ಹಾವೇರಿ: ಉಕ್ಕಿ ಹರಿದ ಪ್ರವಾಹದಿಂದ ಜನರು ಮನೆ ಕಳೆದುಕೊಂಡು ಸಂಕಷ್ಟಪಡುತ್ತಿದ್ದರೆ, ಜಾನುವಾರುಗಳು ಸಹ ತಮ್ಮ ನೆಲೆ ಕಳೆದುಕೊಂಡು ವಾರಕ್ಕೂ ಹೆಚ್ಚು ಕಾಲ ಗಾಳಿ-ಮಳೆಗೆ ಮೈಯೊಡ್ಡಿ ಈಗ ಸಾಂಕ್ರಾಮಿಕ ರೋಗ ಭೀತಿಯಲ್ಲಿವೆ.
ನೆರೆಯಿಂದಾಗಿ ಕೊಟ್ಟಿಗೆಗಳಿಗೆ ನೀರು ನುಗ್ಗಿ ಸಾವಿರಾರು ಜಾನುವಾರುಗಳು ಕೆಲ ದಿನ ನೀರಲ್ಲಿಯೇ ನಿಲ್ಲಬೇಕಾಯಿತು. ಕತ್ತಲ ಕೋಣೆ, ಹವಾಮಾನ ವೈಪರಿತ್ಯ, ಆಹಾರ ಕೊರತೆ, ಶುದ್ಧ ನೀರಿನ ಕೊರತೆ ಎದುರಿಸಬೇಕಾಯಿತು. ಕೆಲ ಜಾನುವಾರುಗಳು ಕೊಟ್ಟಿಗೆ ಕುಸಿತದಿಂದ ಸಾವನ್ನಪ್ಪಿದವು. ಇನ್ನು ಕೆಲ ಜಾನುವಾರುಗಳನ್ನು ಎತ್ತರದ ಪ್ರದೇಶ, ಪರಿಹಾರ ಕೇಂದ್ರದ ಬಳಿ ಕಟ್ಟಲಾಯಿತಾದರೂ ಅವುಗಳಿಗೆ ಯಾವುದೇ ನೆಲೆ ಇಲ್ಲದೇ ಗಾಳಿ-ಮಳೆಗೆ ಮೈಯೊಡ್ಡಿ ನಿಲ್ಲಬೇಕಾದ ಪರಿಸ್ಥಿತಿ ಎದುರಿಸಿದವು.
ಜಾನುವಾರುಗಳಿಗೆ ಬೇಕಾದ ಹಸಿರು ಮೇವು, ಮೇವಿನ ಬಣಿವೆ ಸಹ ಜಲಾವೃತವಾಗಿದ್ದರಿಂದ ಜಾನುವಾರುಗಳು ಮೇವಿನ ಸಮಸ್ಯೆ ಎದುರಿಸಿದವು. ಪರಿಹಾರ ಕೇಂದ್ರಗಳಲ್ಲಿ ಜನರಿಗೆ ಕಾಳಜಿ ವಹಿಸಲಾಯಿತೇ ಹೊರತು ಜಾನುವಾರುಗಳ ಮೇವು, ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದಾಗಿ ಜಾನುವಾರುಗಳ ಸ್ಥಿತಿ ದಯನೀಯವಾಗಿತ್ತು.
ರೋಗ ಭೀತಿ: ನೆರೆ ಕಾರಣದಿಂದ ಇಷ್ಟು ದಿನ ಕರುಣಾಜನ ಪರಿಸ್ಥಿತಿಯಲ್ಲಿದ್ದ ಜಾನುವಾರುಗಳಿಗೆ ಈಗ ಸಾಂಕ್ರಾಮಿಕ ಭೀತಿ ಎದುರಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಬರಬಹುದಾದ ಗಂಟಲುಬೇನೆ, ಚಪ್ಪೆರೋಗ, ನೆರಡಿರೋಗ, ಕಾಲುಬಾಯಿ ಜ್ವರ, ಕೆಚ್ಚಲಬಾವು, ಆಡು, ಕುರಿಗಳಿಗೆ ನೀಲಿನಾಲಿಗೆ ರೋಗ ಸೇರಿದಂತೆ ಇನ್ನಿತರ ರೋಗ ಬಾಧಿಸುವ ಸಾಧ್ಯತೆಯಿದ್ದು, ಜಾನುವಾರು ಪಾಲಕರಲ್ಲಿಯೂ ಜಾನುವಾರುಗಳನ್ನು ಉಳಿಸಿಕೊಳ್ಳುವ ಆತಂಕ ಎದುರಾಗಿದೆ.
