Advertisement

ಮಂಜುನಾಡಿನ ಮತ್ತೂಬ್ಬ ಹುಡುಗಿ ದಿಶಾ

06:00 AM Aug 05, 2018 | Team Udayavani |

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಹಲವು ಚಿತ್ರಗಳಲ್ಲಿ ನಾಯಕಿಯರಾಗಿಯೂ, ದೊಡ್ಡ ಸುದ್ದಿ ಮಾಡದ ಅನೇಕ ನಟಿಯರಿದ್ದಾರೆ. ಅವರು ಹಲವು ಸಿನೆಮಾಗಳಲ್ಲೇನೋ ನಟಿಸಿರುತ್ತಾರೆ. ಆದರೆ, ಅವರು ದೊಡ್ಡ ಮಟ್ಟಿಗೆ ಪರಿಚಿತರಾಗಿರುವುದಿಲ್ಲ. ಅಂತಹ ಸಾಲಿನಲ್ಲಿ ದಿಶಾ ಪೂವಯ್ಯ ಸಹ ಒಬ್ಬರು.

Advertisement

ದಿಶಾ ಪೂವಯ್ಯ ಕಳೆದ ಆರು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಕನ್ನಡ ಸಿನಿಮಾಗಳನ್ನು ತಪ್ಪದೇ ನೋಡುವವರಿಗೆ ಒಂದಲ್ಲ ಒಂದು ಸಿನಿಮಾದಲ್ಲಿ ದಿಶಾ ಕಂಡಿರುತ್ತಾರೆ. ಸ್ಲಂ, ಮಳ್ಳಿ, ಆಶೀರ್ವಾದ, ರಿಯಲ್‌ ಪೊಲೀಸ್‌, ದಂಡು, ಶಿವು-ಪಾರು, ಶ್ರೀಸಾಯಿ ಸೇರಿದಂತೆ ಇನ್ನಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳನ್ನು ನೀವು ನೋಡಿದ್ದರೆ, ಅವರ ಪರಿಚಯ ಸಿಗಬಹುದು. ಇಷ್ಟಾದರೂ ದಿಶಾ ಯಾಕೆ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲಿಲ್ಲ, ಇದ್ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಲಿಲ್ಲ. ಅದೇ ಕಾರಣಕ್ಕೆ ದಿಶಾ ಇನ್ನೂ ಎಲೆ ಮರೆಯ ಕಾಯಿಯಾಗಿಯೇ ಉಳಿದು ಕೊಂಡಿದ್ದಾರೆ ಎಂದರೆ ತಪ್ಪಿಲ್ಲ.
ಇಷ್ಟು ಸಿನೆಮಾ ಗಳಲ್ಲಿ ನಟಿಸಿದ ನಂತರ ದಿಶಾಗೆ ಯಾವ ಸಿನೆಮಾವನ್ನು, ಪಾತ್ರವನ್ನು ಆಯ್ಕೆ ಮಾಡಿದರೆ ತನಗೆ ಹೆಸರು ಬರಬಹುದೆಂಬುದನ್ನು ಅರ್ಥವಾಗಿದೆಯಂತೆ. 

“ನಾನು ಚಿತ್ರರಂಗಕ್ಕೆ ಬಂದ ಸಮಯದಲ್ಲಿ ನನಗೆ ಸಿನಿಮಾ ಆಯ್ಕೆಯ ಬಗ್ಗೆ ಗೊತ್ತಿರಲಿಲ್ಲ. ಅನುಭವ ಸಹ ಇರಲಿಲ್ಲ. ಇಷ್ಟವಾಗಿದ್ದನ್ನು ಒಪ್ಪಿಕೊಳ್ಳುತ್ತಿದ್ದೆ. ಆದರೆ, ಕೆಲವೊಮ್ಮೆ ಹೇಳ್ಳೋದು ಒಂದು, ಮಾಡೋದು ಒಂದು ಆಗುತ್ತದೆ. ಮಳ್ಳಿ ಹಾಗೂ ಆಶೀರ್ವಾದ ಸಿನೆಮಾಗಳಲ್ಲಿ ಆಗಿದ್ದು ಅದೇ. ನಿರ್ದೇಶಕರು ಹೇಳಿದಾಗ ಪಾತ್ರ ಚೆನ್ನಾಗಿತ್ತು. ಆದರೆ, ಅದನ್ನು ತೆಗೆದ ರೀತಿ ಸರಿಯಿರಲಿಲ್ಲ. ಆ ಸಿನೆಮಾಗಳನ್ನು ನಾನು ಮಾಡಬಾರದಿತ್ತೆಂದು ಈಗ ಅನಿಸುತ್ತಿದೆ. ಆದರೆ, ಈಗ ಸಾಕಷ್ಟು ವಿಷಯ ತಿಳಿದುಕೊಂಡಿದ್ದೇನೆ. ಅಷ್ಟೇ ಅಲ್ಲ, ತುಂಬಾ ಮಾಗಿದ್ದೇನೆ. ಅದೇ ಕಾರಣದಿಂದ ಚೂಸಿಯಾಗುತ್ತಿದ್ದೇನೆ. ಜೊತೆಗೆ ಇಷ್ಟು ವರ್ಷದ ಜರ್ನಿ ನನಗೊಂದು ಜವಾಬ್ದಾರಿ ಮತ್ತು ಶಿಸ್ತು ಕಲಿಸಿದೆ’ ಎನ್ನುತ್ತಾರೆ ದಿಶಾ.

