Advertisement

ಮೆಣಸಿನಕಾಯಿ ಬೆಳೆಗೆ ರೋಗ: ಕ್ರಮಕ್ಕೆ ಪರಿಹಾರ

03:25 PM Jul 04, 2022 | Team Udayavani |

ರಾಣಿಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಪ್ರಗತಿಪರ ರೈತ ಶಿವಯೋಗಿ ಎಮ್ಮೆರ ಇವರ ಮೆಣಸಿನ ಬೆಳೆ ಕ್ಷೇತ್ರಕ್ಕೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಂತ್ರಿಕ ಸಲಹೆ ನೀಡಿದರು.

Advertisement

ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೆಣಸಿನಕಾಯಿ ಬೆಳೆಗೆ ರೋಗ ಬಾಧೆಗಳು ಹೆಚ್ಚಿಗೆಯಾಗಿವೆ. ಈ ರೋಗಗಳಲ್ಲಿ ಮುರುಟು ರೋಗ ಪ್ರಮುಖವಾಗಿದ್ದು, ಈ ರೋಗದಿಂದ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಲಿದ್ದು, ರೈತರು ಈ ರೋಗಕ್ಕೆ ಪರಿಹಾರವನ್ನು ಕಾಣದ ಮೆಣಸಿನಕಾಯಿ ಬೆಳೆಯುವುದನ್ನು ತ್ಯಜಿಸಿ ಇತರ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸುತ್ತಿದ್ದಾರೆ ಎಂದರು.

ಈ ರೋಗವು ರಸ ಹೀರುವ ಕೀಟಗಳಾದಂತಹ ಥ್ರಿಪ್ಸ್‌ ಕೀಟ ಹಾಗೂ ಮೈಟ್‌ ನುಸಿಯಿಂದ ಹರಡುವುದು. ಥ್ರಿಪ್ಸ್‌ ರಸ ಹೀರುವ ಕೀಟ ನೋಡಲಿಕ್ಕೆ ತಿಳಿ ಹಸಿರು ಬಣ್ಣದಾಗಿದ್ದು, ಅತೀ ಚಿಕ್ಕದಾಗಿರುತ್ತದೆ. ಈ ಕೀಟದ ರಸ ಹೀರುವಿಕೆಯಿಂದ ಎಲೆಗಳ ಅಂಚಿನಿಂದ ಒಳಮುದುರಿಕೊಳ್ಳುತ್ತವೆ. ಇದಕ್ಕೆ ಒಳಮುಟುರು ರೋಗವೆಂದು ಕರೆಯುತ್ತಾರೆ. ಈ ಥ್ರಿಪ್ಸ್‌ ಕೀಟ ರಸ ಹೀರುವುದಲ್ಲದೆ ಹಲವಾರು ವಿವಿಧ ಬಗೆಯ ವೈರಸ್‌(ನಂಜಾಣು)ಗಳನ್ನು ಎಲೆಗಳಲ್ಲಿ ಹರಡುತ್ತದೆ ಎಂದರು.

ಹಲವಾರು ಬಗೆಯ ವೈರಸ್‌ಗಳಲ್ಲಿ “ಟಾನ್ಪೊ’ ವೈರಸ್‌ ಪ್ರಮುಖವಾಗಿದ್ದು, ಇದರಿಂದಾಗಿ ಎಲೆಗಳ ಮಧ್ಯಭಾಗಗಳಲ್ಲಿ ತಗ್ಗುಗಳು ಕಾಣಿಸಿಕೊಳ್ಳುವವು. ಈ ಕೀಟದ ಹಾವಳಿ ಹಾಗೂ ವೈರಸ್‌ ಬಾಧೆ ತೀವ್ರವಾದಾಗ ಎಲೆಗಳು ಗಾತ್ರದಲ್ಲಿ ಅತೀ ಚಿಕ್ಕದಾಗಿ ಹಳದಿ ಬಣ್ಣಕ್ಕೆ ತಿರುಗಿ ಹೂ ಹಾಗೂ ಹಣ್ಣುಗಳನ್ನು ಬಿಡದೆ ಕುಬ್ಜವಾಗಿ ಇರುತ್ತವೆ. ಇದರಿಂದ ಇಳುವರಿಯು ಗಣನೀಯವಾಗಿ ಕುಂಠಿತವಾಗುತ್ತದೆ. ಮುಟುರು ರೋಗಕ್ಕೆ ನಾಂದಿಯಾದ ಇನ್ನೊಂದು ಮುಖ್ಯವಾದ ಕೀಟವಂದರೆ ಮೈಟ್‌ ನುಸಿ, ಇದು ತಿಳಿ ಹಸಿರು ಹಾಗೂ ಬಿಳಿ ಬಣ್ಣದಾಗಿದ್ದು, ಎಲೆಗಳ ಕೆಳಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವವು. ಇವುಗಳ ರಸ ಹೀರುವಿಕೆಯಿಂದ ಎಲೆಗಳು ಅಂಚಿನಿಂದ ಹೊರ ಮಗ್ಗುಲಿಗೆ ಮುದುರಿಕೊಳ್ಳುತ್ತವೆ ಎಂದರು.

