Advertisement
ಬಾಗಿಲು ಮತ್ತು ಕಿಟಕಿಗಳಿಲ್ಲದೆ, ಅನೈತಿಕ ಚಟುವಟಿಕೆಗಳ ತಾಣದಂತಾಗಿದ್ದ ಶಾಲೆಯ ಕೆಲವು ಕೋಣೆಗಳು, ಅವುಗಳ ದುರಾವಸ್ಥೆ, ಅಡುಗೆ ಕೋಣೆಯಲ್ಲಿ ಕಸ ಹಾಕಿರುವುದು, ಅದರ ಹಿಂಭಾಗದಲ್ಲಿಯೇ ಮೂತ್ರ ಮಾಡುತ್ತಿರುವುದನ್ನು ಕಂಡು ನ್ಯಾಯಾಧೀಶರು ತೀವ್ರ ಬೇಸರ ವ್ಯಕ್ತಪಡಿಸಿದರು.
Related Articles
Advertisement
ಹಾಳು ಹೊಡೆಯುವಂತಿದ್ದ ಶಾಲಾ ಕೋಣೆಗಳು, ಆಟದ ಮೈದಾನ ಸರಿಯಾಗಿಲ್ಲದಿರುವುದು, ಸಸಿ ನೆಡದೇ ಇರುವುದನ್ನು ಗಮನಿಸಿದ ನ್ಯಾಯಾಧೀಶರು, ಇಂತಹ ಪರಿಸರದಲ್ಲಿ ಮಕ್ಕಳಿಗೆ ಕಲಿಸುವುದು ತುಂಬಾ ಕಷ್ಟ. ಇದು ನಾಗರಿಕ ಸಮಾಜ ಅನ್ನಿಸಿಕೊಳ್ಳುವುದಿಲ್ಲ. ಇದು ಸ್ಪಷ್ಟವಾಗಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇಂತಹ ಪರಿಸರದಲ್ಲಿ ಮಕ್ಕಳು ಕಲಿಯಲು ಹೇಗೆ ಸಾಧ್ಯ? ನಿಮ್ಮ ಧೋರಣೆ ಸರಿಯಲ್ಲ. ಇದು ಬಡತನವನ್ನು ಅಣಕಿಸಿದಂತಿದೆ. ಶಿಕ್ಷಣ ಇಲಾಖೆಯು ಇತ್ತ ಕಡೆ ಗಮನ ಕೊಡಬೇಕು ಎಂದು ತಿಳಿಸಿದರು.
ಶಿಕ್ಷಕಿಯರ ವಿರುದ್ಧ ದೂರು: ನಮ್ಮೂರಿಗೆ ಶಿಕ್ಷಕಿಯರು ಬಂದ ಮೇಲೆಯೇ ಈ ದುಸ್ಥಿತಿ ಬಂದಿದೆ. ಅವರಿಂದ ಊರಿಗೆ ಕೆಟ್ಟ ಹೆಸರು ಬರುತ್ತಿದೆ. ಅವರಲ್ಲಿ ಹೊಂದಾಣಿಕೆ ಇಲ್ಲ. ಸರಿಯಾಗಿ ಪಾಠ ಮಾಡುವುದಿಲ್ಲ. ನೊಟೀಸ್ ನೀಡಿದರೆ ಹರಿದು ಹಾಕುತ್ತಾರೆ. ಬೇರೆಡೆ ವರ್ಗಾವಣೆ ಮಾಡಿದರೆ ಸಂಘಗಳಿಂದ ಒತ್ತಡ ಹೇರಿ ಮತ್ತೆ ಇಲ್ಲಿಗೆ ಬರುತ್ತಾರೆ. ಮುಖ್ಯ ಶಿಕ್ಷಕರಾದ ಹೂಗಾರ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದು ಅವರ ಮಾತುಗಳನ್ನು ಯಾರೂ ಕೂಡ ಕೇಳುವುದಿಲ್ಲ. ಎಂಟನೇ ತರಗತಿ ಓದುವ ಮಕ್ಕಳಿಗೆ ಎಬಿಸಿಡಿ ಬರುವುದಿಲ್ಲ. ಮಕ್ಕಳು ಹೊರಗಡೆ ಆಟವಾಡುತ್ತಿದ್ದರೆ ತಮಗೇನೂ ಸಂಬಂಧವಿಲ್ಲ ಎನ್ನುವಂತೆ ಶಿಕ್ಷಕಿಯರು ಒಳಗಿರುತ್ತಾರೆ ಎಂದು ಸ್ಥಳದಲ್ಲಿದ್ದ ಎಲ್ಲರೂ ಶಾಲಾ ಶಿಕ್ಷಕಿಯರ ವಿರುದ್ಧ ದೂರಿದರು. ಈ ಬಗ್ಗೆ ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ವರದಿ ಮಾಡಿರಿ ಎಂದು, ನ್ಯಾಯಾಧೀಶರು ಬಿಆರ್‌ಸಿ ಅವರಿಗೆ ನಿರ್ದೇಶನ ನೀಡಿದರು.
