Advertisement

Kasturi Rangan ವರದಿ ಬಗ್ಗೆ ಸಂಪುಟದಲ್ಲಿ ಚರ್ಚೆ: ಈಶ್ವರ ಖಂಡ್ರೆ

08:14 PM Aug 09, 2023 | Team Udayavani |

ಬೆಂಗಳೂರು: ಪಶ್ಚಿಮಘಟ್ಟಗಳ ಸಂರಕ್ಷಣೆಗಾಗಿ ನಿವೃತ್ತ ಅರಣ್ಯಾಧಿಕಾರಿ ಸಂಜಯ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿ ರಚಿಸಿದ್ದು, ಅದರ ವರದಿ ಆಧರಿಸಿ ಡಾ.ಕಸ್ತೂರಿ ರಂಗನ್‌ ಶಿಫಾರಸುಗಳನ್ನು ಸಂಪುಟದಲ್ಲಿಟ್ಟು ಪರಿಶೀಲಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಹೇಳಿದರು.

Advertisement

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಜಯ್‌ ಕುಮಾರ್‌ ಅವರ ತಂಡವು ಕರ್ನಾಟಕಕ್ಕೂ ಭೇಟಿ ನೀಡಿತ್ತು. ಪಶ್ಚಿಮಘಟ್ಟಗಳಲ್ಲಿನ ಜನವಸತಿ ಪ್ರದೇಶಗಳಿಗೆ ಭೇಟಿ ಮಾಡುವುದಾಗಿ ತಿಳಿಸಿತ್ತು. ಕೇಂದ್ರ ಸರ್ಕಾರಕ್ಕೆ ಅವರು ವರದಿ ಸಲ್ಲಿಸಿದ ಬಳಿಕ ಕಸ್ತೂರಿ ರಂಗನ್‌ ವರದಿ ಜಾರಿ ಮಾಡಬೇಕೇ ಬೇಡವೇ ಎಂಬುದನ್ನು ಸಂಪುಟದಲ್ಲಿ ಚರ್ಚಿಸುತ್ತೇವೆ ಎಂದರು.

ಪಶ್ಚಿಮಘಟ್ಟದಲ್ಲಿನ ಜನರ ಜೀವನ ಹಾಗೂ ಜೀವನೋಪಾಯ ಎರಡೂ ಉಳಿಯಬೇಕು. ಹಾಗೆಯೇ ಜೀವವೈವಿಧ್ಯವನ್ನೂ ಸಂರಕ್ಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ. ಡಬಲ್‌ ಇಂಜಿನ್‌ ಸರ್ಕಾರ ಇದ್ದಾಗ ಏನು ಮಾಡಿತ್ತು? ಇಷ್ಟನ್ನು ಹೇಳಿದ್ದಕ್ಕೆ ಮಾಜಿ ಮಂತ್ರಿ ಆರಗ ಜ್ಞಾನೇಂದ್ರ ಅವರು ನಮ್ಮ ಮೈಬಣ್ಣ, ಬರಡು ಭೂಮಿಯಿಂದ ಬಂದವರು ಕರ್ರಗೆ ಇರುತ್ತಾರೆ ಎಂದೆಲ್ಲಾ ಟೀಕಿಸಿದರು. ಬೀದರ್‌ ಜಿಲ್ಲೆಯೊಂದರಲ್ಲೇ 10 ಲಕ್ಷ ಮರ-ಗಿಡಗಳನ್ನು ನೆಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮಾನವ ವನ್ಯಜೀವಿ ಸಂಘರ್ಷ ತಡೆಗೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನೂ ತೆಗೆದುಕೊಳ್ಳುತ್ತಿದ್ದು, ಆನೆ ಹಾವಳಿ ತಪ್ಪಿಸುವ ಸಲುವಾಗಿ ರೈಲ್ವೆ ಕಂಬಿಗಳನ್ನು ಬಳಸಿ ಬ್ಯಾರಿಕೇಡ್‌ ಮಾಡಲಾಗುತ್ತಿದೆ, ಕಂದಕಗಳನ್ನು ನಿರ್ಮಿಸಲಾಗುತ್ತಿದೆ, ಆನೆ ಕಾರಿಡಾರ್‌ಗಳನ್ನು ರಕ್ಷಿಸಲಾಗುತ್ತಿದೆ. ಬ್ಯಾರಿಕೇಡ್‌ ನಿರ್ಮಿಸಲು 125 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ತಡೆ ನೀಡಿದ್ದು, ಹುಲಿ ಸಂರಕ್ಷಿತ ಪ್ರದೇಶಗಳಾದ ಅಣಶಿ-ದಾಂಡೇಲಿ ಪ್ರದೇಶದಲ್ಲೂ ರೈಲ್ವೆ ಮಾರ್ಗ ಹಾದು ಹೋಗುವುದರಿಂದ ತಕರಾರು ತೆಗೆದಿದೆ. ಅವಶ್ಯಕತೆ ಬಿದ್ದರೆ ಈ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು.
-ಈಶ್ವರ ಖಂಡ್ರೆ, ಅರಣ್ಯ ಸಚಿವ

