Advertisement

ಭದ್ರಾ ಮೇಲ್ದಂಡೆ ಅಡ್ಡಿ ನಿವಾರಣೆಗೆ ಸಿಎಂ ಜೊತೆ ಚರ್ಚೆ

02:56 PM Jul 19, 2022 | Team Udayavani |

ಸಿರಿಗೆರೆ: ರಾಷ್ಟ್ರೀಯ ಯೋಜನೆಯಾಗಿ ರೂಪುಗೊಳ್ಳುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣದ ಸಂಬಂಧ ಎದುರಾಗಿರುವ ಭೂಸ್ವಾ ಧೀನದ ಅಡೆ ತಡೆ ನಿವಾರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುವುದಾಗಿ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಸಿರಿಗೆರೆಯ ಸದ್ಧರ್ಮ ಪೀಠದಲ್ಲಿ ಶ್ರೀಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಈ ಭರವಸೆ ನೀಡಿದರು. ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣಕ್ಕೆ ಅಜ್ಜಂಪುರದ ಬಳಿ ಕೆಲವು ರೈತರು ಅಡ್ಡಿ ಪಡಿಸುತ್ತಿದ್ದಾರೆ.

ಅಡ್ಡಿ ನಿವಾರಣೆ ಆಗಿದ್ದರೆ ಈ ವರ್ಷವೇ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳನ್ನು ಭರ್ತಿ ಮಾಡಬಹುದಿತ್ತು. ಅದು ಸಾಧ್ಯವಾಗದೇ ಹೋಗಿದೆ ಎಂಬ ಸಂಗತಿಯನ್ನು ಸಮಿತಿ ಪದಾ ಧಿಕಾರಿಗಳು ಶ್ರೀಗಳ ಗಮನಕ್ಕೆ ತಂದರು. ಈ ವಿಚಾರವಾಗಿ ಆ ಭಾಗದ ರೈತ ಪ್ರಮುಖರೊಡನೆ ಚರ್ಚೆ ಮಾಡಿ ಈ ಅಡ್ಡಿಯನ್ನು ನಿವಾರಣೆ ಮಾಡಬೇಕೆಂದು ಮನವಿ ಮಾಡಿದರು. ಭದ್ರಾ ಮೇಲ್ದಂಡೆ ಯೋಜನೆಯಡಿ ಕಾತ್ರಾಳು, ಯಳಗೋಡು, ಮುದ್ದಾಪುರ, ಸುಲ್ತಾನಿಪುರ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಡಕವಾಗಿದೆ.

ಚಿತ್ರದುರ್ಗ ಶಾಖಾ ಕಾಲುವೆ ಹಾಯ್ಕಲ್‌ನಿಂದ ಕೊಳವೆ ಮಾರ್ಗದ ಮೂಲಕ ಈ ಕೆರೆಗಳ ಅರ್ಧದಷ್ಟು ತುಂಬಿಸಲಾಗುತ್ತಿದೆ. ಆದರೆ ಇದಕ್ಕೂ ಮೊದಲು ತಾವು ತುಂಗ ಭದ್ರಾದಿಂದ ಈ ಕೆರೆಗಳಿಗೆ ನೀರು ತರಲು ಮುಂದಾಗಿರುವುದರಿಂದ ಜಿಲ್ಲೆಯ ಜನರು ಸಂತಸಪಟ್ಟಿದ್ದಾರೆ. ಈಗಾಗಲೇ ಕಾತ್ರಾಳು ಕೆರೆಗೆ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಸದ್ದಿಲ್ಲದೆ ತಾವು ಕೈಗೊಂಡಿರವ ಜಲತಪಸ್ವಿ ನಿಲುವುಗಳಿಗೆ ವ್ಯಾಪಕ ಜನಮನ್ನಣೆ ಪ್ರಾಪ್ತವಾಗಿದೆ ಎಂದು ಸಮಿತಿ ಪದಾಧಿಕಾರಿಗಳು ಶ್ರೀಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತುಂಗಭದ್ರಾದಿಂದ ಈಗಾಗಲೇ ಭರಮಸಾಗರ ಕೆರೆಗೆ ನೀರು ತರಲಾಗಿದೆ. ಅಲ್ಲಿಂದ ಕಾತ್ರಾಳು ಸೇರಿದಂತೆ ಇತರೆ ಕೆರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸಿರಿಗೆರೆ ಕ್ರಾಸ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಕೊಳವೆ ಮಾರ್ಗ ಹೋಗಬೇಕಾಗಿದೆ. ಅಲ್ಲದೆ ಪೆಟ್ರೋಲ್‌ ಬಂಕ್‌ ಬಳಿ ಕೊಳವೆ ಮಾರ್ಗ ಹೋಗಲು ಒಂದಿಷ್ಟು ತಕರಾರು ಬಂದಿವೆ. ಅದನ್ನು ಮಾತುಕತೆ ಮೂಲಕ ಬಗೆಹರಿಸುತ್ತಿದ್ದೇವೆ. ಈ ಅಡ್ಡಿಗಳು ನಿವಾರಣೆಯಾದಲ್ಲಿ ಕಾತ್ರಾಳು ಕೆರೆಗೆ ಸರಾಗವಾಗಿ ನೀರು ಹರಿಯಲಿದೆ. ಏತ ನೀರಾವರಿಗೆ ಸಂಬಂಧಿಸಿದ ವಿದ್ಯುತ್‌ ಸಮಸ್ಯೆ ಬಗೆಹರಿದಿದೆ ಎಂದರು.

