Advertisement

ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

02:51 PM May 19, 2019 | Team Udayavani |

ಅರಸೀಕೆರೆ: ತಾಲೂಕಿನ ಗ್ರಾಪಂ ಪಿಡಿಒಗಳು ಕಂದಾಯ ವಸೂಲಾತಿಯಲ್ಲಿ ಶೂನ್ಯ ಸಾಧನೆ ಮಾಡಿದ್ದು, ಮತ್ತೂಂದೆಡೆ ಬರದಿಂದ ತತ್ತರಿಸಿರುವ ಕೆಲವು ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿದ್ದು, ಅಂತಹ ಪಿಡಿಒಗಳಿಗೆ ಶೋಕಾಸ್‌ ನೋಟಿಸ್‌ ನೀಡಲಾಗುವುದು ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಪ್ರಕಾಶ್‌ ಪಿಡಿಒಗಳಿಗೆ ಎಚ್ಚರಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ತಾಲೂಕಿನ ಎಲ್ಲಾ ಪಿಡಿಒ ಮತ್ತು ವಿವಿಧ ಇಲಾಖೆ ಅಧಿಕಾರಿಗಳನ್ನೊಳ ಗೊಂಡ ಸಭೆಯಲ್ಲಿ ಮಾತನಾಡಿದರು.

ಪಿಡಿಒಗಳ ನಿರ್ಲಕ್ಷ್ಯ: ಸಭೆಯಲ್ಲಿ ಪಿಡಿಒ ಮಾತು ಗಳನ್ನು ಅಲಿಸಿದಾಗ ಅಕ್ಷರಕ್ಷಶಃ ಕಂದಾಯ ವಸೂಲಾತಿ ಯಲ್ಲಿ ಸಾಕಷ್ಟು ಪ್ರಗತಿ ಕಾಣದೇ ಶೂನ್ಯ ದಾಖಲೆ ಕಂಡು ಬರುತ್ತಿದೆ.ಅಲ್ಲದೆ ಕೆಲವು ಗ್ರಾಪಂ ಪಿಡಿಒ ಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿಲ್ಲ. ಅಲ್ಲದೇ ಗ್ರಾಮದ ಕುಡಿಯುವ ನೀರಿನ ಸಮಸ್ಯೆಹೆಚ್ಚಾಗುತ್ತಿದ್ದು, ಇದರ ಪರಿಹಾರವಾಗಿ ಖಾಸಗಿ ಕೊಳವೆ ಬಾವಿಗಳಲ್ಲಿ ಕುಡಿಯುವ ನೀರು ಸರಬರಾಜು, ಹಾಲಿ ಇರುವ ಕೊಳವೆಬಾವಿಗಳ ಪುನಶ್ಚೇತನ ಮಾಡು ವುದರೊಂದಿಗೆ ಖಾಸಗಿಯವರಿಂದ ನಿಗತ ಹಣಕ್ಕೆ ನೀರನ್ನು ಪಡೆಯುವ ಮೂಲಕ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಬೇಕಾಗಿದೆ ಎಂದರು.

ಸಾರ್ವಜನಿಕರ ಆರೋಪ: ತಾಲೂಕಿನ ಅಗ್ಗುಂದ, ದುಮ್ಮೇನಹಳ್ಳಿ, ಕೆಂಕೆರೆ, ಮಾಡಾಳು, ಮುದುಡಿ ಸೇರಿದಂತೆ ಅನೇಕ ಗ್ರಾಪಂ ಪಿಡಿಒಗಳು ಅಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವುದಿಲ್ಲವೆಂದು ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ. ಆದ್ದರಿಂದ ಯಾವುದೇ ಪಿಡಿಒಗಳು ಮೇಲಧಿಕಾರಿಗಳ ಗಮನಕ್ಕೆ ತರದೇ ಮುಖ್ಯ ಕೇಂದ್ರಗಳಲ್ಲಿ ಇರದಿದ್ದರೆ ಸೂಕ್ತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಭಜನೆ ಮಾಡು ವುದನ್ನು ಬಿಟ್ಟು ಕೆಲಸಗಳನ್ನು ಮಾಡುವುದನ್ನು ಕಲಿಯಿರಿ ಅಥವಾ ಶೋಕಾಸ್‌ ನೋಟಿಸ್‌ ಪಡೆಯುವುದರ ಮೂಲಕ ಇಲಾಖೆ ತೆಗೆದುಕೊಳ್ಳುವ ಕ್ರಮಗಳನ್ನು ಎದುರಿಸಿ.ತಾಲೂಕಿನ ಪಿಡಿಒಗಳು ಗ್ರಾಮಗಳಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ನಮಗೆ ತೃಪ್ತಿ ತಂದಿಲ್ಲ. ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಮಧ್ಯೆ ಪರಸ್ಪರ ಸಹಕಾರ ಇಲ್ಲದಿರುವುದು ಕಂಡು ಬರುತ್ತಿದ್ದು,ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದರು.

