Advertisement

ಮಹಿಳಾ ರೋಗಿ ಸಾವಿನ ಕಾರಣ ಬಹಿರಂಗಪಡಿಸಿ

07:32 PM Jun 18, 2021 | Team Udayavani |

ಕಲಬುರಗಿ: ಜಿಮ್ಸ್‌ ಆಸ್ಪತ್ರೆಯಲ್ಲಿ ಅತ್ಯಾಚಾರ ಯತ್ನಕ್ಕೊಳಗಾದ ಕೊರೊನಾ ಸೋಂಕಿತ ಮಹಿಳಾ ರೋಗಿಯ ಸಾವಿನ ಕಾರಣವನ್ನು ಜನತೆ ಎದುರು ಬಹಿರಂಗ ಪಡಿಸಬೇಕೆಂದು ಒತ್ತಾಯಿಸಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ನಗರದ ಜಿಮ್ಸ್‌ ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಆಸ್ಪತ್ರೆಯಲ್ಲೇ ಅತ್ಯಾಚಾರ ಯತ್ನಕ್ಕೊಳಗಾದ ಮಹಿಳಾ ರೋಗಿ ಮೃತಪಟ್ಟಿದ್ದಾರೆ. ಇದು ಭದ್ರತೆ ಲೋಪ ಆಗಿರುವುದನ್ನು ನಿರೂಪಿಸುತ್ತದೆ. ಅತ್ಯಾಚಾರ ಯತ್ನದ ಸಂಬಂಧ ಯಾವ ಸಿಬ್ಬಂದಿ ಮೇಲೆ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಅತ್ಯಾಚಾರದ ಪ್ರಯತ್ನದ ಪ್ರಕರಣವನ್ನು ಆಡಳಿತ ಮಂಡಳಿಯವರು ಎಳ್ಳಷ್ಟೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕಂಡುಬರುತ್ತಿದೆ.

ಇಷ್ಟೆಲ್ಲ ನಡೆದ ಮೇಲೆಯೂ ಜಿಲ್ಲಾಡಳಿತ ಮೌನ ವಹಿಸಿದೆ. ಹೀಗಾಗಿ ಮಹಿಳೆ ಸಾವು ಉಂಟಾಗಿರುವ ಸಾಧ್ಯತೆ ಇದೆ. ಸರ್ಕಾರ ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಅತ್ಯಾಚಾರ ಯತ್ನದ ಬಳಿಕ ಸಂತ್ರಸ್ತೆಯ ವೈದ್ಯಕೀಯ ತಪಾಸಣೆ ಮತ್ತು ಆಪ್ತಸಮಾಲೋಚನೆ ನಡೆಸಲಾಗಿದೆಯೆ? ಅತ್ಯಾಚಾರ ಪ್ರಯತ್ನದ ದಿನದಂದು ಕೆಲಸಕ್ಕೆ ಹಾಜರಿದ್ದ ವೈದ್ಯರು ಏನು ಮಾಡುತ್ತಿದ್ದರು? ಈ ಘಟನೆ ಬಗ್ಗೆ ಸಂಸದರು, ಶಾಸಕರು ಯಾಕೆ ಚಕಾರ ಎತ್ತುತ್ತಿಲ್ಲ? ಹೀಗಾಗಿ ಅನೇಕ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.

ಈ ಕುರಿತು ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪ್ರತಿಭಟನಾನಿತರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ ಪ್ರಮುಖರಾದ ಕೆ. ನೀಲಾ, ಅಮೀನಾ ಬೇಗಂ, ಚಂದಮ್ಮ ಗೋಳಾ, ಶರಣಬಸಪ್ಪ ಮಮಶೆಟ್ಟಿ, ಶಹನಾಜ್‌ ಅಖ್ತರ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next