Advertisement

ತ್ರಿವೇಣಿ ಸಂಗಮದಲ್ಲಿ ಸಿದ್ದೇಶ್ವರ ಸ್ವಾಮಿಗಳ ಚಿತಾಭಸ್ಮ ವಿಸರ್ಜನೆ

09:48 AM Jan 08, 2023 | Team Udayavani |

ಬಾಗಲಕೋಟೆ: ನಡೆದಾಡುವ ದೇವರು, ಶತಮಾನದ ಸಂತ ಶ್ರೇಷ್ಠ ಸಿದ್ದೇಶ್ವರ ಸ್ವಾಮೀಜಿಗಳ ಚಿತಾಭಸ್ಮವನ್ನು, ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ, ತ್ರಿವೇಣಿ ನದಿಗಳ ಸಂಗಮ ಕೂಡಲಸಂಗಮದಲ್ಲಿ ರವಿವಾರ ಬೆಳಗಿನ ಜಾವ ವಿಸರ್ಜಿಸಲಾಯಿತು.

Advertisement

ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷರೂ ಆಗಿರುವ ಶ್ರೀ ಬಸವಾನಂದ ಸ್ವಾಮೀಜಿ ನೇತೃತ್ವದ ಹಲವು ಶ್ರೀಗಳ ತಂಡ, ನಸುಕಿನ ಐದು ಗಂಟೆಗೆ ವಿಜಯಪುರ ಜ್ಞಾನ ಯೋಗಾಶ್ರಮದಿಂದ ಚಿತಾಭಸ್ಮ ಹೊತ್ತ ವಾಹನ ಕೂಡಲಸಂಗಮದತ್ತ ಆಗಮಿಸಿದವು. ವಾಹನಗಳು ಕೂಡಲಸಂಗಮ ಕ್ರಾಸ್ ಸಮೀಪಿಸುತ್ತಿದ್ದಂತೆ ಸಾವಿರಾರು ಭಕ್ತರು, ವಾಹನಗಳನ್ನು ಬರಮಾಡಿಕೊಂಡು ಸಂಗಮ ಕ್ಷೇತ್ರದತ್ತ ಸಾಗಿದರು.

ಕೂಡಲಸಂಗಮದಲ್ಲಿ ಚಿತಾಭಸ್ಮವಿದ್ದ ಮಡಿಕೆಗಳಿಗೆ ಪೂಜೆ ಸಲ್ಲಿಸಲಾಯಿತು.  ಬಳಿಕ ಹೂವಿನ ಹಾರ, ಬಾಳೆ ದಿಂಡಿನಿಂದ ವಿಶೇಷ ಅಲಂಕಾರ ಮಾಡಿದ್ದ ಬೋಟ್ನಲ್ಲಿ ಶ್ರೀಗಳು ಚಿತಾಭಸ್ಮವನ್ನು ಘಟಪ್ರಭೆ, ಮಲಪ್ರಭೆ ಹಾಗೂ ಕೃಷ್ಣೆ ತ್ರಿವೇಣಿ ಸಂಗಮದ ಮಧ್ಯ ಸಾಗಿ, ಅಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿಯ ಚಿತಾಭಸ್ಮ ವಿಸರ್ಜಿಸಿದರು. ಅಲ್ಲಿಂದ ಗೋಕರ್ಣದತ್ತ ಚಿತಾಭಸ್ಮ ಹೊತ್ತ ವಾಹನಗಳು ತೆರಳಿದವು.

ಸಿದ್ದೇಶ್ವರ ಶ್ರೀಗಳ ಅಂತಿಮ ಅಭಿವಂದನ ಪತ್ರ ಹಾಗೂ ಅವರ ಇಚ್ಛೆಯಂತೆ ಅಗ್ನಿಸ್ಮರ್ಶದ ಬಳಿಕ ಅಸ್ಥಿಯನ್ನು ಗಂಗೆಯ ಪಾಲು ಮಾಡುವಂತೆ ಬಯಸಿದ್ದರು. ಶ್ರೀಗಳ ಇಚ್ಛೆಯಂತೆ ಮೂರು ನದಿಗಳ ಸಂಗಮ ಕ್ಷೇತ್ರವೂ ಆಗಿರುವ ಬಸವಣ್ಣನವರ ಐಕ್ಯ ಸ್ಥಳ ಹಾಗೂ ಗೋಕರ್ಣದ ಸಾಗರದಲ್ಲಿ ಅಸ್ಥಿ ವಿಸರ್ಜನೆಗೆ ಜ್ಞಾನ ಯೋಗಾಶ್ರಮದ ಎಲ್ಲ ಪೂಜ್ಯರು ನಿರ್ಧರಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next