ಇಷ್ಟು ವರ್ಷದ ಚಿತ್ರರಂಗದ ಅನುಭವದಲ್ಲಿ ದಿಶಾಗೆ ಒಂದು ವಿಷಯ ಅರ್ಥವಾಗಿದೆ. ಅದೇನೆಂದರೆ, ಅದು ಕೇವಲ ಸಿನಿಮಾರಂಗವನ್ನು ನಂಬಿಕೊಂಡು ಕೂತರೆ ಕಷ್ಟ, ಸಿನಿಮಾದ ಜೊತೆಗೆ ಶಿಕ್ಷಣ ಕೂಡಾ ಮುಖ್ಯ ಎಂಬುದು. ಅದೇ ಕಾರಣದಿಂದ ಚಿತ್ರರಂಗದಲ್ಲಿ ನಾಲ್ಕು ವರ್ಷ ಕಳೆದ ನಂತರ ಶಿಕ್ಷಣದ ಬಗ್ಗೆ ಗಮನಹರಿಸಿದ ದಿಶಾ ಸಿವಿಲ್‌ ಎಂಜಿನಿಯರಿಂಗ್‌ ಮುಗಿಸಿದ್ದಾರೆ.  ಈಗ ಇಂಟಿರಿಯರ್‌ ಡಿಸೈನ್‌ ಹಾಗೂ ಜ್ಯುವೆಲ್ಲರಿ ಡಿಸೈನ್‌ ಕೋರ್ಸ್‌ ಮಾಡುವ ಸಿದ್ಧತೆಯಲ್ಲಿದ್ದಾರೆ. “ಸಿನೆಮಾದ ಜೊತೆ ಬೇರೊಂದು ಉದ್ಯೋಗ ಕೂಡಾ ಮುಖ್ಯ. ಸಿನೆಮಾವನ್ನೇ ನಂಬಿಕೊಂಡು ಕೂರುವಂತಿಲ್ಲ’ ಎನ್ನುತ್ತಾರೆ.

ಈ ಮಧ್ಯೆ ದಿಶಾ ಅಭಿನಯದ ಇನ್ನಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. ಕನ್ನಡದಲ್ಲಿ ತ್ರಾಟಕ, ಸಾಲಿಗ್ರಾಮ, ಟರ್ನಿಂಗ್‌ ಪಾಯಿಂಟ್‌ ಹಾಗೂ ಒಂದು ದಿನ ಒಂದು ಕ್ಷಣ ಚಿತ್ರಗಳಲ್ಲಿ ಅವರು ನಟಿಸಿದ್ದರೆ, ಅದರ ಜೊತೆ ತಮಿಳಿನ ಹಾಗೂ ತೆಲುಗಿನ ಒಂದೊಂದು ಚಿತ್ರದಲ್ಲೂ ದಿಶಾ ನಟಿಸುತ್ತಿದ್ದಾರೆ. ಅಮಲಾ ಪೌಲ್‌ ಅವರ ಸಹೋದರ ನಾಯಕರಾಗಿರುವ ತಮಿಳು ಸಿನೆಮಾದಲ್ಲಿ ದಿಶಾಗೆ ಅವಕಾಶ ಸಿಕ್ಕಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ತಮಿಳಿನಲ್ಲೂ ಒಂದಷ್ಟು ಚಿತ್ರಗಳಲ್ಲಿ ನಟಿಸುವ ನಿರೀಕ್ಷೆಯಲ್ಲಿದ್ದಾರೆ ದಿಶಾ. ದಿಶಾಗೆ ಕನ್ನಡದಲ್ಲಿ ಸಿಗದ ಯಶಸ್ಸು ಮತ್ತು ಅದೃಷ್ಟ, ಪರಭಾಷೆಯ ಚಿತ್ರಗಳಲ್ಲಾದರೂ ಸಿಗುತ್ತದಾ ಎಂದು ನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next