ಏಕತೆಯಿಂದ ಬದಲಾವಣೆ: ಬೇರೆ ಬೇರೆ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಇದ್ದಾಗ ಇಂತಹ ದುಸ್ಥಿತಿ ಎದುರಾಗುತ್ತದೆ. ಎಲ್ಲರೂ ಒಟ್ಟು ಗೂಡಿ ಕೆಲಸ ಮಾಡಿದಾಗ ಬದಲಾವಣೆ ತರಲು ಸಾಧ್ಯವಾಗುತ್ತದೆ. ತಾವು ಕೂಡ ಶಿಕ್ಷಕರಿಗೆ ಅರಿವು ಮೂಡಿಸಿರಿ. ಕಾನೂನಿನ ಬಗ್ಗೆ ತಿಳಿವಳಿಕೆ ಮೂಡಿಸಿರಿ ಎಂದು ನ್ಯಾಯಾಧೀಶರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶರಾದ ಮನಗೂಳಿ ಪ್ರೇಮಾವತಿ, ಹಿರಿಯ ಸಿವಿಲ್ ನ್ಯಾಯಾಧಿಧೀಶರಾದ ಆರ್.ರಾಘವೇಂದ್ರ ಹಾಗೂ ಇನ್ನಿತರ ನ್ಯಾಯಾಧೀಶರಿಗೆ ಸಲಹೆ ನೀಡಿದರು.
ಗ್ರಾಮಸಭೆಗಳಲ್ಲಿ ಮಾತನಾಡಿ: ಗ್ರಾಮಸಭೆ ಎಂದರೆ ಅದು ಗ್ರಾಮದ ಸಂಸತ್ತು ಇದ್ದ ಹಾಗೆ. ತಾವು ನಡೆಸುವ ಗ್ರಾಮಸಭೆಗಳಲ್ಲಿ ಶಾಲೆಯ ಸ್ಥಿತಿಗತಿ ಬಗ್ಗೆ ಚರ್ಚಿಸಿಲ್ಲವೇ ಎಂದು ನ್ಯಾಯಾಧೀಶರು, ಗ್ರಾಪಂ ಸದಸ್ಯರಿಗೆ ಕೇಳಿದರು. ಗ್ರಾಮಸಭೆಗಳಲ್ಲಿ ಶಾಲೆಯ ಬಗ್ಗೆ ಒಬ್ಬರೂ ಮಾತನಾಡುವುದಿಲ್ಲ ಎಂದು ಕೆಲವರು ಹೇಳಿದರು. ದಯವಿಟ್ಟು ತಾವು ಇನ್ನುಮುಂದೆ ಗ್ರಾಮಸಭೆಗಳಲ್ಲಿ ಶಾಲೆಯ ಸ್ಥಿತಿಗತಿಯ ಬಗ್ಗೆ ಚರ್ಚಿಸಿರಿ. ನಿಮ್ಮ ಅಭಿವೃದ್ಧಿ ನಿಮ್ಮ ಕೈಯಲ್ಲಿಯೇ ಇದೆ ಎಂದು ನ್ಯಾಯಾಧೀಶರು ಗ್ರಾಮಸ್ಥರಿಗೆ ಸಲಹೆ ನೀಡಿದರು. ಇನ್ನುಮುಂದೆ ಸ್ವಚ್ಛತೆಗೆ ಒತ್ತು ಕೊಡುತ್ತೇವೆ ಎಂದು ನಿಮ್ಮ ಮುಂದೆ ಶಪಥ ಮಾಡುತ್ತೇವೆ. ಆದರೆ, ಇಲ್ಲಿನ ಎಲ್ಲ ಶಿಕ್ಷಕಿಯರನ್ನು ಬೇರೆ ಕಡೆ ವರ್ಗಾವಣೆ ಮಾಡಿ, ಗ್ರಾಮದ ಅಭಿವೃದ್ಧಿಗೆ ಸಹಕರಿಸಿರಿ ಎಂದು ಗ್ರಾಮಸ್ಥರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.
ಅಂಗನವಾಡಿಗಳಿಗೆ ಭೇಟಿ: ಗ್ರಾಮದ 2ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ನ್ಯಾಯಾಧೀಶರು, ಇಲ್ಲಿ ತಾವು ಅಡುಗೆಗೆ ಬಳಸುವ ಎಣ್ಣೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನು ಪರೀಕ್ಷಿಸಿ, ಬಳಸಿರಿ ಎಂದು ಅಂಗನವಾಡಿ ಸಹಾಯಕಿಯರಿಗೆ ಸೂಚಿಸಿದರು. ಅಂಗನವಾಡಿ ಕೇಂದ್ರ-1ರಲ್ಲಿ ಕಿಟಕಿಗಳು ಇಲ್ಲದಿರುವುದನ್ನು ನೋಡಿದರು. ವಿದ್ಯುತ್ ಬಿಲ್ ಕಟ್ಟದೇ ಇರುವುದಕ್ಕೆ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಅಂಗನವಾಡಿ ಸಹಾಯಕಿಯರು ತಿಳಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಶ್ರೇಯಾಂಶ ದೊಡ್ಡಮನಿ ಇದ್ದರು.