ರೇವಾರಿ : ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದ ಕಾರಣಕ್ಕೆ ಸೇನೆಯಿಂದ ವಜಾ ಗೊಂಡಿದ್ದ ಭಾರತ-ಪಾಕ್ ಗಡಿಯಲ್ಲಿ ಕರ್ತವ್ಯ ನಿರತನಾಗಿದ್ದ ಬಿಎಸ್‌ಎಫ್ ಯೋಧ ತೇಜ್ ಬಹಾದ್ದೂರ್ ಯಾದವ್ ನ ಪುತ್ರ ರೋಹಿತ್ ಆತನ ಕೋಣೆಯಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಬುಧವಾರ ರಾತ್ರಿ ತನಗೆ ತಾನೇ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೋಹಿತ್ ಹರಿಯಾಣದ ರೇವಾರಿಯ ನಿವಾಸಿ. ಘಟನೆ ಬಗೆ ಪೊಲೀಸ್ ಅಧಿಕಾರಿಗಳು ಎಎನ್‌ಐ ಗೆ ಹೇಳಿರುವುದು ಇಷ್ಟು : ರೋಹಿತ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಮಗೆ ಫೋನ್ ಕರೆ ಬಂತು. ಅಪರಾಧ ಸ್ಥಳಕ್ಕೆ ಹೋದಾಗ ರೋಹಿತ್ ಇದ್ದ ಕೋಣೆ ಒಳಗಿಂದ ಲಾಕ್ ಆಗಿತ್ತು. ಆತನ ದೇಹ ಹಾಸಿಗೆ ಮೇಲೆ ಬಿದ್ದಿತ್ತು. ಆತನ ಕೈಯಲ್ಲಿ ಪಿಸ್ತೂಲು ಇತ್ತು. ಆತನ ತಂದೆ ತೇಜ್ ಬಹಾದ್ದೂರ್ ಕುಂಭ ಮೇಳಕ್ಕೆ ಹೋಗಿದ್ದುದಾಗಿ ಗೊತ್ತಾಯಿತು. ಒಡನೆಯೇ ವಿಷಯವನ್ನು ಅವರಿಗೆ ತಿಳಿಸಿದೆವು.