Advertisement

ವಿಪತ್ತು ನಿರ್ವಹಣೆಗೆ ಸಜ್ಜಾಗಲಿರುವ 300 ಮಂದಿ ಸ್ವಯಂಸೇವಕರು

02:08 AM Jun 21, 2022 | Team Udayavani |

ಉಡುಪಿ : ವಿಪತ್ತು ನಿರ್ವಹಣೆಗೆ ಸ್ಥಳೀಯರನ್ನೇ ಸಕ್ರಿಯವಾಗಿ ಬಳಸಿ ಕೊಳ್ಳಲು “ಅಪದ ಮಿತ್ರ’ ಯೋಜನೆಯಡಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 300 ಸ್ವಯಂ ಸೇವಕರಿಗೆ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಮೂರು ಬ್ಯಾಚ್‌ಗಳಲ್ಲಿ ತಲಾ 100 ಸ್ವಯಂಸೇವಕರಿಗೆ ಉಡುಪಿಯ ಬ್ರಹ್ಮಗಿರಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಗತಿ ಸೌಧದಲ್ಲಿ ಜೂ. 20ರಿಂದ ತರಬೇತಿ ಆರಂಭವಾಗಿದೆ. ಜಿಲ್ಲಾಡಳಿತ, ಅಗ್ನಿಶಾಮಕ ದಳ, ಜಿಲ್ಲಾ ವಿಪತ್ತು ನಿರ್ವಹಣ ಘಟಕದ ಜಂಟಿ ಆಶ್ರಯದಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆದು ಸ್ವಯಂಸೇವಕರಿಗೆ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸೂಕ್ತ ಸ್ಪಂದನೆಗೆ ಬೇಕಾದ ಕಿಟ್‌ ಕೂಡ ನೀಡಲಾಗುತ್ತದೆ.

ವಿಪತ್ತು ಸಂಭವಿಸಿದ ಸಂದರ್ಭ ಅಗ್ನಿಶಾಮಕ ದಳದ ಸಿಬಂದಿ ಅಥವಾ ವಿಪತ್ತು ನಿರ್ವಹಣ ಘಟಕದ ಸಿಬಂದಿ, ಪೊಲೀಸ್‌, ಸೇನೆ ಇತ್ಯಾದಿ ತತ್‌ಕ್ಷಣ ಆಗಮಿಸುವುದು ಕಷ್ಟಸಾಧ್ಯ. ಸ್ಥಳೀಯರನ್ನೇ ಸಜ್ಜುಗೊಳಿಸಿದಾಗ ಆರಂಭಿಕವಾಗಿ ಏನೇನು ಮಾಡಬೇಕು ಅದನ್ನು ಅವರು ಮಾಡಲಿದ್ದಾರೆ. ಅನಂತರದಲ್ಲಿ ಭದ್ರತಾ ಸಿಬಂದಿ ವರ್ಗ ಅವರೊಂದಿಗೆ ಜೋಡಿಸಿಕೊಳ್ಳಲಿದೆ. ಆದಷ್ಟು ಶೀಘ್ರದಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಪ್ರಾಣಹಾನಿಯಾಗದಂತೆ ಎಚ್ಚರ ವಹಿಸುವುದು ತರಬೇತಿಯ ಮೂಲ ಉದ್ದೇಶವಾಗಿದೆ.

ಇದೇ ಮೊದಲ ಬಾರಿಗೆ ತರಬೇತಿ
ಅಪದ ಮಿತ್ರ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಪ್ರತೀ ತರಬೇತಿ 12 ದಿನಗಳದ್ದಾಗಿರುತ್ತದೆ. ತರಬೇತಿ ಸಂದರ್ಭ ಊಟ, ತಿಂಡಿ ಹಾಗೂ ವಸತಿ ಒದಗಿಸಲಾಗುತ್ತದೆ. ತರಬೇತಿ ಪಡೆದವರನ್ನು ವಿಪತ್ತು ನಿರ್ವಹಣ ಘಟಕ ನಿರಂತರ ಸಂಪರ್ಕ ದಲ್ಲಿಟ್ಟುಕೊಳ್ಳಲಿದ್ದು, ಯಾವುದೇ ಸಂದರ್ಭದಲ್ಲಿ ವಿಪತ್ತು ಸಂಭವಿಸಿದಾಗ ಅವರಿಗೆ ಮಾಹಿತಿ ಒದಗಿಸಲಾಗುತ್ತದೆ ಮತ್ತು ಸ್ವಯಂಸೇವಕರಿಂದಲೂ ಮಾಹಿತಿ ಪಡೆಯಲಾಗುತ್ತದೆ.