Advertisement

ಕಾತ್ರಾಳು ಮಾರ್ಗದ ಪೈಪ್‌ಲೈನ್‌ ಮೂಲಕ ಸುಲ್ತಾನಿಪುರ ಕೆರೆಗೆ ನೀರು ಹಾಯಿಸಲಾಗುತಿತ್ತು. ಆದರೆ ಅ ಧಿಕಾರಿಗಳು ಭದ್ರಾ ಮೇಲ್ದಂಡೆಯಡಿ ಸುಲ್ತಾನಿಪುರ ಕೆರೆಗೆ ನೀರು ಬರುವುದರಿಂದ ಪ್ರಸ್ತಾವ ಕೈಬಿಡಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಸುಲ್ತಾನಿಪುರ ರೈತರು ನ್ಯಾಯಪೀಠಕ್ಕೆ ಬಂದು ದೂರು ಸಲ್ಲಿಸಿದ್ದಾರೆ. ಭದ್ರಾ ಮೇಲ್ದಂಡೆ ನೀರು ಬರಲು ತಡವಾಗುತ್ತಿದೆ, ಆದ್ದರಿಂದ ಭರಮಸಾಗರ ಏತ ನೀರಾವರಿ ಮೂಲಕವೇ ನೀರು ಕೊಡಿ ಎಂದಿದ್ದಾರೆ. ಈ ಬಗ್ಗೆಯೂ ಸದ್ಧರ್ಮ ಪೀಠಕ್ಕೆ ಜಲಸಂಪನ್ಮೂಲ ಇಲಾಖೆ ಅ ಧಿಕಾರಿಗಳ ಕರೆಸಿ ಚರ್ಚಿಸಲಾಗಿದೆ ಎಂದು ಶ್ರೀಗಳು ಹೇಳಿದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ. ನುಲೇನೂರು ಎಂ. ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್‌. ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಉಪಾಧ್ಯಕ್ಷರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ತಾಲೂಕು ಅಧ್ಯಕ್ಷ ಧನಂಜಯ, ಹೋರಾಟ ಸಮಿತಿಯ ಜಿ.ಬಿ. ಶೇಖರ್‌, ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಇದ್ದರು.

ನೀರಿನ ವಿಚಾರದಲ್ಲಿ ಭೇದ ಸಲ್ಲ ಭದ್ರಾ ಮೇಲ್ದಂಡೆಯಡಿ ಜಗಳೂರಿಗೆ 2.6 ಟಿಎಂಸಿ ನೀರು ಕಾಯ್ದಿರಿಸಲಾಗಿದ್ದು ಕಾಮಗಾರಿಯನ್ನು ಶೀಘ್ರ ಆರಂಭಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ತರಳಬಾಳು ಶ್ರೀಗಳು, ಈ ಸಂಬಂಧ ಸಚಿವರು ಹಾಗೂ ಮುಖ್ಯಮಂತ್ರಿ ಬಳಿ ಮಾತನಾಡುತ್ತೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ದಾವಣಗೆರೆ ಮಂದಿ ಆಕ್ಷೇಪಿಸುತ್ತಿರುವುದು ಸರಿಯಲ್ಲ. ನೀರಿನ ವಿಚಾರದಲ್ಲಿ ಎಲ್ಲ ರೈತರೂ ಒಂದೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next