Advertisement

ಕಾಳುಮೆಣಸಿಗೆ ವ್ಯಾಪಿಸಿದೆ ಸೊರಬು ರೋಗ

10:23 PM Dec 13, 2019 | mahesh |

ಅರಂತೋಡು: ಒಂದು ಕಾಲದಲ್ಲಿ ಅಡಿಕೆಯ ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ರೈತ ಕಾಳು ಮೆಣಸಿಗೆ ದಕ್ಕಿದ ಬೆಲೆಯಿಂದಾಗಿ ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗಲೇ ಈ ವರ್ಷ ಅನಿಯಮಿತ ಮಳೆಯಿಂದಾಗಿ ಅರಂತೋಡು ಭಾಗ ಸೇರಿದಂತೆ ತಾಲೂಕಿನ ಹೆಚ್ಚಿನ ಪರಿಸರದಲ್ಲಿ ಕಾಳು ಮೆಣಸಿನ ಬಳ್ಳಿಗೆ ಸೊರಬು ರೋಗ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾನೆ.

Advertisement

ಅರಂತೋಡು ಸಮೀಪದ ಪೆರಾಜೆ, ಕಲ್ಲುಗುಂಡಿ, ಸಂಪಾಜೆ, ಚೆಂಬು, ಆಲೆಟ್ಟಿ, ಮರ್ಕಂಜ, ಬೆಳ್ಳಾರೆ ಭಾಗ ಸೇರಿದಂತೆ ಇತರೆಡೆಗಳಲ್ಲಿ ಸೊರಬು ರೋಗ ಕಂಡುಬಂದಿದೆ. ಮುಖ್ಯವಾಗಿ ಕರಿಮೆಣಸು ಬಳ್ಳಿಯ ಗಿಡಗಳು ಬಾಡುತ್ತಾ ಹೋಗಿ ಉದುರಿ ಬೀಳುತ್ತವೆ. ಕೊನೆಗೆ ಕಾಳು ಮೆಣಸು ಬಳ್ಳಿಯೇ ಸತ್ತು ಹೋಗುತ್ತದೆ. ತಾಲೂಕಿನಲ್ಲಿ ಈ ವರ್ಷ ವಿಪರೀತ ಮಳೆಯಿದ್ದ ಹಿನ್ನೆಲೆಯಲ್ಲಿ ಈ ರೋಗ ಹೆಚ್ಚಾಗಿ ಕಂಡು ಬಂದಿದೆ. ಕಳೆದ ವರ್ಷವೂ ಸೊರಬು ರೋಗ ಕಾಣಿಸಿಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಂದಷ್ಟು ಜಾಸ್ತಿ ಪ್ರಮಾಣದಲ್ಲಿ ಸೊರಬು ರೋಗ ಹರಡಿದೆ ಎಂದು ರೈತರು ತಿಳಿಸಿದ್ದಾರೆ.

ಚೇತರಿಕೆ ಕಾಣದ ಧಾರಣೆ
ಮೂರು ವರ್ಷಗಳ ಹಿಂದೆ ಕಾಳು ಮೆಣಸಿಗೆ ಮಾರುಕಟ್ಟೆ ಧಾರಣೆ ಕೆ.ಜಿ.ಗೆ 700 ರೂ. ಗಡಿ ದಾಟಿತ್ತು. ಇದೀಗ ಮೂರು ವರ್ಷಗಳಿಂದ ಕಾಳು ಮೆಣಸಿಗೆ ಕೆ.ಜಿ.ಗೆ ಸರಾಸರಿ 300 ರೂ. ಇದೆಯಷ್ಟೆ. ಧಾರಣೆ ಏರಿಕೆಯಾಗುತ್ತದೆ ಎಂಬ ಭರವಸೆಯಿಂದ ಕಳೆದ ಮೂರು ವರ್ಷಗಳಿಂದ ಕಾಳುಮೆಣಸನ್ನು ರೈತರು ಸಂಗ್ರಹಿಸಿದ್ದಾರೆ. ಆದರೆ ಧಾರಣೆ ಏರಿಕೆ ಕಾಣದಿರುವುದರಿಂದ ರೈತರು ನಿರಾಶರಾಗಿದ್ದಾರೆ.

