ಕೊಳ್ಳೇಗಾಲ: ಒಂದೆಡೆ ಅಂಗನವಾಡಿ ಕೇಂದ್ರಗಳಲ್ಲಿ ನೀಡುತ್ತಿರುವ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿಲ್ಲವೆಂದು ಎಲ್ಲೆಡೆ ಸದ್ದು ಮಾಡುತ್ತಿದ್ದು, ಕೊಳ್ಳೇಗಾಲ ತಾಲೂಕಿನ ಭೀಮನಗರದ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದ ಆವರಣ ಕುಡುಕರ ತಾಣವಾಗಿ ಮಾರ್ಪಟ್ಟಿದ್ದು, ಅಂಗನವಾಡಿಯಲ್ಲಿ ಸೂಕ್ತ ಮೂಲ ಸೌಕರ್ಯವಿಲ್ಲದೆ ಅವ್ಯವಸ್ಥೆಯ ಆಗರವಾಗಿದೆ.
ಭೀಮನಗರ ಬಡಾವಣೆಯಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ ಅಂಗನವಾಡಿ ಕೇಂದ್ರ ಇದುವರೆಗೂ ಬಣ್ಣವನ್ನೇ ಕಾಣದ ಕಗ್ಗತ್ತಲೆಯ ಶಿಶು ಕೇಂದ್ರವಾಗಿದೆ. ಕೇಂದ್ರಕ್ಕೆ ಬರುವ ಮಕ್ಕಳಿಗೆ ಇದೊಂದು ಜೈಲಿನ ಕತ್ತಲೆ ಕೋಣೆಯಂತೆ ಭಾಸವಾಗುತ್ತಿದೆ.
ಮನೆಯಲ್ಲಿ ಆಟವಾಡಿಕೊಂಡು ಕಾಲಕಳೆಯುತ್ತಿದ್ದ ಮಕ್ಕಳನ್ನು ಪೋಷಕರು ಅಂಗನವಾಡಿ ಕೇಂದ್ರಕ್ಕೆ ತಂದು ಬಿಡುತ್ತಾರೆ. ಆದರೆ ಇಲ್ಲಿ ಮಕ್ಕಳಿಗೆ ಯಾವುದೇ ತರಹದ ಅನುಕೂಲಗಳು ಇಲ್ಲದೆ, ಪುಟ್ಟ ಕಂದಮ್ಮಗಳು ಅಂಗನವಾಡಿ ಕೇಂದ್ರದಲ್ಲಿ ಜೈಲಿನ ಕೈದಿಗಳಂತೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗನವಾಡಿಯಲ್ಲಿ ಸೂಕ್ತ ವಿದ್ಯುತ್ ಸಹ ಇಲ್ಲದಿರುವುದು ವಿಪರ್ಯಾಸ.
ಮೂತ್ರ ವಿಸರ್ಜನೆಯ ತಾಣ: ಸರ್ಕಾರ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಪ್ರಕೃತಿಯ ವಾತವರಣ ಸೃಷ್ಟಿಸಿ ಮಕ್ಕಳಿಗೆ ವಿದ್ಯಾದಾನ ಮಾಡಲು ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಆದರೆ ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸುತ್ತುಗೋಡೆಯನ್ನು ಮಾತ್ರ ನಿರ್ಮಾಣ ಮಾಡಿದ್ದು, ಕಾಮಗಾರಿ ಪೂರ್ಣಗೊಳಿಸದೆ ಆವರಣ ರಾತ್ರಿಯ ಹೊತ್ತು ಕುಡುಕರ ತಾಣ ಮತ್ತು ಮೂತ್ರ ವಿಸರ್ಜನೆಯ ಸ್ಥಳವಾಗಿ ಏರ್ಪಟ್ಟಿದೆ.
ಸೂಕ್ತ ಮೈದಾನವಿಲ್ಲ: ಅಧಿಕಾರಿಗಳು ಅಂಗನವಾಡಿ ಕೇಂದ್ರ ತೆರೆದು ಸುತ್ತುಗೋಡೆ ನಿರ್ಮಿಸಿ ಮಕ್ಕಳ ಆಟಿಕೆಗೆ ಸಹಕಾರಿಯಾಗುವಂತೆ ಮೈದಾನ ನಿರ್ಮಾಣ ಮಾಡಬೇಕು ಆದರೆ ಅಧಿಕಾರಿಗಳು ತರಹದ ಯಾವುದೇ ಕೆಲಸ ಮಾಡದೆ ಇರುವುದರಿಂದ ಮೈದಾನದಲ್ಲಿ ಕುಡುಕರ ಬಾಟಲ್, ಕಲ್ಲು, ಮುಳ್ಳುನಿಂದ ಕೂಡಿ ಸಾರ್ವಜನಿಕರ ಮೂತ್ರ ವಿಸರ್ಜನೆಯಿಂದ ಮಕ್ಕಳು ದಿನ ನಿತ್ಯ ದುವಾರ್ಸನೆ ಕುಡಿದು ವಿವಿಧ ಕಾಯಿಲೆಗಳಿಗೆ ಒಳಗಾಗುವಂತೆ ಆಗಿದೆ.
ಸ್ವಚ್ಛತೆ ಮರೀಚಿಕೆ: ಅಂಗನವಾಡಿ ಕೇಂದ್ರಕ್ಕೆ ಕೇವಲ ಸುತ್ತಗೋಡೆ ನಿರ್ಮಿಸಿರುವ ಅಧಿಕಾರಿಗಳು ಸೂಕ್ತ ಭದ್ರತೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದೇ ಕುಡುಕರ ಮತ್ತು ಶೌಚ ವಿಸರ್ಜಣಾ ತಾಣವಾಗಲು ಕಾರಣವಾಗಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತು ಏನು ಮಕ್ಕಳಿಗೆ ಸುಸರ್ಜಿತವಾದ ಕಟ್ಟಡ ಹಾಗೂ ಆವರಣವನ್ನು ನಿರ್ಮಾಣ ಮಾಡಿ ಮಕ್ಕಳ ಆರೋಗ್ಯವನ್ನು ಕಾಪಡಬೇಕು.
ಭೀಮನಗರ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರ ನಗರಸಭೆ ವ್ಯಾಪ್ತಿಗೆ ಒಳಪಡುವುದರಿಂದ ಅನುದಾನವನ್ನು ನಗರಸಭಾ ವತಿಯಿಂದ ಪಡೆದು ಅಭಿವೃದ್ಧಿ ಮಾಡಬೇಕೇ ಹೊರತು ಶಿಶು ಅಭಿವೃದ್ಧಿ ಕಲ್ಯಾಣ ಇಲಾಖೆ ವತಿಯಿಂದ ನಗರದ ಅಂಗನವಾಡಿ ಕೇಂದ್ರ ಶುಚಿತ್ವ ಗೊಳಿಸಲು ಅನುದಾನವಿಲ್ಲ.
-ನಾಗೇಶ್, ಶಿಶು ಅಬಿವೃದ್ಧಿ ಸಹಾಯಕ ಕಲ್ಯಾಣಾಧಿಕಾರಿ
* ಡಿ.ನಟರಾಜು