Advertisement

“ಬೆಳ್ಕಲ್‌ ತೀರ್ಥ’ದ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳಿ…

09:59 AM Sep 27, 2019 | Sriram |

ಮುದೂರು: ಕೊಲ್ಲೂರು ಸಮೀಪದ ಕೊಡಚಾದ್ರಿ ಬೆಟ್ಟದ ಹಿಂಭಾಗ ದಲ್ಲಿ ಸುಮಾರು 500 ಅಡಿಗೂ ಎತ್ತರದಿಂದ ಧುಮ್ಮಿಕ್ಕುವ ಬೆಳ್ಕಲ್‌ ತೀರ್ಥ ಜಲಪಾತದ ಸೌಂದರ್ಯ ಪ್ರಕೃತಿಯ ವಿಸ್ಮಯವೇ ಸರಿ. ಈಗಿನ್ನು ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತಿದ್ದು, ಇಲ್ಲಿಗೆ ಆಗಮಿಸುವವರಿಗೆ ಇದು ಸೂಕ್ತ ಸಮಯವಾಗಿದೆ.

Advertisement

ಬೆಳ್ಕಲ್‌ ತೀರ್ಥವನ್ನು “ಗೋವಿಂದ ತೀರ್ಥ’ ಎಂದು ಕೂಡ ಕರೆಯಲಾಗುತ್ತಿದ್ದು, ಇದು ಕೊಲ್ಲೂರು ಸಮೀಪದ ಜಡ್ಕಲ್‌ ಗ್ರಾಮದಲ್ಲಿದೆ. ಕೊಡಚಾದ್ರಿ ಬೆಟ್ಟದಿಂದ ಆರಂಭವಾಗಿ ಕಲ್ಲು -ಬಂಡೆಗಳಿಂದ ಕವಲು, ಕವಲಾಗಿ ನೀರು ಧುಮ್ಮಿಕ್ಕುವುದು ಇಲ್ಲಿನ ವೈಶಿಷ್ಟé.

ಮೂಲಸೌಕರ್ಯವಿಲ್ಲ
ಇದೊಂದು ಪ್ರೇಕ್ಷಣೀಯ ಸ್ಥಳ ಮಾತ್ರವಲ್ಲದೆ, ಪುಣ್ಯ ಸ್ನಾನ ಮಾಡುವ ಆರಾಧನಾ ಸ್ಥಳವೂ ಆಗಿರುವುದರಿಂದ ಪ್ರವಾಸೋದ್ಯಮ ಇಲಾಖೆಯು ಇದನ್ನು ಪ್ರವಾಸೋದ್ಯಮ ಸ್ಥಳವಾಗಿ ರೂಪಿಸುವ ಅವಕಾಶವಿದೆ. ಇಲ್ಲಿಗೆ ತೆರಳುವ ಕಾಡು ಹಾದಿಯನ್ನು ಸುಗಮ ಹಾದಿಯಾಗಿ ಮಾಡಿ, ಅಲ್ಲಿಗೆ ತೆರಳುವ ರಸ್ತೆಯನ್ನು ಕೂಡ ಅಭಿವೃದ್ಧಿಪಡಿಸಬೇಕು.

ವ್ಯವಸ್ಥೆ ಮಾಡಿಕೊಳ್ಳಿ
ಅಲ್ಲಿಗೆ ತೆರಳುವ ಚಾರಣಿಗರು ಅಥವಾ ಪ್ರವಾಸಿಗರಿಗೆ ಅಲ್ಲಿ ಯಾವುದೇ ಆಹಾರ, ನೀರಿನ ವ್ಯವಸ್ಥೆಯಿರುವುದಿಲ್ಲ. ಕುಂದಾಪುರ ಅಥವಾ ಮಧ್ಯೆ ಸಿಗುವ ಪೇಟೆಯಿಂದ ತೆಗೆದುಕೊಂಡು ಹೋಗುವುದು ಉತ್ತಮ. ಮುದೂರು, ಮೈದಾನ ಎನ್ನುವ ಊರುಗಳಲ್ಲಿ ಚಿಕ್ಕ – ಪುಟ್ಟ ಹೊಟೇಲ್‌, ಅಂಗಡಿಗಳಿವೆ.

