Advertisement
ಜಿಲ್ಲೆಯ ಅಲ್ಲಲ್ಲಿ ಗಳನೆ (ಗಂಟಲು) ಬೇನೆ, ಚಪ್ಪೇ ಬೇನೆ ಹಾಗೂ ಕಾಲುಬೇನೆ ರೋಗಗಳ ಲಕ್ಷಣ ಕಂಡುಬಂದಿದ್ದು, ಒಂದಿಷ್ಟು ಪ್ರಕರಣಗಳಲ್ಲಿ ಜಾನುವಾರುಗಳು ಮೃತಪಟ್ಟಿರುವ ಬಗ್ಗೆಯೂ ವರದಿಯಾಗುತ್ತಿವೆ. ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯಲ್ಲಿ ಎರಡು ದಿನದ ಹಿಂದೆಯಷ್ಟೇ ಹಸುವಿನ ಕರುವೊಂದು ಚಪ್ಪೇ ರೋಗಕ್ಕೆ ಬಲಿ ಆಗಿದ್ದರೆ, ಎತ್ತೂಂದು ಗಂಟಲು ಬೇನೆ ರೋಗಕ್ಕೆ ಮೃತಪಟ್ಟಿದೆ. ಅದರಂತೆ ತಾಲೂಕಿನ ವಿವಿಧ ಗ್ರಾಮದಲ್ಲಿ ರೋಗದ ಲಕ್ಷಣಗಳು ಕಂಡು ಬಂದಿದ್ದು, ಚಿಕಿತ್ಸೆಗಾಗಿ ರೈತರು ಪಶು ವೈದ್ಯರಿಗೆ ಮೊರೆ ಇಡುತ್ತಿದ್ದಾರೆ.
ರೋಗ ಲಕ್ಷಣಗಳೇನು?:
ಚಪ್ಪೇ ರೋಗದ ಬ್ಯಾಕ್ಟೀರಿಯಾ ಜಾನುವಾರು ಸೇವಿಸುವ ಆಹಾರ ಮೂಲಕ ಹರಡಿದರೆ, ಗಂಟಲು ಬೇನೆ ಹಾಗೂ ಕಾಲುಬೇನೆ ರೋಗದ ಬ್ಯಾಕ್ಟೀರಿಯಾಗಳು ಗಾಳಿ ಮೂಲಕವೇ ಹರಡುತ್ತವೆ. ಗಂಟಲು ಬೇನೆಗೆ ಒಳಗಾಗುವ ಜಾನುವಾರಿಗೆ ಜ್ವರ, ಬಾಯಲ್ಲಿ ಜೊಲ್ಲು ಸೋರುವ ಲಕ್ಷಣಗಳು ಕಂಡು ಬರುತ್ತವೆ. ಇನ್ನೂ ಚಪ್ಪೇ ಬೇನೆ ರೋಗಕ್ಕೂ ಜ್ವರದೊಂದಿಗೆ ಜಾನುವಾರುಗಳ ಕಾಲುಗಳು ಶಕ್ತಿ ಕಳೆದುಕೊಳ್ಳುತ್ತವೆ. ಈ ಎರಡೂ ರೋಗಗಳಿಂದ ಆಹಾರ ತಿನ್ನಲಾಗದ ಸ್ಥಿತಿಗೆ ಬರುವ ಜಾನುವಾರುಗಳಿಗೆ ನಿಗದಿತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಹೋದರೆ ಸಾವು ಕಟ್ಟಿಟ್ಟ ಬುತ್ತಿ.
‘ಚಪ್ಪೇ’ ಸಾವಿನ ಪ್ರಮಾಣ ಹೆಚ್ಚು:
Related Articles
ಕಾಲುಬೇನೆ ರೋಗದಿಂದ ಜಾನುವಾರು ಮೃತಪಡುವ ಪ್ರಮಾಣ ಕಡಿಮೆ ಇದ್ದರೂ ನರಳಾಟ ಜಾಸ್ತಿ. ಗಂಟಲು ಬೇನೆಯಿಂದಲೂ ಸಾವಿನ ಪ್ರಮಾಣ ಕಡಿಮೆ ಇದೆ. ಆದರೆ ಚಪ್ಪೇ ರೋಗದಿಂದ ಸಾವಿನ ಪ್ರಮಾಣ ಹೆಚ್ಚು. ರೋಗ ಲಕ್ಷಣಕ್ಕೂ ಮುನ್ನ ಲಸಿಕೆ ಹಾಗೂ ರೋಗ ಕಂಡುಬಂದ ತಕ್ಷಣವೇ ಚಿಕಿತ್ಸೆ ಕೊಡಿಸದಿದ್ದರೆ ಜಾನುವಾರುಗಳನ್ನು ರಕ್ಷಿಸಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ ಪಶು ವೈದ್ಯಾಧಿಕಾರಿ ಡಾ| ಬಿ.ಎಸ್. ಲಿಂಗರಾಜು.
