ಮುಂಬೈ:ಹೊಸ ಬೆಳವಣಿಗೆಯೊಂದರಲ್ಲಿ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಸತೀಶ್ ಸಾಲ್ಯಾನ್ ಮೂವರ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ದಿಶಾ ಸಾಲ್ಯಾನ್ ಸಾವಿನ ವಿಚಾರದಲ್ಲಿ ಊಹಾಪೋಹಗಳನ್ನು ಹಬ್ಬಿಸುತ್ತಿರುವ ಮೂವರು ಮಂದಿ ವಿರುದ್ಧ ದೂರು ದಾಖಲಿಸಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಈ ಬಗ್ಗೆ ಕಾನೂನು ಸಲಹೆ ಪಡೆಯುತ್ತಿರುವುದಾಗಿ ವರದಿ ವಿವರಿಸಿದೆ.
ದಿಶಾ ಸಾಲ್ಯಾನ್ ತಂದೆಯ ಹೇಳಿಕೆಯನ್ನು ಮುಂಬೈ ಪೊಲೀಸ್ ಅಧಿಕಾರಿಗಳು ದಾಖಲಿಸಿಕೊಂಡಿದ್ದು, ಶೀಘ್ರದಲ್ಲಿಯೇ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ದಿಶಾ ಸಾಲ್ಯಾನ್ ಸಾವಿನ ವಿಚಾರದಲ್ಲಿಯೂ ಸಂಬಂಧ ಕಲ್ಪಿಸಿ ಹಲವಾರು ವಾಟ್ಸಪ್ ಫಾರ್ವರ್ಡ್ ಸಂದೇಶ, ಸಂಚಿನ ಥಿಯರಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಸುದ್ದಿಯನ್ನು ಹರಿಬಿಡುತ್ತಿದ್ದಾರೆ ಎಂದು ದಿಶಾ ತಂದೆ ಸತೀಶ್ ಸಾಲ್ಯಾನ್ ಆರೋಪಿಸಿದ್ದಾರೆ.
ಹಲವಾರು ರಾಜಕಾರಣಿಗಳು ಕೂಡಾ ಸುಶಾಂತ್ ಸಿಂಗ್ ರಜಪೂತ್ ಮತ್ತು ದಿಶಾ ಸಾಲ್ಯಾನ್ ಸಾವಿನ ಪ್ರಕರಣದ ಬಗ್ಗೆ ಸಂಬಂಧ ಕಲ್ಪಿಸಿ ಆರೋಪಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಮುಂಬೈನ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ದಾಖಲಿಸಿರುವುದಾಗಿ ಸತೀಶ್ ಸಾಲ್ಯಾನ್ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಗಳಿಂದ ತಮಗಾದ ಮಾನಸಿಕ ಹಿಂಸೆಯ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಹೇಳಿದ್ದಾರೆ. ಈ ಮೂವರು ಬೇಕಾಬಿಟ್ಟಿ ಸುಳ್ಳು ಕಥೆಗಳನ್ನು ಕಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದಾಗಿ ಆರೋಪಿಸಿದ್ದಾರೆ.
ಯಾರು ಆ ಮೂವರು:
ಸತೀಶ್ ಸಾಲ್ಯಾನ್ ಅವರು ದೂರಿನಲ್ಲಿ ಉಲ್ಲೇಖಿಸಿರುವಂತೆ ಪುನೀತ್ ವಶಿಷ್ಠಾ, ಸಂದೀಪ್ ಮಲಾನಿ ಹಾಗೂ ನಮನ್ ಶರ್ಮಾ ಸೇರಿದಂತೆ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಮೂವರು ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಮತ್ತು ಊಹಾಪೋಹದ ಸುದ್ದಿ ಹಾಕುವ ಮೂಲಕ ತಮ್ಮನ್ನು ತೇಜೋವಧೆ ಮಾಡಿರುವುದಾಗಿ ದೂರಿದ್ದಾರೆ.