ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಗಮ್ ಜಂಕ್ಷನ ಬಳಿ ಆನಗಳ್ಳಿಯಿಂದ ಕುಂದಾಪುರಕ್ಕೆ ಸಂಚರಿಸುವ ರಸ್ತೆಗೆ ಹಾಕಿರುವ ತಡೆಯನ್ನು ತೆರವುಗೊಳಿಸುವ ಸಂಬಂಧ ಎಸಿಯವರ ಬಳಿ ಚರ್ಚಿಸಿ, ಸೂಕ್ತವಾದ ಕ್ರಮ ಕೈಗೊಳ್ಳಲಾಗುವುದು ಎಂದು ಕುಂದಾಪುರದ ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಅವರು ಹೇಳಿದರು.
ಗುರುವಾರ ಇಲ್ಲಿನ ಶಶಿಧರ ಹೋಟೆಲ್ನಲ್ಲಿ ನಡೆದ ಸಂಗಮ್ ಪರಿಸರದ ಸಾರ್ವಜನಿಕರೊಂದಿಗಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಮಧುಕೇಶ್ವರ್ ಅವರೊಂದಿಗೆ ಜೂ. 10 ರಂದು ಭೇಟಿ ಮಾಡಿ, ಅವರಿಗೂ ಈ ವಿಚಾರದ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಆ ಬಳಿಕ ಅವರ ಸಮಕ್ಷಮದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಇದೇ ವೇಳೆ ಸಂಗಮ್ ಪರಿಸರದ ಜನರು ತಮಗೆ ರಸ್ತೆಗೆ ತಡೆ ಹಾಕಿರುವುದರಿಂದ ಆಗುತ್ತಿರುವ ತೊಂದರೆಗಳ ಕುರಿತು ಗಮನ ಸೆಳೆದರು.
ಹೆದ್ದಾರಿಯಲ್ಲಿ ತಾತ್ಕಲಿಕವಾಗಿ ಅಂದರೆ ಹಳೆ ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹಂಪ್ ಹಾಕಿ, ವಾಹನಗಳ ವೇಗ ತಡೆದರೆ, ಅಪಘಾತ ಸಂಭವಿಸುವ ಸಾಧ್ಯತೆ ಕಡಿಮೆ. ಆ ಬಳಿಕ ಇಲ್ಲಿನ ತಡೆಯನ್ನು ತೆರವುಗೊಳಿಸಬಹುದು ಎಂದು ಒತ್ತಾಯಿಸಿದರು.
ಇದಕ್ಕೆ ಸಮ್ಮತಿಸಿದ ಡಿವೈಎಸ್‌ಪಿಯವರು, ಹೆದ್ದಾರಿಯಲ್ಲಿ ಹಂಪ್ ಹಾಕುವ ಕ್ರಮ ಇಲ್ಲದಿದ್ದರೂ, ತಾತ್ಕಲಿಕವಾಗಿ ಹಾಕಿ ಎಂದು ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಿದ ಅವರು, 15 ದಿನದೊಳಗೆ ಹಳೆ ಸೇತುವೆ ದುರಸ್ತಿ ಕಾಮಗಾರಿಗೆ ಗಡುವು ನೀಡಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಇನ್ನು ಯಾವಾಗ ಮಾಡುವುದು. ಮಳೆಗಾಲದಲ್ಲೂ ಕಷ್ಟ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಳೆ ಸೇತುವೆ ದುರಸ್ತಿಗೆ ಹೊಸ ಸೇತುವೆ ಕಾಮಗಾರಿಗಿಂತಲೂ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಸಭೆಯಲ್ಲಿ ಸಂಚಾರಿ ಠಾಣಾ ಎಸ್‌ಐ ಸುಧಾ ಅಘನಾಶಿನಿ, ಐಆರ್‌ಬಿ ಅಧಿಕಾರಿ ಸಂದೀಪ್, ದಿವಾಕರ ಕಡ್ಗಿಮನೆ, ಶ್ರೀಧರ್ ಶೇರಿಗಾರ್, ಸುನೀಲ್ ಶೆಟ್ಟಿ ಹೇರಿಕುದ್ರು, ಗಣೇಶ್ ಸಂಗಮ್, ರಾಜೇಶ, ಮತ್ತಿತರರು ಉಪಸ್ಥಿತರಿದ್ದರು.