ಚಿತ್ರದುರ್ಗ: ಹಿಂದಿನ ಕಾಲದಲ್ಲಿ ಪೂರ್ವಿಕರು ಯೋಗ ಮಾಡಿ ಆರೋಗ್ಯದಿಂದ ಇರುತ್ತಿದ್ದರು. ಇಂದಿನ ಪೀಳಿಗೆ ಎಲ್ಲದಕ್ಕೂ ಯಂತ್ರ ಬಳಸುತ್ತಾ ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಹೇಳಿದರು.
ನಗರದ ಕೋಟೆ ಆವರಣದಲ್ಲಿ ಕೋಟೆ ವಾಯುವಿಹಾರಿಗಳ ಸಂಘ ಹಾಗೂ ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಐದು ದಿನಗಳ ಕಾಲ ಕೋಟೆಯಲ್ಲಿ ನಡೆದ ಉಚಿತ ಯೋಗ ಪ್ರಾಣಾಯಾಮ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೂರ್ವಿಕರು ಕೊಟ್ಟಿಗೆ ಗೊಬ್ಬರವನ್ನು ಜಮೀನಿಗೆ ಹಾಕಿ ಗುಣಮಟ್ಟದ ಆಹಾರ ಬೆಳೆಯುತ್ತಿದ್ದರು. ಈಗಿನ ರೈತರು ರಾಸಾಯನಿಕ ಸಿಂಪಡಿಸಿ ಆಹಾರ ಬೆಳೆಯುತ್ತಿದ್ದಾರೆ.
ಬೇಸಾಯಕ್ಕೆ ಎತ್ತುಗಳನ್ನು ಯಾರು ಬಳಸುತ್ತಿಲ್ಲ. ಟ್ರಾಕ್ಟರ್‌ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ದೇಹಕ್ಕೆ ವ್ಯಾಯಾಮ ಇಲ್ಲದಂತಾಗಿರುವುದೇ ಆರೋಗ್ಯ ಹದಗೆಡಲು ಕಾರಣವಾಗಿದೆ. ಪ್ರತಿಯೊಬ್ಬರು ದಿನಕ್ಕೆ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಿ ರೋಗದಿಂದ ದೂರ ಇರಬೇಕು ಎಂದರು.
ಪತಂಜಲಿ ಯೋಗ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮಾತನಾಡಿ, ಜೂ.21 ಯೋಗ ದಿನವನ್ನಾಗಿ ಆಚರಿಸುವಂತೆ ಪ್ರಧಾನಿ ನರೇಂದ್ರಮೋದಿ ಘೋಷಣೆ ಮಾಡಿದಾಗಿನಿಂದಲೂ 197 ರಾಷ್ಟ್ರಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ. ಬದಲಾದ ಜೀವನ ಶೆ„ಲಿ ಹಾಗೂ ಆಹಾರ ಪದ್ಧತಿಯಿಂದ ಎಲ್ಲರೂ ಒಂದಲ್ಲ ನೋವಿನಿಂದ ಬಳಲುತ್ತಿದ್ದಾರೆ. ಯೋಗದಿಂದ ಬೆನ್ನುನೋವು, ಸೊಂಟನೋವು, ಮಂಡಿನೋವು, ಗ್ಯಾಸ್ಟ್ರಿಕ್ ಹೀಗೆ ವಿವಿಧ ರೀತಿ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದರು.
ಜೆಡಿಎಸ್ ವಕ್ತಾರ ಡಿ. ಗೋಪಾಲಸ್ವಾಮಿ ನಾಯಕ ಮಾತನಾಡಿದರು. ಕೋಟೆ ವಾಯುವಿಹಾರಿಗಳ ಸಂಘದ ಗೌರವಾಧ್ಯಕ್ಷ ಜಯಣ್ಣ, ಮಲ್ಲಿಕಾರ್ಜುನಾ ಚಾರ್, ಆರ್.ಬಿ. ಕಲ್ಲೇಶ್, ಯೋಗ ಗುರು ರವಿ ಅಂಬೇಕರ್, ಚನ್ನಬಸಪ್ಪ ವೇದಿಕೆಯಲ್ಲಿದ್ದರು.
ಕೋಟೆ ವಾಯುವಿಹಾರಿಗಳ ಸಂಘದ ಪದಾಧಿಕಾರಿಗಳಾದ ರತ್ನಮ್ಮ, ಕಮಲಮ್ಮ, ಲತಾ, ವೀಣಾ, ಮಲ್ಲಿಕಾರ್ಜುನ್, ವೀರಭದ್ರಣ್ಣ, ಕ್ಯೂಬಾನಾಯ್ಕ, ಬಳ್ಳಾರಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ, ಮಹದೇವಮ್ಮ, ಯಲ್ಲಪ್ಪ ಇತರರು ಇದ್ದರು.