Advertisement

2ನೇ ಹಂತದ ನಗರಗಳಲ್ಲಿ ಉದ್ಯಮಕ್ಕೆ ರಿಯಾಯ್ತಿ

10:15 AM Mar 15, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪಿಸಲು ಬರುವ ಉದ್ಯಮಿಗಳಿಗೆ ಹೆಚ್ಚಿನ ರಿಯಾಯ್ತಿಗಳನ್ನು ನೀಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

Advertisement

“ಉದಯವಾಣಿ’ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಕದ ಮಹಾರಾಷ್ಟ್ರ ಹಾಗೂ ತಮಿಳುನಾಡುಗಳಲ್ಲಿ ರಾಜಧಾನಿ ಹೊರತುಪಡಿಸಿ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿರುವುದರಿಂದ ಎಲ್ಲಾ ಕಡೆಗಳಲ್ಲಿಯೂ ಉದ್ಯೋಗ ಸೃಷ್ಠಿಯಾಗುವಂತಾಗಿದೆ. ಅದೇ ರೀತಿಯಲ್ಲಿ, ರಾಜ್ಯದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಮೈಸೂರು, ಮಂಗಳೂರುಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಈಗಾಗಲೇ ಹುಬ್ಬಳ್ಳಿ ಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲಾಗಿದ್ದು, ಸುಮಾರು 73 ಸಾವಿರ ಕೋಟಿ ರೂ.ಗಳಷ್ಟು ಬಂಡ ವಾಳ ಹರಿದು ಬರಲಿದೆ. ಈಗಾಗಲೇ ಅನೇಕ ಉದ್ಯಮಗಳ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳಲು ಚರ್ಚೆ ನಡೆದಿದ್ದು, ಮುಂದಿನ ಮೂರ್ನಾಲ್ಕು ತಿಂಗ ‌ಳಲ್ಲಿ ಎಲ್ಲ ಪ್ರಸ್ತಾವನೆಗಳನ್ನು ಕಾರ್ಯ ರೂಪಕ್ಕೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹುಬ್ಬಳ್ಳಿಯಲ್ಲಿ ನಡೆದ ಬಂಡವಾಳ ಹೂಡಿಕೆ ಸಮಾವೇಶ ಯಶಸ್ವಿಯಾಗಿರುವುದರಿಂದ ಮೈಸೂರು, ಮಂಗಳೂರು ಹಾಗೂ ಕಲಬುರಗಿಯಲ್ಲಿ ಎರಡು ದಿನಗಳ ಬಂಡವಾಳ ಆಕರ್ಷಣೆಗೆ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಇದರಿಂದ ಆಯಾ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಆಕರ್ಷಿಸಲು ಅನುಕೂಲವಾಗಲಿದೆ ಎಂದರು.

ಮಹಿಳಾ ಇಂಡಸ್ಟ್ರಿಯಲ್‌ ಪಾರ್ಕ್‌: ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರಿನಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಮಹಿಳಾ ಇಂಡಸ್ಟ್ರಿಯಲ್‌ ಪಾರ್ಕ್‌ ಮಾಡಲಾಗಿದೆ. ಮಹಿಳಾ ಉದ್ಯಮಿಗಳ ಸಂಖ್ಯೆಯೂ ಹೆಚ್ಚಾಗಿ ರುವು ದರಿಂದ ಜಮೀನು ಮಂಜೂರು ಮಾಡುವಂತೆ ಸಾಕಷ್ಟು ಬೇಡಿಕೆ ಬಂದಿದೆ. ಅಲ್ಲದೇ ಹುಬ್ಬಳ್ಳಿಯಲ್ಲಿ ಫ‌ುಡ್‌ಪಾರ್ಕ್‌ ಮಾಡಲು ಉದ್ದೇಶಿ ಸಲಾಗಿದ್ದು, ಬಾಬಾ ರಾಮ್‌ದೇವ್‌ ಜೊತೆ ಚರ್ಚಿಸಲಾಗಿದೆ ಎಂದು ಹೇಳಿದರು.

