Advertisement

ಕನ್ನಡಕ್ಕೆ ಅವಮಾನ: ಅಂಚೆ ಸಿಬಂದಿ ಅಮಾನತ್ತಿಗೆ ಸಾಹಿತ್ಯ ಪರಿಷತ್ತು ಆಗ್ರಹ

10:09 PM Sep 11, 2022 | Team Udayavani |

ಬೆಂಗಳೂರು : ಕೊಪ್ಪಳ ಜಿಲ್ಲೆಯ ಗಂಗಾವತಿಯ ಮುಖ್ಯ ಅಂಚೆ ಕಚೇರಿಯಲ್ಲಿ ಕನ್ನಡಕ್ಕೆ ಅವಮಾನ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಖೇದಕರ. ಕನ್ನಡದಲ್ಲಿ ಬರೆದ ಅರ್ಜಿ ತಿರಸ್ಕರಿಸಿದ ಘಟನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ತೀರ್ವವಾಗಿ ಖಂಡಿಸುವುದರೊಂದಿಗೆ ಕನ್ನಡದ ಕುರಿತು ಅಸಡ್ಡೆತೋರಿದ ಸಿಬಂದಿಯನ್ನು ತಕ್ಷಣದಲ್ಲಿ ಅಮಾನತ್ತು ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಧಾನ ಅಂಚೆ ಕಚೇರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

Advertisement

ಗಂಗಾವತಿಯ ಪತ್ರಕರ್ತ ಸುದರ್ಶನ ಎನ್ನುವವರು ಇದೇ ತಿಂಗಳ ದಿನಾಂಕ 10 ರಂದು ತುಳಜಾ ಭವಾನಿ ದೇವಸ್ಥಾನಕ್ಕೆ ನಗದು ಕಾಣಿಕೆ ಕಳಿಸಲು ಗಂಗಾವತಿ ಮುಖ್ಯ ಅಂಚೆಕಚೇರಿಗೆ ತೆರಳಿದ್ದು, ಅಲ್ಲಿಂದ ಎಮ್ಓ ಮೂಲಕ ಹಣ ಕಳಿಸಲು ವಿನಂತಿಸಿದ್ದರು. ಅದಕ್ಕಾಗಿ ಎಮ್ ಓ ಫಾರ್ಮ್ ನ ಕನ್ನಡದಲ್ಲಿ ತುಂಬಿ ಕೊಟ್ಟಿದ್ದರು. ಅದಕ್ಕೆ ಗಂಗಾವತಿ ಅಂಚೆ ಕಚೇರಿ ಸಿಬಂದಿ ಕನ್ನಡದಲ್ಲಿ ಬರೆದಿರುವ ಎಮ್ಓ ಫಾರ್ಮ್ ಸ್ವೀಕರಿಸದೆ ಮರಳಿ ಕೊಟ್ಟಿರುತ್ತಾರೆ ಎಂದು ತಿಳಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಫಾರ್ಮ ತುಂಬಿದರೆ ಮಾತ್ರ ಎಮ್ಓ ಮಾಡಲಾಗುವುದು. ಕನ್ನಡದಲ್ಲಿ ಬರೆದರೆ ಈ ಅಂಚೆ ಕಚೇರಿಯಿಂದ ಕಳಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ ಎಂದು ಸುದರ್ಶನ ದೂರಿದ್ದಾರೆ.

