Advertisement

ವಿಪತ್ತು ನಿರ್ವಹಣೆ: ಹೋಬಳಿ ಮಟ್ಟದ ತಂಡ ರಚನೆ

08:47 AM May 11, 2019 | Team Udayavani |

ಪುತ್ತೂರು: ಚುನಾವಣಾ ಕರ್ತವ್ಯದಲ್ಲಿ ವ್ಯತ್ಯಾಸಗಳಾದರೆ ಮರು ಚುನಾವಣೆಗಾದರೂ ಅವಕಾಶವಿದೆ. ಆದರೆ ಪ್ರಾಕೃತಿಕ ವಿಕೋಪದ ನಿಭಾವಣೆ ಅದಕ್ಕಿಂತಲೂ ಹೆಚ್ಚಿನ ಜವಾಬ್ದಾರಿಯನ್ನು ಅಪೇಕ್ಷಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ವಿಪತ್ತು ನಿರ್ವಹಣೆಗೆ ಹೆಚ್ಚು ಶ್ರದ್ಧೆ ವಹಿಸಬೇಕು ಎಂದು ಪುತ್ತೂರು ತಹಶೀಲ್ದಾರ್‌
ಡಾ| ಪ್ರದೀಪ್‌ ಕುಮಾರ್‌ ಹೇಳಿದರು. ಮಳೆಗಾಲದ ಸಿದ್ಧತೆಯ ಹಿನ್ನೆಲೆಯಲ್ಲಿ ಶುಕ್ರವಾರ ಮಿನಿ ವಿಧಾನಸೌಧದ ಸಭಾಂಗಣ ದಲ್ಲಿ ಆಯೋಜಿಸಲಾದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಮಳೆಯ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಯಾಗುವ ಕೆಲವು ಪ್ರದೇಶಗಳನ್ನು ಗುರುತಿಸಿದ್ದೇವೆ. ಉಪ್ಪಿನಂಗಡಿ ನದಿ ತೀರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರಿನ ಪರಿಸರ, ನರಿಮೊಗರು, ಶಾಂತಿಗೋಡು, ಸೀರೆಹೊಳೆ ಪರಿಸರಗಳಲ್ಲಿ ಹೆಚ್ಚು ನಿಗಾ ವಹಿಸಲು ಗುರುತಿಸಲಾಗಿದೆ. ಇರ್ದೆಯಲ್ಲಿ ಸೀರೆ ಹೊಳೆ, ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ನೇತ್ರಾವತಿ ಹೊಳೆ, ಬೈಲಾಡಿ ಪ್ರದೇಶದ ನದಿ ತೀರಗಳನ್ನೂ ಗುರುತಿಸಲಾಗಿದೆ ಎಂದು ಹೇಳಿದರು.

ಹೋಬಳಿ ಮಟ್ಟದಲ್ಲಿ ಪಡೆ
ತಾಲೂಕು ವ್ಯಾಪ್ತಿಯ ಪುತ್ತೂರು ಮತ್ತು ಉಪ್ಪಿನಂಗಡಿ ಹೀಗೆ ಎರಡು ಹೋಬಳಿ ಮಟ್ಟದ ವಿಪತ್ತು ಕಾರ್ಯನಿರ್ವಹಣೆ ಪಡೆಯನ್ನು ರಚಿಸಲಾಗಿದೆ. ಪುತ್ತೂರು ಹೋಬಳಿಗೆ ತಹಶೀಲ್ದಾರ್‌ ಹಾಗೂ ಉಪ್ಪಿನಂಗಡಿ ಹೋಬಳಿಗೆ ತಾ.ಪಂ. ಇಒ ನೋಡಲ್ ಅಧಿಕಾರಿಯಾಗಿರುತ್ತಾರೆ. ಈ ಪಡೆಯಲ್ಲಿ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಆಯಾ ಹೋಬಳಿಯ ಆರ್‌.ಐ., ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ವಿ.ಎ., ಮೆಸ್ಕಾಂ, ನಗರಸಭೆ, ಅರಣ್ಯ ಇಲಾಖೆ ಅಧಿಕಾರಿಗಳು ಈ ಸಮಿತಿಯಲ್ಲಿ ಇರುತ್ತಾರೆ ಎಂದು ಮಾಹಿತಿ ನೀಡಿದರು.