635 ಜಾನುವಾರು ಸಾವು: ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 635 ಜಾನುವಾರುಗಳು ಮೃತಪಟ್ಟಿವೆ. ಇದರಲ್ಲಿ 13 ದನ, 6 ಎಮ್ಮೆ, 91 ಕುರಿ, 25 ಆಡು, 500 ಕೋಳಿ ಅಸುನೀಗಿವೆ. ಹಾವೇರಿ ತಾಲೂಕಿನಲ್ಲಿ 3 ದನ, 1 ಎಮ್ಮೆ, 50 ಕುರಿ ಸೇರಿ ಒಟ್ಟು 68 ಪ್ರಾಣಿಗಳು ಮೃತಪಟ್ಟಿವೆ. ಹಿರೇಕೆರೂರು ತಾಲೂಕಿನಲ್ಲಿ ಎರಡು ಕುರಿ ಸತ್ತಿವೆ. ಹಾನಗಲ್ಲ ತಾಲೂಕಿನಲ್ಲಿ ಮೂರು ದನ, 1 ಎಮ್ಮೆ, 14 ಕುರಿ, ಏಳು ಆಡು ಸೇರಿ ಒಟ್ಟು 25 ಪ್ರಾಣಿಗಳು ಮೃತಪಟ್ಟಿವೆ. ರಾಣಿಬೆನ್ನೂರು ತಾಲೂಕಿನಲ್ಲಿ 2 ದನ, 2 ಎಮ್ಮೆ, 5 ಕುರಿ, 1 ಆಡು, 500 ಕೋಳಿ ಸೇರಿ 510 ಪ್ರಾಣಿಗಳು ಸತ್ತಿವೆ. ಶಿಗ್ಗಾವಿ ತಾಲೂಕಿನಲ್ಲಿ 4 ದನ, 20 ಕುರಿ, 3 ಆಡು ಸೇರಿ 27 ಪ್ರಾಣಿಗಳು ಅಸುನೀಗಿವೆ. ಬ್ಯಾಡಗಿ ತಾಲೂಕಿನಲ್ಲಿ ಒಂದು ಎಮ್ಮೆ ಸತ್ತಿದೆ. ಸವಣೂರು ತಾಲೂಕಿನಲ್ಲಿ 1 ದನ, 1 ಎಮ್ಮೆ ಮೃತಪಟ್ಟಿವೆ.
ಹೈನುತ್ಪಾದನೆಯೂ ಕುಸಿತ: ಸರ್ಕಾರವೆನೋ ಜಿಲ್ಲೆಯ ಏಳು ತಾಲೂಕುಗಳಲ್ಲಿ ಗೋಶಾಲೆ, ಮೇವು ಬ್ಯಾಂಕ್ ಸ್ಥಾಪಿಸಿದೆಯಾದರೂ ಅದು ಸಮರ್ಪಕ ಪ್ರಮಾಣದಲ್ಲಿ ಸಾಕಾಗದು. ಜಾನುವಾರುಗಳು ರೋಗ ಬಾಧೆ ಸೇರಿದಂತೆ, ಮೇವು ಕೊರತೆ, ಅನಾರೋಗ್ಯ ಕಾರಣದಿಂದ ಹೈನುತ್ಪಾದನೆಯ ಮೇಲೆಯೂ ಗಣನೀಯ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿದೆ.
ಒಟ್ಟಾರೆ ನೆರೆಯಿಂದಾಗಿ ಜನರ ಜತೆಗೆ ಜಾನುವಾರುಗಳು ಸಹ ಸಂಕಷ್ಟಕ್ಕೊಳಗಾಗಿ ಈಗ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಅವುಗಳ ರಕ್ಷಣೆಗೆ ಪಶು ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳಬೇಕಿದೆ.
•ಎಚ್.ಕೆ. ನಟರಾಜ