Advertisement

ಎರಡು ಹಾಗೂ ಮೂರನೇ ದರ್ಜೆಯ ನಗರಗಳಲ್ಲಿ ಕೈಗಾರಿಕೆ ಸ್ಥಾಪಿಸಲು ಹೆಚ್ಚಿನ ಪ್ರೋತ್ಸಾಹ ನೀಡಲು ಹೊಸ ಕೈಗಾರಿಕಾ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ನೂತನ ಕೈಗಾರಿಕಾ ನೀತಿ ಸಿದ್ದವಾಗಿದ್ದು, ಹಣಕಾಸು ಹಾಗೂ ನಗರಾಭಿವೃದ್ಧಿ ಇಲಾಖೆಗೆ ಅಭಿಪ್ರಾಯ ಪಡೆಯಲು ಕಳುಹಿಸಿಕೊಡಲಾಗಿದೆ. ಅವರ ಅಭಿಪ್ರಾಯ ಬಂದ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಉಡಾನ್‌ ಪ್ರಯೋಜನ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ “ಉಡಾನ್‌’ ಯೋಜನೆಯಿಂದ ಎರಡನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶ ದೊರೆತಂತಾಗಿದೆ. ಹುಬ್ಬಳ್ಳಿ, ಬೆಳಗಾವಿಯಿಂದ ಪ್ರತಿದಿನ ದೇಶದ ಎಲ್ಲ ಪ್ರಮುಖ ನಗರಗಳಿಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ.

ಈಗ ಕಲಬುರಗಿಗೂ ವಿಮಾನಯಾನ ಸೇವೆ ಆರಂಭವಾಗಿ ರುವುದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಕೈಗಾರಿಕೆಗಳನ್ನು ಸೆಳೆಯಲು ಹೆಚ್ಚು ಅನುಕೂಲವಾಗಿದೆ. ವಿಮಾನಯಾನ ಸಂಪರ್ಕ ಇರುವುದರಿಂದ ಆ ಭಾಗದಲ್ಲಿ ಉದ್ಯಮ ಸ್ಥಾಪನೆ ಮಾಡಲು ಉದ್ಯಮಿಗಳು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.

ಕಾನೂನು ತಿದ್ದುಪಡಿ: ಕೈಗಾರಿಕೆಗಳಿಗೆ ಸರಳವಾಗಿ ಜಮೀನು ದೊರೆಯುವಂತೆ ಅವಕಾಶ ಕಲ್ಪಿಸಲು ಭೂ ಸುಧಾರಣಾ ಕಾಯ್ದೆ ಸೆಕ್ಸೆನ್‌ 109ಕ್ಕೆ ತಿದ್ದುಪಡಿ ತರಲು ಪ್ರಯತ್ನ ನಡೆಸಲಾಗುತ್ತಿದೆ. ಉದ್ಯಮಿಗಳಿಗೆ ಜಮೀನು ನೀಡುವ ವಿಷಯದಲ್ಲಿ ಗೊಂದಲಗಳಿದ್ದು, ವೈಜ್ಞಾನಿಕ ದರ ನಿಗದಿಯಾಗಬೇಕು ಎನ್ನುವ ಕಾರಣಕ್ಕೆ ಕಾನೂನು ತಿದ್ದುಪಡಿಗೆ ತೀರ್ಮಾನಿಸಲಾಗಿದೆ ಎಂದು ಶೆಟ್ಟರ್‌ ತಿಳಿಸಿದರು. ಉದ್ಯಮಿಗಳಿಗೆ ಜಮೀನು ಮಂಜೂರು ಮಾಡುವ ಸಂದರ್ಭ ದಲ್ಲಿಯೇ ಕ್ರಯಪತ್ರ (ಸೇಲ್‌ ಡೀಡ್‌) ಮಾಡುವ ದರವನ್ನು ನಿಗದಿ ಪಡಿಸುವಂತಾಗಬೇಕು.

ಜಮೀನು ಮಂಜೂರು ಮಾಡಿದ 30 ದಿನದಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಒಪ್ಪಿಗೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇನ್ನು, ಜಿಂದಾಲ್‌ ಸಂಸ್ಥೆಗೆ ಜಮೀನು ಪರಭಾರೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದು ಕೊಂಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಈಗ ಮತ್ತೆ ಉಪ ಸಮಿತಿ ರಚನೆ ಕುರಿತು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next