ಈಗ ಸೂಕ್ತ ಸಮಯ
ಈಗಷ್ಟೇ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ನವೆಂಬರ್‌ ಡಿಸೆಂಬರ್‌ವರೆಗೆ ಅಲ್ಲಿಗೆ ಹೋಗಲು ಸೂಕ್ತ ಸಮಯ. ಆ ಬಳಿಕ ಅಲ್ಲಿನ ಜಲಪಾತದಲ್ಲಿ ನೀರಿದ್ದರೂ, ಅದರ ರಭಸ ಅಷ್ಟೊಂದು ಇರುವುದಿಲ್ಲ. ಆದ್ದರಿಂದ ಸೌಂದರ್ಯವನ್ನು ಅಷ್ಟೊಂದು ಆಸ್ವಾದಿಸಲು ಸಿಗುವುದಿಲ್ಲ.

Advertisement

ಹಿನ್ನೆಲೆಯೇನು?
ಈ ಜಲಪಾತದಿಂದ ಸುಮಾರು 3 -4 ಕಿ.ಮೀ. ದೂರದಲ್ಲಿ ವಿಶ್ವಂಭರ ಮಹಾಗಣಪತಿ, ಕೋಟಿಲಿಂಗೇಶ್ವರ ಹಾಗೂ ಗೋವಿಂದ ದೇವರ ದೇವಸ್ಥಾನವಿದೆ. ಹಿಂದೆ ಈ ದೇಗುಲ ಜಲಪಾತದ ಸಮೀಪವೇ ಇದ್ದು, ಅಲ್ಲಿಗೇ ಹೋಗುವ ಹಾದಿ ದುರ್ಗಮವಾಗಿದ್ದರಿಂದ ಇಲ್ಲಿ ಪ್ರತಿಷ್ಠಾಪಿಸಲಾಯಿತು. ಮೂಕಾಂಬಿಕೆಯು ಆಯುಧವನ್ನು ಈ ಬೆಳ್ಕಲ್‌ ತೀರ್ಥದಲ್ಲಿ ತೊಳೆದಳು ಎನ್ನುವ ಪ್ರತೀತಿಯಿದ್ದು, ಹಾಗಾಗಿ ಎಳ್ಳಮಾವಾಸ್ಯೆ ದಿನ ಅಲ್ಲಿ ತೀರ್ಥ ಸ್ನಾನ ಮಾಡಲು ಸಾವಿರಾರು ಜನ ಬರುತ್ತಾರೆ. ಆ ದಿನ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ ಎನ್ನುತ್ತಾರೆ ಬೆಳ್ಕಲ್‌ ತೀರ್ಥದ ತಪ್ಪಲಿನ ನಿವಾಸಿಯಾದ ಶೀನ ನಾಯ್ಕ ಅವರ ಮಾತು.

ಹೋಗುವುದು ಹೇಗೆ?
ಕುಂದಾಪುರದಿಂದ ಸುಮಾರು 50 ಕಿ.ಮೀ., ಕೊಲ್ಲೂರಿನಿಂದ 14 ಕಿ.ಮೀ. ದೂರದಲ್ಲಿದೆ. ಜಡ್ಕಲ್‌ನಿಂದ ಮುದೂರಿಗೆ ತೆರಳಿ, ಅಲ್ಲಿಂದ ಸುಮಾರು 8 ಕಿ.ಮೀ. ಅಂತರವಿದೆ. ಕುಂದಾಪುರ – ಕೊಲ್ಲೂರು ಮಾರ್ಗ ಮಧ್ಯೆ ಜಡ್ಕಲ್‌ ಜಂಕ್ಷನ್‌ನಲ್ಲಿ ಮುದೂರಿಗೆ ತೆರಳುವ ಮಾರ್ಗದಲ್ಲಿ ತೆರಳಬೇಕು. ಮುಂದಕ್ಕೆ ಮೈದಾನ ಎನ್ನುವ ಊರಿದ್ದು, ಅಲ್ಲಿಂದ ಸ್ವಲ್ಪ ಮುಂದಕ್ಕೆ ವಾಹನದಲ್ಲಿ ತೆರಳಬೇಕು. ಆ ಬಳಿಕ ಸುಮಾರು 3 ಕಿ.ಮೀ. ಕಾಡಿನಲ್ಲಿ ಕಾಲ್ನಡಿಗೆಯಲ್ಲಿಯೇ ಈ ಬೆಳ್ಕಲ್‌ತೀರ್ಥಕ್ಕೆ ತೆರಳಬೇಕಿದೆ. ಸಿದ್ದಾಪುರ, ಹಳ್ಳಿಹೊಳೆ ಕಡೆಯಿಂದಲೂ ಬರಬಹುದು. ಉಡುಪಿ ಯಿಂದ ಸುಮಾರು 90 ಕಿ.ಮೀ., ಮಂಗಳೂರಿನಿಂದ ಸುಮಾರು 150 ಕಿ.ಮೀ. ದೂರವಿದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next