ಕಂಟ್ರೋಲ್ ರೂಂ
ಪುತ್ತೂರು ಹಾಗೂ ಉಪ್ಪಿ ನಂಗಡಿಯಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗು ತ್ತದೆ. ಅಪಾಯದ ಸಂದ ರ್ಭದಲ್ಲಿ ಯಾರು ಕರೆ ಮಾಡಿದರೂ ಸ್ಪಂದಿಸಲಾಗುತ್ತದೆ. ವಿಪತ್ತು ನಿರ್ವಹಣ ಪಡೆಯಲ್ಲಿರುವವರ ದೂರ ವಾಣಿ ಸಂಖ್ಯೆ ಯನ್ನೂ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ನೀಡಲಾಗುವುದು ಎಂದು ಡಾ| ಪ್ರದೀಪ್‌ ಕುಮಾರ್‌ ತಿಳಿಸಿದರು. ಕಂಟ್ರೋಲ್ ರೂಂನಲ್ಲಿ ಓರ್ವ ಪೊಲೀಸ್‌ ಸಿಬಂದಿಯನ್ನೂ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ತ್ವರಿತ ಕ್ರಮ
ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಇದೆ. ಗಾಳಿಗೆ ಮರಗಳು ಬೀಳುವುದು, ಮಣ್ಣು ಕುಸಿತ ಉಂಟಾಗುವುದು, ಪ್ರವಾಹ ಸಹಿತ ವಿವಿಧ ಸಂದರ್ಭಗಳಲ್ಲಿ ತ್ವರಿತ ಕ್ರಮಕ್ಕೆ ಸಿದ್ಧವಾಗಿರಬೇಕು. ಬೀಳುವ ಸ್ಥಿತಿಯಲ್ಲಿರುವ ಸಾರ್ವಜನಿಕ ಕಟ್ಟಡಗಳ ಕುರಿತು ಪರಿಶೀಲನೆ ನಡೆಸಿ. ಅಪಾಯ ಸಂಭವಿಸುವುದಕ್ಕೆ ಮೊದಲೇ ಈ ಕುರಿತು ಕ್ರಮ ಕೈಗೊಳ್ಳೋಣ. ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನೀರು ಹರಿಯುವ ಕಣಿ, ಮೋರಿ, ತೋಡುಗಳನ್ನು ಕೂಡಲೇ ಸ್ವಚ್ಛಗೊಳಿಸಬೇಕು ಎಂದು ಸೂಚನೆ ನೀಡಿದ ಅವರು, ಕಾರ್ಯನಿರ್ವಹಣೆ ಪಡೆಯಲ್ಲಿ ಒಬ್ಬರೇ ಹೋಗುವುದಕ್ಕಿಂತ ಎರಡು -ಮೂರು ಮಂದಿ ತೆರಳು ವುದು ಉತ್ತಮ ಎಂದರು.

Advertisement

ಉಪ್ಪಿನಂಗಡಿ ನದಿ ತೀರ ದಲ್ಲಿ ಒಂದು ಬೋಟ್ ಹಾಗೂ ರಕ್ಷಣಾ ಪರಿಕರಗಳ ವ್ಯವಸ್ಥೆ ಮಾಡಲಾಗುತ್ತದೆ. ಇನ್ನೊಂದು ಹೆಚ್ಚುವರಿ ಬೋಟ್ಗಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಮರ ಕತ್ತರಿಸುವ ಯಂತ್ರ ಉಪ್ಪಿನಂಗಡಿ, ಪುತ್ತೂರು ಹಾಗೂ ಇನ್ನೊಂದು ಹೆಚ್ಚುವರಿ ರೂಪದಲ್ಲಿ ಇರುತ್ತದೆ. ಅರಣ್ಯ ಇಲಾಖೆ, ಗೃಹ ರಕ್ಷಕ ಸಿಬಂದಿಯೂ ಈ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪ ತಹಶೀಲ್ದಾರ್‌ ಶ್ರೀಧರ್‌ ಕೆ., ಪುತ್ತೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್‌ ಮಂಜುನಾಥ್‌, ತಾಲೂಕು ಆರೋಗ್ಯಾ ಧಿಕಾರಿ ಡಾ| ಅಶೋಕ್‌ ಕುಮಾರ್‌ ರೈ, ನಗರಸಭಾ ಪ್ರಭಾರ ಪೌರಾಯುಕ್ತ ಅರುಣ್‌ ಕುಮಾರ್‌, ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ರೇಖಾ ಬಿ.ಎಸ್‌., ಪಶು ವೈದ್ಯಾಧಿಕಾರಿ ಡಾ| ಧರ್ಮಪಾಲ ಗೌಡ, ಮಹಿಳಾ ಠಾಣೆಯ ಪಿಎಸ್‌ಐ ನಂದಿನಿ, ಕಂದಾಯ ನಿರೀಕ್ಷಕ ದಯಾನಂದ ಹೆಗ್ಡೆ, ಸಹಾಯಕ ಕೃಷಿ ಅಧಿಕಾರಿ ನಯೀಮ್‌ ಹುಸೇನ್‌, ಗೃಹ ರಕ್ಷಕ ದಳದ ಸುದರ್ಶನ್‌ ಜೈನ್‌, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ ರವಿಚಂದ್ರ, ಕಂದಾಯ ಇಲಾಖೆಯ ವಿಕ್ರಂ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಚಂದ್ರ, ಸಿಡಿಪಿಒ ಶಾಂತಿ ಹೆಗ್ಡೆ, ತಾ.ಪಂ.ನ ನವೀನ್‌ ಭಂಡಾರಿ ಸಭೆಯಲ್ಲಿ ಉಪಸ್ಥಿತರಿದ್ದರು.