ಆ ಸಂದರ್ಭದಲ್ಲಿ ಅಂಚೆಕಚೇರಿಗೆ ತೆರಳಿದ ಸುದರ್ಶನ ಅವರು ಈ ಎಲ್ಲಾ ಘಟನೆಯನ್ನು ಚಿತ್ರೀಕರಿಸಿಕೊಂಡು ಕನ್ನಡ ಸಾಹಿತ್ಯ ಪರಿಷತ್ತಿಗೆ ದೂರನ್ನು ನೀಡಿರುತ್ತಾರೆ. ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಗಂಗಾವತಿ ಅಂಚೆ ಕಚೇರಿಯಲ್ಲಿ ಕನ್ನಡಕ್ಕೆ ಅವಮಾನ ಮಾಡುತ್ತಿರುವುದು ಕಂಡು ಬರುತ್ತಿದೆ. ಕನ್ನಡ ನಾಡು ನುಡಿಗೆ ಅವಮಾನ ಆದರೆ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಸುಮ್ಮನಿರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ತಕ್ಷಣ ಅಂಚೆ ಇಲಾಖೆಯ ಮುಖ್ಯಸ್ಥರಿಗೆ ಕನ್ನಡ ಸಾಹಿತ್ಯ ಪರಿಷತ್ತು ಪತ್ರಬರೆಯುವ ಮೂಲಕ ಎಚ್ಚರಿಕೆ ನೀಡಿದೆ. ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೂ ಈ ಬಗ್ಗೆ ಪತ್ರ ಬರೆದು ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸುವಂತೆ ಆಗ್ರಹಿಸಲಾಗಿದೆ.

ಪ್ರಸ್ತುತ ಪತ್ರಕರ್ತ ಸುದರ್ಶನ ಅವರಿಗೆ ಕನ್ನಡದ ಬದಲಿಗೆ ಆಂಗ್ಲ ಭಾಷೆಯಲ್ಲಿ ಎಮ್ ಓ ಫಾರಂ ತುಂಬಿ ಕೊಡುವಂತೆ ಹೇಳಿದ ಗಂಗಾವತಿ ಅಂಚೆ ಇಲಾಖೆಯ ಸಿಬಂದಿಯನ್ನು ತತ್ ಕ್ಷಣ ಅಮಾನತ್ತಿನಲ್ಲಿ ಇಟ್ಟು ವಿಚಾರಣೆ ನಡೆಸಬೇಕು. ಅದರಂತೆ ಸುದರ್ಶನ ಅವರು ಗಂಗಾವತಿ ಅಂಚೆ ಇಲಾಖೆಯ ಕಚೇರಿಯಲ್ಲಿ ಚಿತ್ರೀಕರಿಸಿದ ವಿಡಿಯೋ ತುಣುಕನ್ನು ಗಂಭೀರವಾಗಿ ಪರಿಶೀಲಿಸಿ ಕನ್ನಡಕ್ಕೆ ಅವಮಾನ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಆಗ್ರಹಿಸಿದ್ದಾರೆ.

ಅಂಚೆ ಇಲಾಖೆ ಕೇಂದ್ರ ಸರಕಾರದ ಅಧೀನದಲ್ಲಿ ಇದ್ದರೂ ಸಹಿತ, ನಮ್ಮ ರಾಜ್ಯದಲ್ಲಿ ಇರುವ ಅಂಚೆ ಇಲಾಖೆ ಸಿಬಂದಿಗಳು ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಮೂಲಕ ಕನ್ನಡಕ್ಕೆ ಗೌರವ ನೀಡಬೇಕು. ಅಂಚೆ ಇಲಾಖೆಯಲ್ಲಿ ಯಾವುದೇ ಸೇವೆ ಪಡೆಯಲು ಬಂದ ಕನ್ನಡಿಗರಿಗೆ ಅವಮಾನ ಆಗುವಂತೆ ಯಾವುದೇ ಸಿಬಂದಿಗಳು ನಡೆದುಕೊಳ್ಳಬಾರದು. ಈ ಸಂದೇಶ ಪ್ರತಿಯೊಬ್ಬ ಅಂಚೆ ಇಲಾಖೆಯ ಸಿಬಂದಿಗಳು ತಿಳಿದುಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣವನ್ನು ರಾಜ್ಯ ಹಾಗೂ ಕೇಂದ್ರ ಸರಕಾರ ಮತ್ತು ಅಂಚೆ ಇಲಾಖೆ ಗಂಭೀರವಾಗಿ ಪರಿಗಣಿಸಿ ತಪಿತಸ್ಥರನ್ನು ತಕ್ಷಣದಲ್ಲಿ ಅಮಾನತ್ತಿನಲ್ಲಿ ಇಟ್ಟು ಪ್ರಕರಣವನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ ಎಂದು ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next