ಕಾಳು ಮೆಣಸು ಕೃಷಿ ಸುಲಭ
ಮಲೆನಾಡು ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಅಡಿಕೆ ಮರದ ಮೇಲೆಯೇ ಕರಿಮೆಣಸು ಬಳ್ಳಿ ಹಬ್ಬಿಸಿ ಕೃಷಿ ಮಾಡುವುದನ್ನು ಕಾಣಬಹುದು. ಕರಿಮೆಣಸು ಕೃಷಿಕನಿಗೆ ಅಡಿಕೆಯೊಂದಿಗೆ ಉತ್ತಮ ಮಿಶ್ರ ಬೆಳೆಯಾಗಿ ಅರ್ಥಿಕ ಚೇತರಿಕೆ ನೀಡುವ ಕಾಲವೊಂದಿತ್ತು. ಕರಿಮೆಣಸಿನ ವಿವಿಧ ತಳಿಗಳು, ನೆಟ್ಟ ಎರಡು ಮೂರು ವರ್ಷಗಳಲ್ಲಿ ಆರೈಕೆಗನುಗುಣವಾಗಿ ಫ‌ಸಲು ಬಿಡಲು ಪ್ರಾರಂಭಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಕರಿ ಮೆಣಸು ಬಳ್ಳಿ ಬಿಡಲೆಂದೇ ಆಸಕ್ತರು ಸಿಲ್ವರ್‌ ಓಕ್‌ ಮರಗಳನ್ನು ಬೆಳೆಸುತ್ತಿದ್ದಾರೆ. ಗುಡ್ಡದ ಪ್ರದೇಶಗಳಲ್ಲಿ ಏನಿಲ್ಲವೆಂದರೂ ಗೇರು, ಹೊಂಗೆ ಮರಗಳಲ್ಲಿ ಹಬ್ಬಿಸಿದರೂ ಹೇರಳವಾಗಿ ಫ‌ಸಲು ಬಿಡುತ್ತವೆ. ಕಡಿಮೆ ಬಂಡವಾಳದಿಂದ ಅಧಿಕ ಆದಾಯ ಪಡೆಯುವ ಬೆಳೆಗಳಲ್ಲಿ ಕರಿಮೆಣಸು ಇಂದು ಮುಂಚೂಣಿಯಲ್ಲಿದೆ.

ಅಧಿಕ ಮಳೆ ಒಳಿತಲ್ಲ
ಔಷಧ, ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ಬಹು ಬೇಡಿಕೆ ಇರುವ ಕಾರಣದಿಂದ ಕರಿಮೆಣಸು ಬೆಳೆಗಾರ ಧಾರಣೆ ಕುಸಿಯುವ ಭೀತಿ ಪಡಬೇಕಾಗಿಲ್ಲ. ಅಧಿಕ ಮಳೆ ಕರಿಮೆಣಸಿಗೆ ಒಳಿತಲ್ಲ. ಇದೀಗ ನಿರಂತರ ಗಾಳಿ ಮಳೆಯಿಂದ ಕರಿ ಮೆಣಸಿನ ಎಲೆಗಳು ಕಪ್ಪಾಗಿ ಧರಾಶಾಯಿಯಾಗುತ್ತಿವೆ. ಕರಿಮೆಣಸಿಗೆ ತಗಲಿದ ರೋಗ ಬಾಧೆ ರೈತನಿಗೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ.

Advertisement

ಬೋರ್ಡೋ ದ್ರಾವಣ ಸಿಂಪಡಿಸಿ
ಕರಿಮೆಣಸಿಗೆ ಸೊರಬು ರೋಗ ಕೆಲವೆಡೆ ಕಂಡು ಬಂದಿದೆ. ಇದರಲ್ಲಿ ಎರಡು ಇದೆ. ಒಂದು ನಿಧಾನಗತಿಯಲ್ಲಿ ಕರಿಮೆಣಸಿನ ಬಳ್ಳಿಗೆ ಹಬ್ಬಿಕೊಳ್ಳುತ್ತದೆ. ಇನ್ನೊಂದು ಸೊರಬು ರೋಗ ಅತೀ ವೇಗವಾಗಿ ಕಾಣಿಸಿಕೊಂಡು ಬಳ್ಳಿಯೇ ನಾಶವಾಗುತ್ತದೆ. ಇದಕ್ಕೆ ಬೋಡೋì ದ್ರಾವಣ ಸಿಂಪಡಣೆ ಮಾಡಬೇಕು. ರೋಗ ವ್ಯಾಪಿಸಿದ ಬಳಿಕ ಇದು ನಿಯಂತ್ರಣ ಬರುವುದು ಕಷ್ಟ. ರೋಗ ಬರುವುದಕ್ಕೆ ಮೊದಲೇ ಅಡಿಕೆ ಮರಕ್ಕೆ ಮದ್ದು ಬಿಡುವ ಸಂದರ್ಭ ಬೋರ್ಡೋ ದ್ರಾವಣ ಹಾಗೂ ಸೊರಬು ರೋಗಕ್ಕೆ ಸಂಬಂಧಿಸಿದ ಔಷಧವನ್ನು ಸಿಂಪಡಣೆ ಮಾಡುವುದರಿಂದ ರೋಗವನ್ನು ಹತೋಟಿಗೆ ತರಬಹುದು.
– ಸುಹಾನಾ , ಸಹಾಯಕ ತೋಟಗಾರಿಕಾ ನಿರ್ದೇಶಕರು, ಸುಳ್ಯ

ಬಳ್ಳಿ ಸಾಯುತ್ತಿವೆ
ನಾನು ಅಡಿಕೆ, ತೆಂಗು ಕೃಷಿಯೊಂದಿಗೆ ಕಾಳುಮೆಣಸನ್ನು ಕೂಡ ಬೆಳೆಯುತ್ತಿದ್ದೇನೆ. ಇತ್ತೀಚಿನ ಕೆಲವು ದಿನಗಳಲ್ಲಿ ನಮ್ಮ ಕಾಳು ಮೆಣಸಿನ ಬಳ್ಳಿಯ ಎಲೆಗಳು ಕಪ್ಪು ಬಣ್ಣಕ್ಕೆ ತಿರುಗಿ ಕೆಲವು ಬಳ್ಳಿಗಳು ಸತ್ತು ಹೋಗಿವೆ.
– ಜಯಂತ, ಕಾಳು ಮೆಣಸು ಕೃಷಿಕ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next