ಬಹು ಗ್ರಾಮ ಕುಡಿಯುವ ನೀರು ಯೋಜನೆ: ಅರಸೀಕೆರೆ ಮತ್ತು ಬೇಲೂರು ತಾಲೂಕುಗಳ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಪ್ರಾಯೋ ಗಿಕವಾಗಿ ಜೂನ್‌ ಮೊದಲ ವಾರದಲ್ಲಿ ನೀರನ್ನು ಬಿಡಲಾಗುವುದು. ಈ ಯೋಜನೆಯ ಮೂಲಕ 530 ವಸತಿ ಪ್ರದೇಶಗಳಿಗೆ ಕುಡಿಯುವ ನೀರು ತಲುಪಲಿದೆ.ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್‌ ಸಿಂಗ್‌ ಅವರು ತಾಲೂಕಿನಲ್ಲಿ 1,450 ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಮುಟ್ಟಲು ನಿರ್ದೇಶನ ನೀಡಿದ್ದಾರೆ. ದೂರ ದೃಷ್ಟಿ ಇಟ್ಟುಕೊಂಡು ಚೆಕ್‌ಡ್ಯಾಮ್‌ ಮತ್ತು ಹಸಿರು ಕರಣ ಮಾಡುವ ಕಾರ್ಯಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದರು.

Advertisement

ಮೇವಿಗೆ ಸಮಸ್ಯೆಯಿಲ್ಲ: ತಾಲೂಕಿನಲ್ಲಿ ಜಾನುವಾರುಗಳಿಗೆ ಬೇಕಾಗುವ ಮೇವು ಸಂಗ್ರಹಣೆ ಸುಮಾರು ಆರು ವಾರಗಳ ಕಾಲ ಇದೆಯೆಂಬ ಮಾಹಿತಿ ಅಧಿಕಾರಿಗಳು ನೀಡಿದ್ದಾರೆ ಎಂದರು.

ಕೆರೆಗಳ ಹೂಳೆತ್ತಿ: ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವುದು ಮತ್ತು ಕೊಳವೆಬಾವಿಗಳ ಪುನಶ್ಚೇತನ ಸೇರಿದಂತೆ ಅಂತರ್ಜಲವನ್ನು ಕಾಯ್ದಿಟ್ಟುಕೊಳ್ಳುವ ಕಾರ್ಯಕ್ರಮಗಳನ್ನು ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಶಾಲಾ ಕಾಲೇಜು ಸೇರಿದಂತೆ ಸರ್ಕಾರಿ ಇಲಾಖೆಗಳ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಹಸಿರುಕರಣ ಯೋಜನೆ ಪ್ರಾರಂಭಿಸಲಾಗುತ್ತಿದೆ ಎಂದರು.

ಜಿಲ್ಲೆಯ ವಿವಿಧೆಡೆ ಅಂಗನವಾಡಿ ಕಾರ್ಯಕರ್ತೆಯರು ನಿಗದಿತ ವೇಳೆಗೆ ಅಂಗನವಾಡಿ ಕೇಂದ್ರಗಳಲ್ಲಿ ಬರುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇಂತಹ ಕಾರ್ಯಕರ್ತರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕುಡಿಯುವ ನೀರನ್ನು ಪೂರೈಸಿದ ವಿವಿಧ ಗ್ರಾಮಗಳ ವ್ಯಕ್ತಿಗಳಿಗೆ ನಿಗದಿ ಮಾಡಿದ ಹಣವನ್ನು ಚೆಕ್‌ ಮೂಲಕ ವಿತರಿಸಿದರು.

ವಿವಿಧ ಇಲಾಖೆ‌ ಅಧಿಕಾರಿಗಳಿಂದ ಮಾಹಿತಿ ತೆಗೆದು ಕೊಳ್ಳುವುದರ ಮೂಲಕ ತಾಲೂಕಿನ ಹಲವಾರು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರೆ, ಮತ್ತೂಂದಡೆ ಕೆಲವು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸಿ ಅತಂಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಯೋಜನಾ ನಿರ್ದೇಶಕ ಅರುಣ್‌ಕುಮಾರ್‌, ತಹಶೀಲ್ದಾರ್‌ ಸಂತೋಷ್‌ ಕುಮಾರ್‌, ತಾಪಂ ಇಒ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next