Advertisement

ನೆರೆ ಪರಿಹಾರದಲ್ಲಿ ತಾರತಮ್ಯ-ಪ್ರತಿಭಟನೆ

02:33 PM Jan 28, 2020 | Team Udayavani |

ಬೆಳಗಾವಿ: ನೆರೆ ಪರಿಹಾರ ವಿತರಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಅನೇಕ ಗ್ರಾಮಗಳ ಬದುಕು ಅತಂತ್ರವಾಗಿದ್ದು, ಇನ್ನೂ ಅನೇಕ ಗ್ರಾಮಗಳಿಗೆ ನೆರೆ ಪರಿಹಾರ ಬಾರದೇ ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಪರಿಹಾರವನ್ನು ಉಳ್ಳವರ ಪಾಲಾಗುತ್ತಿದ್ದು, ಕೂಡಲೇ ಇದನ್ನು ಸರಿಪಡಿಸಿ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಮೂಡಲಗಿ ತಾಲೂಕಿನ ತಿಗಡಿ, ಉದಗಟ್ಟಿ ಗ್ರಾಮದಲ್ಲಿ ನೆರೆ ಪರಿಹಾರ ನೀಡುವಲ್ಲಿ ಅಲ್ಲಿನ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ. ಪಿಡಿಒ ಹಾಗೂ ಇತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಗಸ್ಟ್‌ನಲ್ಲಿ ಬಂದ ಪ್ರವಾಹದಿಂದಾಗಿ ಜನಜೀವನ ತತ್ತರಿಸಿ ಹೋಗಿದೆ. ಆದರೆ ಸಂಕಷ್ಟದಲ್ಲಿರುವ ಅರ್ಹ ಫಲಾನುಭವಿಗಳಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಅರ್ಹ ರೈತರಿಗೆ ಪರಿಹಾರ ನೀಡಿಲ್ಲ. ಇದಕ್ಕೆ ಅಲ್ಲಿನ ಪಿಡಿಒ, ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿಗಳೇ ನೇರ ಹೊಣೆಗಾರರು ಎಂದು ದೂರಿದರು.

ಪರಿಹಾರ ತಾರತಮ್ಯ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಕೂಡಲೇ ಈ ಲೋಪವನ್ನು ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಶಿವರಡ್ಡಿ ಹುಚರಡ್ಡಿ, ಸಂಜಯ ರಜಪೂತ, ಬಸು ಪಾಟೀಲ, ಸವಿತಾ ಹುಚ್ಚನ್ನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next