Advertisement

ಇಂದು ಸಂಪುಟ ಉಪಸಮಿತಿಯಲ್ಲಿ ಚರ್ಚೆ: ಪಾಟೀಲ

12:13 PM Feb 27, 2018 | Team Udayavani |

ಕಲಬುರಗಿ: ತೊಗರಿ ಸಮಸ್ಯೆ ಕುರಿತಾಗಿ ಕೃಷಿ ಉತ್ಪನ್ನಗಳ ಖರೀದಿಯ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಬೆಲೆ ನಿಗದಿ ಸಂಪುಟದ ಉಪ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ತಿಳಿಸಿದರು.

Advertisement

ಅವರು ಸೋಮವಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ರೈತಪರ ಸಂಘಟನೆಗಳು ನಗರದ ಜಗತ ವೃತ್ತದಲ್ಲಿ ಕೈಗೊಂಡಿರುವ ಅಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಉಪವಾಸ ಸತ್ಯಾಗ್ರಹ ನಿರತರೊಂದಿಗೆ ಚರ್ಚಿಸಿದರು. 

ಬೆಂಬಲ ಬೆಲೆಯಲ್ಲಿ ಮತ್ತೆ ತೊಗರಿ ಖರೀದಿಸುವ ಸಂಬಂಧ ಪರವಾನಗಿ ನೀಡುವಂತೆ ಹಲವು ಸಲ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸಹ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ ಬೆಲೆ ನಿಗದಿ ಸಂಪುಟ ಉಪ ಸಮಿತಿ ಸಭೆಯಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಬೆಂಬಲ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ತೊಗರಿ ಖರೀದಿಸಲು, ಬೆಲೆ ನಿಯಂತ್ರಣ ಹಾಗೂ ತೊಗರಿ ಬೆಳೆಗಾರರ ಒಟ್ಟಾರೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಪ್ರಸಕ್ತ ವರ್ಷದಲ್ಲಿ ತೊಗರಿ ಉತ್ಪಾದನೆ ಹೆಚ್ಚಾಗಿದ್ದು, ಒಟ್ಟು 45 ಲಕ್ಷ ಕ್ವಿಂಟಲ್‌ ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಉದ್ದೇಶ ರಾಜ್ಯ ಸರ್ಕಾರಕ್ಕಿದೆ. ಈ ಸಂಬಂಧ ಪರವಾನಗಿ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗಿದ್ದು, ಮತ್ತೂಮ್ಮೆ ಇಲ್ಲಿನ ರೈತರ ಬೇಡಿಕೆ ಮತ್ತು ತೊಗರಿ ಬೆಳೆ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು ಎಂದರು.

ಬಡ ಮತ್ತು ಸಣ್ಣ ರೈತರ ಅನುಕೂಲಕ್ಕಾಗಿ ಈಗಾಗಲೇ 140 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲ ಹಂತದಲ್ಲಿ 15 ಲಕ್ಷ ಕ್ವಿಂಟಲ್‌ ಹಾಗೂ ಎರಡನೇ ಹಂತದಲ್ಲಿ 10 ಲಕ್ಷ ಕ್ವಿಂಟಲ್‌ ನೋಂದಾಯಿತ ರೈತರಿಂದ ತೊಗರಿ ಖರೀದಿಸಲಾಗಿದೆ. ಕೇಂದ್ರ ಸರ್ಕಾರವು ಮೂರನೇ ಹಂತದ ತೊಗರಿ ಖರೀದಿಗೆ ಪರವಾನಗಿ ನೀಡಿದ್ದಲ್ಲಿ ತೊಗರಿ ಮಾರಾಟಕ್ಕೆ ನೋಂದಣಿ ಮಾಡದ ರೈತರು ಸಹ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ರೈತ ಮುಖಂಡ ಮಾರುತಿ ಮಾನ್ಪಡೆ ಹಾಗೂ ಅಮರಣ ಉಪಹಾಸ ಸತ್ಯಾಗ್ರಹ ಕೈಗೊಳ್ಳುತ್ತಿರುವ ರೈತರು ಮಾತನಾಡಿದರು.

Advertisement

ಮಹಾಪೌರ ಶರಣು ಮೋದಿ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಲ್ಲಿನಾಥ್‌ ಪಾಟೀಲ್‌ ಸೊಂತ ಸಚಿವರ ಜತೆಗಿದ್ದರು. ಶಿವಕುಮಾರ ಅಂಕಲಗಿ, ವಿಠ್ಠಲ ಪೂಜಾರಿ, ಶಿವಶರಣಪ್ಪ ಚಿಂಚನಸೂರ, ವೀರಶೆಟ್ಟಿ ಸ್ವಾಮಿ ಉಪವಾಸ ನಿರಶನ ಕೈಗೊಂಡಿದ್ದರು.  

ರೈತರ ತೊಗರಿ ಖರೀದಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ 
ಆಳಂದ: ತಾಲೂಕಿನ ರೈತರು ಬೆಳೆದ ತೊಗರಿಯನ್ನು ಸಂಪೂರ್ಣ ಖರೀದಿ ಮಾಡವುದು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ರೈತ ಸಂಘಟನೆಗಳ ಮುಖಂಡರು ಫೆ.28ರಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಬಸ್‌ ನಿಲ್ದಾಣದಿಂದ ತಹಶೀಲ್ದಾರ್‌ ಕಚೇರಿವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮ ಕ್ಷೇತ್ರದಲ್ಲಿ 2ನೇ ಬಾರಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅರುಣಕುಮಾರ ಪಾಟೀಲ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೊಗರಿ ಖರೀದಿ ಕೇಂದ್ರಗಳಲ್ಲಿ ಅವ್ಯವಹಾರಗಳು ನಡೆದಿದೆ.
ರಾಜಕೀಯ ಪ್ರಭಾವದಿಂದ ತೊಗರಿ ಖರೀದಿ ಮಾಡಲಾಗುತ್ತಿದೆ. ಜನ ಸಾಮಾನ್ಯರ ತೊಗರಿ ಇದುವರೆಗೂ ಖರೀದಿ ಮಾಡುತ್ತಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಶರಣಬಸಪ್ಪ ತಡಕಲೆ, ಟೊಪ್ಪಣ್ಣ ತಡಕಲೆ, ಶಿವಾನಂದ ಹಿರೇಮಠ, ಶರಣಬಸಪ್ಪ ಕುಲಕರ್ಣಿ, ರಾಹುಲ ಜಬಡೆ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next