ಬೆಂಗಳೂರು: ವಿವಾದಿತ ಮೌಡ್ಯ ನಿಷೇಧ ಕಾಯ್ದೆ ಜಾರಿಗೆ ತರುವ ಕುರಿತು ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಕರ್ನಾಟಕ ಅಮಾನವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ ಜಾರಿಗೆ ತರುವ ಕುರಿತು ಈಗಾಗಲೇ ರಾಜ್ಯ ಸರ್ಕಾರ ಹಲವಾರು ಬಾರಿ ಪ್ರಯತ್ನ ನಡೆಸಿ ಸಂಪುಟದಲ್ಲಿಯೇ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಧೇಯಕ ಜಾರಿ ಮಾಡುವುದನ್ನು ಮುಂದೂಡುತ್ತ ಬಂದಿತ್ತು.
ಆದರೆ, ಇತ್ತೀಚೆಗೆ ಪ್ರಗತಿಪರರು ಮತ್ತು ಕೆಲವು ಮಠಾಧೀಶರು ಮೌಡ್ಯ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು. ಆ ಸಂದರ್ಭದಲ್ಲಿ ಸಚಿವ ಟಿ.ಬಿ. ಜಯಚಂದ್ರ ಮುಂದಿನ ಅಧಿವೇಶನದಲ್ಲಿ ವಿಧೇಯಕ ಅಂಗೀಕರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ವಾಪಸ್ ಪಡೆದಿದ್ದರು. ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿಧೇಯಕದಲ್ಲಿ ಸಾಕಷ್ಟು ಗೊಂದಲಗಳಿವೆ. ಸಾಮಾನ್ಯ ಪೂಜೆ, ಜನರ ನಂಬಿಕೆಗಳನ್ನು ನಿಷೇಧಿಸುವುದರಿಂದ ಸಾರ್ವಜನಿಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ವಿಧೇಯಕ್ಕೆ ಆಡಳಿತ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿತ್ತು.
ಹೊಸ ವಿಧೇಯಕದಲ್ಲಿ ಅಮಾನವೀಯ ಎನ್ನುವಂತಹ ಊಟ ಮಾಡಿದ ಎಂಜಲೆಲೆಯ ಮೇಲೆ ಉರುಳಾಡುವ ಮಡೆಸ್ನಾನ, ಭೂತ, ಪ್ರೇತದ ಹೆಸರಿನಲ್ಲಿ ದೈಹಿಕ ಹಿಂಸೆ ನೀಡುವುದು. ವಾಮಾಚಾರ ನಡೆಸುವುದು, ನಕಲಿ ಜೋತಿಷ್ಯ ಹೇಳುವುದನ್ನು ತಡೆಗಟ್ಟಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಅಲ್ಲದೇ ದೇವರ ಜಾತ್ರೆಗಳಲ್ಲಿ ಕೆಂಡ ಹಾಯುವುದನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದ್ದರೂ, ಕೆಂಡ ಹಾಯುವುದು ಜನರ ನಂಬಿಕೆಯ ವಿಷಯವಾಗಿರುವುದರಿಂದ ಈ ಬಗ್ಗೆ ಸ್ಪಷ್ಟ ಇನ್ನೂ ಗೊಂದಲಗಳು ಮುಂದುವರೆದಿವೆ. ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಸರ್ಕಾರ ಅಂದುಕೊಂಡಂತೆ ವಿಧೇಯಕಕ್ಕೆ ಒಪ್ಪಿಗೆ ಪಡೆದರೆ, ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮೌಡ್ಯ ನಿಷೇಧ ಕಾಯ್ದೆಗೆ ವಿಧಾನ ಮಂಡಲದ ಅನುಮತಿ ಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಲ್ಲಿ ಲಕ್ಷ ಮನೆ: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕಾವೇರಿ 5ನೇ ಹಂತದ ಯೋಜನಾ ವೆಚ್ಚವನ್ನು 5,550 ಕೋಟಿ ರೂ.ಹೆಚ್ಚಳ ಮಾಡುವ ಕುರಿತು ಸಂಪುಟದಲ್ಲಿ ಅನುಮೋದನೆ ನೀಡುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸೈಕಲ್ ಬಳಕೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಲು ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲು ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದಲ್ಲದೇ ದುರ್ಬಲ ವರ್ಗದವರಿಗೆ ಬೆಂಗಳೂರಿನಲ್ಲಿ 1 ಲಕ್ಷ ಬಹು ಮಹಡಿ ಮನೆಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡುವ ಕುರಿತು ಸಂಪುಟ ಚರ್ಚಿಸುವ ಸಾಧ್ಯತೆ ಇದೆ.
ನ.7ಕ್ಕೆ ಬೆಳಗಾವಿ ಅಧಿವೇಶನ
ನವೆಂಬರ್ 7 ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.