Advertisement

ಕರ್ತವ್ಯ ಲೋಪ ಕಂಡು ಬಂದರೆ ಶಿಸ್ತು ಕ್ರಮ: ಡಿಸಿ

05:37 PM Jul 13, 2022 | Shwetha M |

ವಿಜಯಪುರ: ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ರೂಪಿಸುವ ಯೋಜನೆಗಳು ಹಾಗೂ ಸೌಲಭ್ಯಗಳು ಜನ ಸಾಮಾನ್ಯರಿಗೆ ಲಭಿಸುವಂತಾಗಬೇಕು. ಕರ್ತವ್ಯ ಪಾಲನೆಯಲ್ಲಿ ಲೋಪ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ| ವಿ.ಬಿ.ದಾನಮ್ಮನವರ ಅಧಿಕಾರಿಗಳಿಗೆ ಎಚ್ಚರಿಸಿದರು.

Advertisement

ಮಂಗಳವಾರ ವಿಜಯಪುರ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ ಅವರು, ಕಂದಾಯ ಇಲಾಖೆ ಅಧಿಕಾರಿ-ಸಿಬ್ಬಂದಿ ಸಮಯ ಪಾಲನೆಗೆ ಒತ್ತು ಕೊಡಬೇಕು. ಅಂದಿನ ಕೆಲಸ ಕಾರ್ಯಗಳನ್ನು ಅಂದೇ ಮುಗಿಸಬೇಕು. ಅನವಶ್ಯಕವಾಗಿ ಜನತೆ ತಹಶೀಲ್ದಾರ್‌ ಕಚೇರಿಗಳಿಗೆ ಸುತ್ತಲು ಅವಕಾಶ ಮಾಡಬಾರದು ಎಂದರು.

ಕಂದಾಯ ಇಲಾಖೆ ಪ್ರತಿ ಮಂಗಳವಾರ ಜಿಲ್ಲೆಯ ಯಾವುದಾರೂ ಒಂದು ತಾಲೂಕು ಕಚೇರಿಗೆ ಜಿಲ್ಲಾ ಧಿಕಾರಿ ಭೇಟಿ ಕಾರ್ಯಕ್ರಮ ರೂಪಿಸಿದೆ. ಇದರ ಉದ್ದೇಶ ಸಾಫಲ್ಯಕ್ಕೆ ಎಲ್ಲರೂ ಶ್ರಮಿಸಬೇಕು. ಇದಕ್ಕಾಗಿ ಸರ್ಕಾರ ಮಹತ್ವಾಕಾಂಕ್ಷೆಯಂತೆ ಜಿಲ್ಲಾಧಿಕಾರಿ ಹಳ್ಳಿಕಡೆ ಕಾರ್ಯಕ್ರಮ ಜನ ಸಾಮಾನ್ಯರಿಗೆ ಅನುಕೂಲವಾಗಿದೆ. ಕೆಳ ಹಂತದ ಅಧಿಕಾರಿ-ಸಿಬ್ಬಂದಿ ಕೂಡ ಉತ್ತಮ ಕೆಲಸ ಮಾಡಿ ಸರ್ಕಾರದ ಆಶಯ ಈಡೇರಿಸಬೇಕು. ಈ ಹಂತದಲ್ಲಿ ಕರ್ತವ್ಯ ಲೋಪ ಕಂಡು ಬಂದಲ್ಲಿ ಕ್ರಮ ಖಚಿತ ಎಂದರು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಕಂದಾಯ ಇಲಾಖೆಯ ಸಚಿವರು, ತಿಂಗಳಿನ ಎಲ್ಲ ಮಂಗಳವಾರ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಯಾವುದಾರೂ ಒಂದು ತಾಲೂಕು ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

ತಾಲೂಕು ಕೇಂದ್ರಗಳಿಂದ ದೂರದ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಅರ್ಜಿ ನೀಡಲು ವಯೋವೃದ್ಧರು, ವಿಕಲಚೇತನರು ಹಾಗೂ ಮಹಿಳೆಯರಿಗೆ ತೊಂದರೆಯಾಗಬಾರದು ಎಂದು ತಾಲೂಕು ಕಚೇರಿ ಭೇಟಿ ಕಾರ್ಯಕ್ರಮ ರೂಪಿಸಲಾಗಿದೆ. ತಾಲೂಕು ಕಚೇರಿ ಭೇಟಿ ಕಾರ್ಯಕ್ರಮದ ಮಹತ್ವದ ಬಗ್ಗೆ ಕಂದಾಯ ಇಲಾಖೆ ಅಧಿಕಾರಿ-ಸಿಬ್ಬಂದಿ ಅರಿಯಬೇಕು. ಪ್ರತಿ ತಾಲೂಕಿನಲ್ಲಿ ಅದರದ್ದೇ ಆದ ಸಮಸ್ಯೆಗಳಿರುತ್ತವೆ. ಆದ್ದರಿಂದ ವಿವಿಧ ಇಲಾಖೆಗಳ ಹೊಂದಾಣಿಕೆಯೊಂದಿಗೆ ಕಾರ್ಯಪ್ರವೃತ್ತರಾಗಲು ಸಲಹೆ ನೀಡಿದರು.

Advertisement

ತಾಲೂಕಿನ ಸಾರ್ವಜನಿಕರು ನಿರ್ದಿಷ್ಟ ಸಮಯದಲ್ಲಿ ಖುದ್ದು ತಮ್ಮನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಅವರ ಅಹವಾಲುಗಳನ್ನು ಸಲ್ಲಿಸಲು ಸಹಾಯವಾಗುವ ಸಂಬಂಧ ತಾವು ತಾಲೂಕು ತಹಶೀಲ್ದಾರ್‌ ಕಚೇರಿಗೆ ಬಂದಿರುವುದಾಗಿ ಇದೆ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು. ತಾಲೂಕು ಕಚೇರಿ ಭೇಟಿಯಿಂದಾಗಿ ತಾಲೂಕು ಕಚೇರಿಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದ್ದಲ್ಲಿ ಅವುಗಳನ್ನು ಸರಿಪಡಿಸಲು ಸಹ ಜಿಲ್ಲಾಡಳಿತಕ್ಕೆ ಸಹಾಯವಾಗಲಿದೆ. ಆದ್ದರಿಂದ ಮೂಲ ಸೌಕರ್ಯ ಕೊರತೆ ಬಗ್ಗೆ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಿದರು.

ಇದೇ ವೇಳೆ ತಾವು ತಾಲೂಕು ಕಚೇರಿಗೆ ಭೇಟಿ ನೀಡಿದ ಸ್ಮರಣೆಗಾಗಿ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಸಸಿ ನೆಟ್ಟರು. ವಿಜಯಪುರ ತಹಶೀಲ್ದಾರ್‌ ಸಿದ್ದರಾಮ ಬೋಸಗಿ ಸೇರಿದಂತೆ ಕಂದಾಯ ಇಲಾಖೆ ಇತರೆ ಅಧಿಕಾರಿ-ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next