ಅರಣ್ಯ ಹಕ್ಕು ಕಾಯ್ದೆ ಪ್ರಕರಣಗಳ ತ್ವರಿತ ವಿಲೇವಾರಿ
ಬೆಂಗಳೂರು: ನಿಯಮಾನುಸಾರ 1978ಕ್ಕಿಂತ ಮೊದಲು ಅರಣ್ಯವಾಸಿಗಳಾಗಿದ್ದ ಮೂಲ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯಡಿ ಸಿಗಬೇಕಾದ ಸೌಲಭ್ಯ ಕಲ್ಪಿಸಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಅರಣ್ಯ ಸಚಿವನಾಗಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಮತ್ತು ಈ ಬಗ್ಗೆ ಚರ್ಚೆ ನಡೆಸಲು ಶೀಘ್ರವೇ ಸಭೆ ಕರೆಯುವುದಾಗಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದ್ದಾರೆ.

Advertisement

ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌, ತಿಂಥಿಣಿ ವೀರಗೋಟದ ಕಾಗಿನೆಲೆ ಕನಕಗುರು ಪೀಠದ ಆಶ್ರಯದಲ್ಲಿ ಬುಧವಾರ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ 29ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಆದಿವಾಸಿಗಳ ಕಲಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ವಿಲೇವಾರಿ ಆಗದ ಪ್ರಕರಣಗಳಿದ್ದರೆ ಕೂಡಲೇ ವಿಲೇವಾರಿ ಮಾಡುತ್ತೇವೆ. ಮೂರು ಎಕರೆವರೆಗೆ ಜಮೀನು ಹೊಂದಿರುವವರನ್ನು ಒಕ್ಕೆಲೆಬ್ಬಿಸುವುದಿಲ್ಲ. ಅದಕ್ಕಿಂತ ಹೆಚ್ಚು ಕಾಡಿನ ಜಮೀನು ಆಕ್ರಮಿಸಿಕೊಂಡವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆದಿವಾಸಿಗಳ, ದಲಿತರ ಅಭಿವೃದ್ಧಿಗೆ ಮೀಸಲಿರಿಸುವ ಎಸ್ಸಿಪಿ, ಟಿಎಸ್ಪಿ ಹಣವನ್ನು ಚುನಾವಣಾ ರಾಜಕೀಯ ಯೋಜನೆಗಳಿಗೆ ಬಳಸುವುದು ಸೂಕ್ತವಲ್ಲ. ಶ್ರೀಮಂತರಿಗೆ ತೆರಿಗೆ ವಿಧಿಸಿ ಆ ಹಣವನ್ನು ಬೇಕಾದರೆ ಅಂತಹ ಯೋಜನೆಗಳಿಗೆ ಬಳಸಿಕೊಳ್ಳಲಿ. ಪರಿಶಿಷ್ಟ ಪಂಗಡದಲ್ಲಿಯೂ ಒಳ ಮೀಸಲಾತಿ ಜಾರಿಯಾಗಬೇಕು ಎಂದು ನಟ ಚೇತನ್‌ ಅಹಿಂಸಾ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ತಿಂಥಿಣಿಯ ಸಿದ್ದರಾಮಾನಂದ ಮಹಾಸ್ವಾಮೀಜಿ, ಬೀದರ್‌ನ ಬುಡಕಟ್ಟು ಸಮುದಾಯದ ಹೋರಾಟಗಾರ ಅಮೃತರಾವ್‌ ಚಿಮ್‌ ಕೋಡ್‌ ಹಾಗೂ ವಕೀಲ ಮಹಾಂತೇಶ ಎಸ್‌ ಕೌಲಗಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ ಅಧ್ಯಕ್ಷ ಎಂ. ಕೃಷ್ಣಯ್ಯ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next