Advertisement
ನೀವು ತಾಲೂಕಿನ ಟಾಪರ್ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನದಲ್ಲಿ ಇದ್ದರೆ ನಿಮಗೆ ಯಾವುದೇ ರೀತಿ ಶುಲ್ಕ ವಿಧಿಸದೇ ಪಿಯುಗೆ ಪ್ರವೇಶ ಮಾಡಿಕೊಂಡು ಉಚಿತ ವಾಗಿ ಶಿಕ್ಷಣ ನೀಡುತ್ತೇವೆ. ನಮ್ಮಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ತಾಲೂಕಿಗೆ ನಮ್ಮ ಕಾಲೇಜು ಫಸ್ಟ್, ನಮ್ಮಲ್ಲಿ ಶೇ.100 ಫಲಿತಾಂಶ ಲಭಿಸಿದೆ. ನಾವು ಸೀಮಿತ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಗುಣ ಮಟ್ಟದಲ್ಲಿ ಬೋಧನೆ ಮಾಡುತ್ತೇವೆ ನಮ್ಮ ಕಾಲೇಜಿಗೆ ಸೇರಲು ಅದೃಷ್ಟ ಮಾಡಿರಬೇಕು ಹೀಗೆ ಅಬ್ಬರದ ಪ್ರಚಾರಗಳನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ತಮ್ಮ ಕಡೆ ಸೆಳೆಯಲು ಖಾಸಗಿ ಕಾಲೇಜುಗಳು ಮುಂದಾಗುತ್ತಿವೆ.
Related Articles
Advertisement
ಮನೆ ಬಾಗಿಲು ತಟ್ಟುತ್ತಿದ್ದಾರೆ: ಟೀವಿ, ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವುದಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟುತ್ತಿದ್ದಾರೆ. ಇಷ್ಟು ಸಾಲದು ಎಂಬಂತೆ ಶೇ.95 ರಷ್ಟು ಅಂಕಪಡೆದ ಮನೆಗೆ ಹೋಗುವ ಸಂಸ್ಥೆಯವರು ನಿಮ್ಮ ಮೊದಲನೇ ಮಗ, ಮಗಳು, ನಮ್ಮ ಕಾಲೇಜಿಗೆ ಸೇರಿಸಿದರೆ ಎರಡನೇ ಮಗ, ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟೇ ಅಂಕ ಪಡೆದು ತೇರ್ಗಡೆ ಹೊಂದಿದ್ದರೂ ಅವರಿಗೂ ಡಿಸ್ಕೌಂಟ್ ನೀಡುತ್ತೇವೆ ಎಂದು ಪೋಷಕರ ಬೆನ್ನುಬಿದ್ದಿರುವ ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಆರು ತಿಂಗಳಲ್ಲಿ ಕುತ್ತಿಗೆಗೆ ಬರುತ್ತದೆ: ಖಾಸಗಿ ಕಾಲೇಜುಗಳು ಈಗ ಉಚಿತ ಹಾಗೂ ಡಿಸ್ಕೌಂಟ್ ಮೂಲಕ ನಿಮ್ಮನ್ನು ಗುಂಡಿಗೆ ಬೀಳಿಸಿಕೊಂಡು ಆರು ತಿಂಗಳ ನಂತರ ನಿಮ್ಮ ಕುತ್ತಿಗೆಗೆ ಹಗ್ಗ ಹಾಕುತ್ತಾರೆ ಬಹಳ ಜಾಗ್ರತೆಯಿಂದ ಇರಬೇಕು. ಉಚಿತ ಎನ್ನುವುದು ಬೋಧನೆ ಶುಲ್ಕ ಇಲ್ಲವೇ ಡೊನೇಷನ್‌ಗೆ ಇರುತ್ತದೆಯೇ ಎಂಬುದ ತಿಳಿದುಕೊಳ್ಳಿ, ಯಾವುದೇ ಪ್ರತಿಷ್ಠಿತ ಕಾಲೇಜಿನ ಸಿಬ್ಬಂದಿ ತಮ್ಮ ಮನೆ ಬಾಗಿಲಿಗೆ ಬಂದರು ಎಂಬ ಮನೋಭಾವದಿಂದ ನಿಮ್ಮ ಮಗುವನ್ನು ಅಲ್ಲಿಗೆ ಸೇರಿಸುವ ಮುಂಚೆ ಪೋಷಕರು ಜಾಗ್ರತೆ ವಹಿಸಬೇಕಿದೆ.
ಸರ್ಕಾರಿ ಉಪನ್ಯಾಸಕರ ಖಾಸಗಿ ಕಾಲೇಜು ವ್ಯಾಮೋಹ: ತಾಲೂಕಿನಲ್ಲಿ ಕೆಲ ಸರ್ಕಾರಿ ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಹಣದ ಆಸೆಗೆ ಬಲಿಯಾಗಿ ಖಾಸಗಿ ಕಾಲೇಜಿಗೆ ತಮ್ಮ ಮಗುವನ್ನು ದಾಖಲಿಸುವಂತೆ ಪ್ರೇರೇಪಣೆ ಮಾಡುತ್ತಿದ್ದಾರೆ. ಮಕ್ಕಳ ಅಂಕಪಟ್ಟಿ ತೆಗೆದುಕೊಂಡು ಸರ್ಕಾರಿ ಕಾಲೇಜಿಗೆ ದಾಖಲು ಮಾಡಲು ಪೋಷಕರು ಹೋದರೆ ನಿಮ್ಮ ಮಕ್ಕಳಿ ಇಷ್ಟೊಂದು ಅಂಕ ಪಡೆದಿದ್ದಾರೆ ಹಾಗಾಗಿ ಮುಂದಿನ ಭವಿಷ್ಯ ಮುಖ್ಯ ಎಂದು ಖಾಸಗಿ ಕಾಲೇಜುಗಳ ಹೆಸರು ಹೇಳಿ ಪಾಲಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದಯಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಬಗ್ಗೆ ತನಿಖೆಗೆ ಮುಂದಾಗಬೇಕು.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