ಹೊರಗಡೆಯಿಂದ ಔಷಧಿ:
ಮುಂಜಾಗೃತಾ ಕ್ರಮವಾಗಿ ವರ್ಷದಲ್ಲಿ 2-3 ಸಲ ಉಚಿತವಾಗಿ ಲಸಿಕೆ ಹಾಕುವ ಕಾರ್ಯ ಇಲಾಖೆಯಿಂದ ನಡೆಯುತ್ತಾ ಬಂದಿದೆ. ಆದರೆ ರೋಗಗಳಿಗೆ ತುತ್ತಾಗುವ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಲಭ್ಯ ಆಗುತ್ತಿಲ್ಲ. ರೋಗಕ್ಕೆ ತುತ್ತಾದ ಜಾನುವಾರುಗಳನ್ನು ಆಸ್ಪತ್ರೆಗೆ ಸಾಗಿಸುವುದೇ ಕಷ್ಟ. ಆಸ್ಪತ್ರೆಗೆ ಹೋದರೂ ನಿಗದಿತ ಸಮಯಕ್ಕೆ ವೈದ್ಯಾಧಿಕಾರಿಗಳೇ ಇರಲ್ಲ. ಒಂದು ವೇಳೆ ಇದ್ದರೂ ಚಿಕಿತ್ಸೆ ಕೊಡಲು ಸಿದ್ಧರಿದ್ದರೂ ಆಸ್ಪತ್ರೆಯಲ್ಲಿ ಔಷಧಿ ಇಲ್ಲ. ಹೀಗಾಗಿ ಹೊರಗಡೆ ಹೋಗಿ ಔಷಧಿ ತರುವಂತೆ ಚೀಟಿ ಬರೆದು ಕೊಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹುದ್ದೆಗಳು ಖಾಲಿ ಖಾಲಿ:
Advertisement
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಜಿಲ್ಲೆಗೆ 448 ಹುದ್ದೆ ಮಂಜೂರಾತಿ ಇದ್ದು, 228 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದ 160 ಹುದ್ದೆಗಳು ನಾಲ್ಕೈದು ವರ್ಷಗಳಿಂದ ಖಾಲಿ ಇವೆ. 78 ಪಶು ವೈದ್ಯಾಧಿಕಾರಿಗಳ ಮಂಜೂರಾತಿ ಇದ್ದರೂ ಇನ್ನೂ 22 ಹುದ್ದೆಗಳು ಭರ್ತಿಯಾಗಿಲ್ಲ. ಧಾರವಾಡ 1, ಹುಬ್ಬಳ್ಳಿ 1, ಕಲಘಟಗಿ 3, ನವಲಗುಂದ 8 ಹಾಗೂ ಕುಂದಗೋಳದಲ್ಲಿ 9 ಪಶು ವೈದ್ಯಾಧಿಕಾರಿಗಳ ಕೊರತೆ ಇದೆ. ಡಿ ದರ್ಜೆ ಹುದ್ದೆಗಳು 97 ಖಾಲಿ ಇವೆ.
ಕಾರ್ಯಾರಂಭ ಮಾಡದ ಸಂಚಾರಿ ಚಿಕಿತ್ಸಾಲಯಗಳು:
ಜಿಲ್ಲೆಯಲ್ಲಿ ಧಾರವಾಡ ನಗರದಲ್ಲಿ ಮಾತ್ರವೇ ಪಾಲಿ ಕ್ಲಿನಿಕ್ ಕೇಂದ್ರ ಇದ್ದು, ಈ ಕೇಂದ್ರದ ಉಪನಿರ್ದೇಶಕ ಹುದ್ದೆ ಸಹ ಖಾಲಿ ಇದೆ. ನವಲಗುಂದ ತಾಲೂಕು ಹೊರತುಪಡಿಸಿ ಪ್ರತಿ ತಾಲೂಕಿನ ಎರಡು ಹೋಬಳಿ ಮಟ್ಟದಲ್ಲಿ ಪಶುಆಸ್ಪತ್ರೆ ಸೇರಿ ಒಟ್ಟು 11 ಪಶು ಆಸ್ಪತ್ರೆಗಳು ಇವೆ. 53 ಪಶು ಚಿಕಿತ್ಸಾಲಯ, 42 ಪ್ರಾಥಮಿಕ ಪಶುಚಿಕಿತ್ಸಾಲಯ ಇದ್ದು, ಇವುಗಳಲ್ಲಿ ಮೂಲಸೌಕರ್ಯ ಹಾಗೂ ವೈದ್ಯಾಧಿಕಾರಿಗಳ ಕೊರತೆ ಎದ್ದು ಕಾಣುತ್ತಿದೆ. ಸಂಚಾರಿ ಪಶುಚಿಕಿತ್ಸಾಲಯಗಳ ಪೈಕಿ 3 ಮಾತ್ರವೇ ಕಾರ್ಯಾರಂಭ ಮಾಡಿವೆ. ಕುಂದಗೋಳ ಹಾಗೂ ನವಲಗುಂದದಲ್ಲಿ ಸಂಚಾರಿ ಪಶು ಚಿಕಿತ್ಸಾಲಯಗಳು ಕಾರ್ಯಾರಂಭವನ್ನೇ ಮಾಡಿಲ್ಲ.
ಇಲಾಖೆಯ ರೋಗ ಅಧ್ಯಯನ ಶಾಖೆ ನೀಡಿರುವ ವರದಿಯಂತೆ ಜಿಲ್ಲೆಯ ಸಾಂಕ್ರಾಮಿಕ ರೋಗ ಕಂಡುಬರುವ ಪ್ರದೇಶದಲ್ಲಿ ಮುಂಜಾಗೃತಾ ಕ್ರಮವಾಗಿ ಲಸಿಕೆ ಹಾಕಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಕೊರತೆ ಇರುವ ಪಶು ವೈದ್ಯಾಧಿಕಾರಿಗಳ ನೇಮಕಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.•ಪರಮೇಶ್ವರ ನಾಯಕ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
•ಶಶಿಧರ್ ಬುದ್ನಿ