ಇವುಗಳ ಹತೋಟಿಗಾಗಿ ವಿವಿಧ ಬಗೆಯ ಕೀಟನಾಶಕಗಳನ್ನು ಸಿಂಪರಣೆ ಮಾಡಿದರೂ ಹತೋಟಿ ಬರುವುದು ಕಷ್ಟ. ಈ ಮುಟುರು ರೋಗದ ನಿಯಂತ್ರಣಕ್ಕಾಗಿ ಸಮಗ್ರಕೀಟ ನಿರ್ವಹಣೆ ಅಂಶ ಅತೀ ಅವಶ್ಯಕವಾಗಿದೆ. ಈ ದಿಶೆಯಲ್ಲಿ ಬ್ಯಾರಿಯರ್‌ (ತಡೆ) ಬೆಳೆ ಒಂದು ಅತ್ಯುತ್ತಮವಾದ ಮುಟುರು ರೋಗ ನಿರ್ವಹಣಾ ಪದ್ಧತಿಯಾಗಿ ಪರಿಣಮಿಸಿದೆ. ಮೆಣಸಿನ ಸಸಿ ನಾಟಿ ಮಾಡುವ 10-15 ದಿವಸ ಪೂರ್ವದಲ್ಲಿ (ಮುಂಚಿತವಾಗಿ) ಕೂರಿಗೆಯಿಂದ ಬಿತ್ತನೆ ಮಾಡಬೇಕು. ಪ್ರತಿ 40-50 ಸಾಲು (24. ಮೀ. ಅಥವಾ 38 ಮೀ.) ಅಂತರದಲ್ಲಿ ಮೆಣಸಿನ ಕುಣಿಗಳ ಮಧ್ಯದಲ್ಲಿ 6 ಅಥವಾ 9 ಸಾಲುಗಳಂತೆ ಬಿತ್ತನೆ ಮಾಡಬೇಕು. ಬಿತ್ತನೆ ಮಾಡುವಾಗ ಸಾಲುಗಳು ಉತ್ತರ-ದಕ್ಷಿಣವಾಗಿ ಇರುವಂತೆ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಈ ರೀತಿ ಬಿತ್ತನೆ ಮಾಡಿದಾಗ ಹಲವಾರು ನೈಸರ್ಗಿಕ ಪರೋಪ ಜೀವಿಗಳಾದಂತಹ ಜೇಡ, ಗುಲಗುಂಜಿ ಹುಳಗಳ ಸಂಖ್ಯೆ ಅಧಿಕವಾಗಿರುತ್ತದೆ. ಇದೇ ರೀತಿ ಜೋಳವನ್ನು ತಡೆ ಬೆಳೆಯಾಗಿ ಬೆಳೆದಾಗ ಜೇಡಗಳ ಸಂಖ್ಯೆ ಅಧಿಕವಾಗಿರುತ್ತದೆ. ಇದರಿಂದಾಗಿ ಸಹಜವಾಗಿಯೇ ಮುಟುರು ರೋಗ ಕಡಿಮೆಯಾಗುವವು. ಈ ರೀತಿ ತಡೆ ಬೆಳೆ ಬೆಳೆಯುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಮುಟುರು ರೋಗ ನಿಯಂತ್ರಣ ಸಾಧ್ಯವಿದೆ ಎಂದು ಹೇಳಿದರು.

ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್‌., ತೋಟಗಾರಿಕೆ ವಿಜ್ಞಾನಿ ಡಾ| ಸಂತೋಷ ಎಚ್‌. ಎಂ., ಪ್ರಗತಿಪರ ರೈತರಾದ ರಮೇಶ ಲಿಂಗದಹಳ್ಳಿ, ಶಿವಾನಂದಪ್ಪ ದಿಪಾಳಿ ಹಾಗೂ ಮತ್ತಿತರ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next