ಯಾದಗಿರಿ: ರೈತರಿಂದ ಬೇಡಿಕೆ ಇಲ್ಲದೆ ಇರುವ ರಸಗೊಬ್ಬರ ಒತ್ತಾಯಪೂರ್ವಕವಾಗಿ ಮತ್ತು ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಎಚ್ಚರಿಸಿದರು.
ಇಲ್ಲಿನ ಜಿಲ್ಲಾಡಳಿತ ಭವನದಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರ ಸಮಸ್ಯೆಗಳ ಕುರಿತ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ರಸಗೊಬ್ಬರಗಳ ಜೊತೆಗೆ ಲಘು ಪೋಷಕಾಂಶಗಳನ್ನು ನೀಡುತ್ತಿದ್ದರೆ ಬೆಳೆಗಳ ಮೇಲೆ ಅವುಗಳ ಪರಿಣಾಮ ಮತ್ತು ಮಹತ್ವಗಳ ಕುರಿತು ಹೆಚ್ಚಿನ ಪ್ರಚಾರ, ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ಅದರ ವರದಿ ಸಲ್ಲಿಸಿದ ನಂತರವೇ ರೈತರಿಗೆ ನೀಡಲು ಜಿಲ್ಲಾಧಿಕಾರಿ ಸೂಚಿಸಿದರು.
ಯೂರಿಯಾ ರಸಗೊಬ್ಬರಕ್ಕೆ ವಿಧಿಸುತ್ತಿರುವ ಹೆಚ್ಚಿನ ಸಾರಿಗೆ ವೆಚ್ಚ ಕುರಿತು ಸಭೆಯಲ್ಲಿದ್ದ ಉತ್ಪಾದನಾ ಸಂಸ್ಥೆ ಪ್ರತಿನಿಧಿಗಳಿಂದ ಮಾಹಿತಿ ಪಡೆದು, ಯೂರಿಯಾ ರಸಗೊಬ್ಬರವನ್ನು ಸ್ವತಃ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿರುವ ಸಂಸ್ಥೆಯವರು ಯಾವುದೇ ಹೆಚ್ಚುವರಿ ಸಾರಿಗೆ ವೆಚ್ಚ ವಿಧಿಸುತ್ತಿಲ್ಲ. ಆದರೆ ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ಯೂರಿಯಾ ರಸಗೊಬ್ಬರಕ್ಕೆ ಮಾತ್ರ ಹೆಚ್ಚುವರಿ ಸಾರಿಗೆ ವೆಚ್ಚ ವಿಧಿಸಲಾಗುತ್ತಿದೆ. ಇದು ಸರ್ಕಾರದ ಮಾರ್ಗಸೂಚಿ ಇರುವುದರಿಂದ ಎಲ್ಲ ವಿತರಕರು ಸಹಕರಿಸಬೇಕು ಎಂದರು.
ರಸಗೊಬ್ಬರ ಸರಬರಾಜು ಸಾರಿಗೆ ಸಂಸ್ಥೆಯವರು ನಿಗದಿತ ನಮೂನೆಯಲ್ಲಿ ಜಿಎಸ್‌ಟಿ ಬಿಲ್ ನೀಡದೆ ಇರುವ ಕುರಿತು ಸಭೆಯಲ್ಲಿದ್ದ ಸಾರಿಗೆ ಪ್ರತಿನಿಧಿ ಮತ್ತು ಸಹಾಯಕ ಆಯುಕ್ತರು ಆದಾಯ ತೆರಿಗೆ ಅವರೊಂದಿಗೆ ಚರ್ಚಿಸಿ ಇಲ್ಲಿಯವರೆಗೆ ನೀಡಿರುವ ಮತ್ತು ಮುಂದೆ ಬರುವ ರಸಗೊಬ್ಬರ ರಸೀದಿಯನ್ನು ಜಿಎಸ್‌ಟಿ ನಿಗದಿತ ನಮೂನೆಯಲ್ಲಿ ನೀಡಲು ಜಿಲ್ಲಾಧಿಕಾರಿ ಸೂಚಿಸಿದರು.
ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಇವರಲ್ಲಿರುವ ಕಾಪು ದಾಸ್ತಾನು ಪಡೆದಂತ ವಿತರಕರಿಗೆ ಎರಡನೇ ಹಂತದ ಸಾರಿಗೆ ವೆಚ್ಚವನ್ನು ಮಾರ್ಗಸೂಚಿಯನ್ವಯ ಕೇವಲ ಸಹಕಾರ ಸಂಘಗಳಿಗೆ ಮಾತ್ರ ನೀಡಲು ಅವಕಾಶವಿರುತ್ತದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ನಕಲಿ ರಸಗೊಬ್ಬರ ಬೀಜಗಳ ಹಾವಳಿ ಹೆಚ್ಚಾಗಿದ್ದು, ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಜಾಲದ ಮೂಲವನ್ನು ಪತ್ತೆಹಚ್ಚಲು ಸಭೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕ ಅಬಿದ್ ಎಸ್., ಜಿಪಂ ಯೋಜನಾ ನಿರ್ದೇಶಕ ವೆಂಕಟೇಶ ಚಟ್ನಳ್ಳಿ, ಯಾದಗಿರಿ ಡಿವೈಎಸ್‌ಪಿ ಬಸವೇಶ್ವರ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಬಿ.ಜಿ. ಚಿಮ್ಮಲಗಿ, ಕೃಷಿ ಇಲಾಖೆ ತಾಂತ್ರಿಕ ಸಲಹೆಗಾರ ರಾಜಕುಮಾರ, ಕೃಷಿ ಪರಿಕರ ಮಾರಾಟಗಾರ ಸಂಘದ ಜಿಲ್ಲಾಧ್ಯಕ್ಷ ಮತ್ತು ತಾಲೂಕು ಅಧ್ಯಕ್ಷರು ಇದ್ದರು.