ಏನೇನು ತರಬೇತಿ?
ಭೂ ಕುಸಿತ, ಪ್ರವಾಹ, ಕಟ್ಟಡ ಕುಸಿತ, ಕಡಲ್ಕೊರೆತ ಸಹಿತ ಪ್ರಕೃತಿ ವಿಕೋಪದಿಂದ ದುರಂತ ಸಂಭವಿಸಿದ ಸಂದರ್ಭ ಪ್ರಾಥಮಿಕವಾಗಿ ಏನೇನು ಮಾಡಬೇಕು ಎಂಬುದರ ತರಬೇತಿ ನೀಡಲಾಗುತ್ತದೆ. ವಿಪತ್ತು ಸಂಭವಿಸಿದಾಗ ಸ್ಥಳೀಯರು ಭಯಭೀತರಾಗದಂತೆ ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸುವುದು, ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಮತ್ತು ಇಲಾಖೆ ಅಥವಾ ಭದ್ರತಾ ಸಿಬಂದಿಯೊಂದಿಗೆ ಸಮನ್ವಯ ಸಾಧಿಸುವುದು ಹೇಗೆ ಎಂಬಿತ್ಯಾದಿ ಹಲವು ಮಾಹಿತಿಯನ್ನು ನೀಡಲಾಗುತ್ತದೆ. ನೆರೆಯ ಸಂದರ್ಭ ಬೋಟ್‌ನಲ್ಲಿ ಸಾಗಿ ಪರಿಹಾರ ಕಾರ್ಯಾಚರಣೆ ನಡೆಸುವುದನ್ನು ಕಲಿಸಿಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ.

Advertisement

ಗುರುತಿಸಿರುವ ಸ್ವಯಂಸೇವಕರು
ಉಡುಪಿ ಜಿ.ಪಂ.ನಿಂದ 85, ಜಿಲ್ಲಾ ಪೊಲೀಸ್‌ ಅಧೀಕ್ಷಕರ ಕಚೇರಿಯಿಂದ 26, ಕರಾವಳಿ ಕಾವಲು ಪಡೆಯಿಂದ 20, ಮೀನುಗಾರಿಕೆ ಇಲಾಖೆಯಿಂದ 8, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 34, ಭಾರತ್‌ ಸ್ಕೌಡ್ಸ್‌ ಮತ್ತು ಗೈಡ್ಸ್‌ನಿಂದ 72, ಗೃಹ ರಕ್ಷಕ ದಳದಿಂದ 35, ಸೈನಿಕ ಕಲ್ಯಾಣ ಮತ್ತು ಪುನರ್‌ ವಸತಿ ಇಲಾಖೆಯಿಂದ 10 ಹಾಗೂ ನೆಹರೂ ಯುವ ಕೇಂದ್ರದಿಂದ 11 ಸ್ವಯಂಸೇವಕರನ್ನು ಈಗಾಗಲೇ ಗುರುತಿಸಿ ಜಿಲ್ಲಾಡಳಿತದಿಂದ ಅಗ್ನಿಶಾಮಕ ದಳಕ್ಕೆ ಪಟ್ಟಿಯನ್ನು ರವಾನಿಸಲಾಗಿದೆ.

ವಿಪತ್ತು ನಿರ್ವಹಣೆಗೆ ಇದೇ ಮೊದಲ ಬಾರಿಗೆ ಅಪದ ಮಿತ್ರ ಯೋಜನೆಯಡಿ 300 ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತಿದೆ. ವಿವಿಧ ಇಲಾಖೆಯಿಂದ ಸ್ವಯಂಸೇವಕರನ್ನು ಗುರುತಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.

– ವಸಂತ ಕುಮಾರ್‌ ಎಚ್‌.ಎಂ., ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಉಡುಪಿ

– ರಾಜು ಖಾರ್ವಿ ಕೊಡಿರಿ

Advertisement

Udayavani is now on Telegram. Click here to join our channel and stay updated with the latest news.

Next