Advertisement

ಸ್ವಪಕ್ಷೀಯರಿಂದಲೇ ಕೈ ನಾಯಕರ ಮೇಲೆ ಅಸಮಾಧಾನ

11:13 PM Jun 07, 2020 | Sriram |

ಉಡುಪಿ: ಇತ್ತೀಚೆಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ , ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಅವರಿಗೆ ಸ್ವರ್ಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿಚಾರವನ್ನು ಮನದಟ್ಟು ಮಾಡುವಲ್ಲಿ ಜಿಲ್ಲೆಯ ಕಾಂಗ್ರೆಸ್‌ ಪ್ರಮುಖ ನಾಯಕರು ವಿಫ‌ಲರಾಗಿದ್ದಾರೆ ಎಂದು ಕೆಲ ಕಾಂಗ್ರೆಸ್‌ ಮುಖಂಡರು ಬಹಿರಂಗವಾಗಿ ನಾಯಕರ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿ ಪಕ್ಷದ ಕೆಲ ನಾಯಕರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ ಎನ್ನಲಾಗಿದೆ.

Advertisement

ಸ್ವರ್ಣಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿಚಾರದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಸತತ ಹೋರಾಟ ನಡೆಸಿಕೊಂಡು ಬಂದಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷರು ಜಿಲ್ಲೆಗೆ ಬಂದಿದ್ದ ವೇಳೆ ನಡೆದ ಕಾಂಗ್ರೆಸ್‌ ಸಭೆಯಲ್ಲಿ ಹಾಗೂ ಮಾಧ್ಯಮ ಗೋಷ್ಠಿಯಲ್ಲಿ ಅವರು ಅಕ್ರಮ ಮರಳುಗಾರಿಕೆ ವಿಚಾರ ಪ್ರಸ್ತಾವಿಸಿರಲಿಲ್ಲ. ಇದು ಪಕ್ಷದ ಕೆಲ ನಾಯಕರಿಗೆ ಬೇಸರ ತರಿಸಿತ್ತು. ಅಕ್ರಮ ಮರಳುಗಾರಿಕೆ ಬಗ್ಗೆ ಕಾರ್ಯಾಧ್ಯಕ್ಷರಿಗೆ ಮಾಹಿತಿ ನೀಡುವಲ್ಲಿ ಪಕ್ಷದ ಪ್ರಮುಖ ನಾಯಕರು ವಿಫ‌ಲರಾಗಿದ್ದಾರೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ , ನಗರಸಭೆ ಸದಸ್ಯ ರಮೇಶ್‌ ಕಾಂಚನ್‌, ಹಿಂದುಳಿದ ಮೋರ್ಚಾ ಅಧ್ಯಕ್ಷ ಯತೀಶ್‌ ಕರ್ಕೇರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ ಇವರು ಅಸಮಾಧಾನ ಹೊರಹಾಕಿದ್ದರು.

ಅನಂತರದಲ್ಲಿ ನಡೆದ ವಿದ್ಯಮಾನದಲ್ಲಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅವರಿಗೆ ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ನಡೆದಿರುವ ಹಗರಣದ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟ್ವೀಟ್‌ ಮೂಲಕ ತನಿಖೆಗೆ ಆಗ್ರಹಿಸಿದ್ದಾರೆ. ಆದರೆ ಜಿಲ್ಲಾ ಕಾಂಗ್ರೆಸ್‌ ಈ ವಿಚಾರದಲ್ಲಿ ತಮ್ಮ ಗಮನಕ್ಕೆ ತಾರದೇ ಇರುವುದು ಬೇಸರ ತಂದಿದೆ. ತಾವು ಈ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದು ವಿಧಾನಸಭೆಯಲ್ಲಿ ಹಗರಣದ ಕುರಿತು ಪ್ರಸ್ತಾವ ಮಾಡುವಂತೆ ಅವರು ಆಗ್ರಹಿಸಿದ್ದಾರೆ.

ಸಲೀಂ ಭರವಸೆ
ಸಲೀಂ ಅಹ್ಮದ್‌ ಅವರು ಅಕ್ರಮ ಮರಳುಗಾರಿಕೆ ಬಗ್ಗೆ ತನಗೆ ಪೂರ್ಣ ಮಾಹಿತಿ ಇಲ್ಲ ಎಂದು ಹೇಳಿ ಕಾಂಗ್ರೆಸ್‌ ಕಚೇರಿಯಲ್ಲಿ ಅಸಮಾಧಾನಗೊಂಡ ನಾಯಕರನ್ನು ಕುಳ್ಳಿರಿಸಿ ಸಮಾಧಾನಪಡಿಸಿದ್ದಲ್ಲದೆ ಮರಳುಗಾರಿಕೆ ವಿಚಾರದಲ್ಲಿ ಪ್ರಖ್ಯಾತ್‌ ಶೆಟ್ಟಿ, ರಮೇಶ್‌ ಕಾಂಚನ್‌ ಹಾಗೂ ಇತರರಿಂದ ಮಾಹಿತಿ ಪಡೆದುಕೊಂಡರು. ಹಗರಣದ ಬಗ್ಗೆ ರಾಜ್ಯ ಮಟ್ಟದಲ್ಲಿ ರಾಜ್ಯ ಅಧ್ಯಕ್ಷರ ಗಮನಕ್ಕೆ ತಂದು ವಿಧಾನ ಸಭೆಯಲ್ಲಿ ಪ್ರಸ್ತಾವ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಯು.ಆರ್‌ ಸಭಾಪತಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್‌ ಅಮೀನ್‌ ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next