದ ಸ್ವಂತ ಅಣ್ಣನನ್ನೇ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಸಹೋದರರು ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಂಗಂಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣದ ಆರೋಪಿಗಳು ನಾಲ್ಕು ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಕೊಲೆಗೀಡಾಗಿದ್ದ ಪಂಪಾಪತಿ ಪತ್ತಾರ ಅವರ ಪತ್ನಿ ಗಾಯಿತ್ರಿ ನೀಡಿದ್ದ ದೂರಿನ ಮೇರೆಗೆ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿತ್ತು. ಮಂಗಳವಾರ ಬೆಳಗ್ಗೆ ದೇವದುರ್ಗ ಕ್ರಾಸ್ ಬಳಿ ಗಂಗಾಧರ, ಕಾಳಪ್ಪ ಹಾಗೂ ಕೊಲೆಗೆ ಸಹಕರಿಸಿದ ಭೀಮಪ್ಪ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಟಿ. ಮಂಜುನಾಥ ಮಾರ್ಗದರ್ಶನದಲ್ಲಿ ಪಿಐ ಸುನೀಲ ಮೂಲಿಮನಿ, ಪಿಎಸೈ ಕೃಷ್ಣ ಸುಬೇದಾರ, ನಬೀಲಾಲ್ ಸಿಬ್ಬಂದಿಗಳಾದ ಸುಭಾಸ, ಹೊನ್ನಪ್ಪ, ಹುಸೇನ್, ಸಿದ್ರಾಮರೆಡ್ಡಿ, ಶಿವರಾಜ, ಶಿವಪ್ಪ ಮತ್ತು ಮಲ್ಲಯ್ಯ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.