ರಜೆಯ ಜವಾಬ್ದಾರಿ
ಮಳೆ ಜೋರಾಗಿ ಸುರಿಯುತ್ತಿರುವ ಸಂದರ್ಭದಲ್ಲಿ ಮರುದಿನ ಶಾಲೆ – ಕಾಲೇಜು ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡುವ ಕುರಿತಂತೆ ಸಂಜೆ 5-6 ಗಂಟೆಯ ಒಳಗೆ ತಿಳಿಸುತ್ತೇನೆ. ತುಂಬಾ ತೊಂದರೆಯಾಗುವ ಸ್ಥಿತಿ ಇದ್ದರೆ ಬಿಇಒ ರಜೆ ಘೋಷಣೆ ಮಾಡಿ ನನಗೆ ಮಾಹಿತಿ ನೀಡಿ. ಆಯಾ ಪ್ರದೇಶಕ್ಕೆ ಸಂಬಂಧಿಸಿದಂತೆ ಹೆಚ್ಚು ಸಮಸ್ಯೆಯಾಗಿದ್ದರೆ ಶಾಲಾ ಎಸ್‌ಡಿಎಂಸಿಯವರೂ ರಜೆಯ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಹಶೀಲ್ದಾರ್‌ ತಿಳಿಸಿದರು.

ಗ್ರಾಮ ಪಂಚಾಯತ್‌ಗಳಿಗೆ ಸೂಚನೆ
ತಾ.ಪಂ. ಇಒ ಜಗದೀಶ್‌ ಎಸ್‌. ಮಾತನಾಡಿ, ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ಮಳೆಗಾಲದ ಸಿದ್ಧತಾ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮ ಪಂಚಾಯತ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲಾ ಮಕ್ಕಳಿಗೆ ತೊಂದರೆಯಾಗುವ ಪಾಲದಲ್ಲಿ ಸಂಚಾರ, ಕಿರು ಸೇತುವೆಗಳಲ್ಲಿ ಸಂಚರಿಸುವ ಮಕ್ಕಳ ಕುರಿತು ಜಾಗ್ರತೆ ವಹಿಸಲು ಕ್ರಮ ಕೈಗೊಳ್ಳುವಂತೆ ಶಾಲೆಯ ಶಿಕ್ಷಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.

ನಷ್ಟ ಉಂಟಾದಲ್ಲಿ ಕೂಡಲೇ ತಿಳಿಸಿ
ಪ್ರಾಕೃತಿಕ ಹಾನಿಯಾಗಿ ನಷ್ಟ ಉಂಟಾದ ಸಂದರ್ಭದಲ್ಲಿ ಕೃಷಿ ಸಹಿತ ಎಲ್ಲ ಇಲಾಖೆಗಳು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ತ್ವರಿತವಾಗಿ ತಿಳಿಸಬೇಕು. ಇದರಿಂದ 48 ಗಂಟೆಗಳ ಒಳಗೆ ಪರಿಹಾರ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ ಎಂದು ತಹಶೀಲ್ದಾರ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next