Advertisement

ಮೇಲ್ಮನೆ ಪಟ್ಟಿಗೆ ಅಪಸ್ವರ: ಮೂರು ನಾಮನಿರ್ದೇಶನ ಹೆಸರುಗಳ ವಿರುದ್ಧ ರಾಜ್ಯಪಾಲರಿಗೆ ದೂರು

09:59 PM Aug 05, 2023 | Pranav MS |

ಬೆಂಗಳೂರು: ವಿಧಾನಪರಿಷತ್ತಿನಲ್ಲಿ ಖಾಲಿ ಇರುವ ಮೂರು ನಾಮನಿರ್ದೇಶನ ಸ್ಥಾನಗಳಿಗೆ ರಾಜ್ಯ ಸರಕಾರ ಪಟ್ಟಿಯನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವ ಮುನ್ನವೇ ಅದು ವಿವಾದದ ಸ್ವರೂಪ ಪಡೆದುಕೊಂಡಿದೆ.

Advertisement

ಕಳೆದ ವಾರ ರಾಜ್ಯಪಾಲರನ್ನು ಭೇಟಿಯಾಗಿದ್ದ ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಹಾಗೂ ನ್ಯಾಯಮಿತ್ರದ ಕಾರ್ಯದರ್ಶಿ ರಾಘವಾಚಾರ್‌ ಶಾಸ್ತ್ರಿ ಅವರು ಶಿಕ್ಷಣ, ಸಹಕಾರ, ಸಂಸ್ಕೃತಿ ಮತ್ತು ಸಮಾಜ ಸೇವೆ ಕೋಟಾದಲ್ಲಿ ಮಾಜಿ ಸಚಿವ ಎಂ.ಆರ್‌. ಸೀತಾರಾಂ, ಎಐಸಿಸಿ ಕಾರ್ಯದರ್ಶಿ ಮನ್ಸೂರ್‌ ಖಾನ್‌ ಹಾಗೂ ನಿವೃತ್ತ ಐಆರ್‌ಎಸ್‌ ಅಧಿಕಾರಿ ಸುಧಾಮ್‌ದಾಸ್‌ ಅವರನ್ನು ಸರಕಾರವು ಮೇಲ್ಮನೆಗೆ ನಾಮಕರಣ ಮಾಡುವ ಸಾಧ್ಯತೆಗಳಿವೆ ಎಂದು ಉಲ್ಲೇಖೀಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಕಾರ್ಯಾಲಯವು ಮುಖ್ಯ ಕಾರ್ಯದರ್ಶಿಗೆ ಶುಕ್ರವಾರ ಪತ್ರ ಬರೆದಿದೆ. ಸ್ವೀಕರಿಸಿರುವ ದೂರುಗಳ ಮೂಲ ಪ್ರತಿಗಳು, ಅದಕ್ಕೆ ಲಗತ್ತಿಸಿರುವ ದಾಖಲೆಗಳನ್ನು ತಮಗೆ ಕಳುಹಿಸಿಕೊಡಲಾಗುತ್ತಿದೆ. ಅವುಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಈ ಬೆಳವಣಿಗೆ ಸಂಭವನೀಯ ಅಭ್ಯರ್ಥಿಗಳಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗಬಹುದೆಂಬ ಆತಂಕ ಸೃಷ್ಟಿಸಿದ್ದರೆ, ಈ ಮೂವರ ಹೆಸರುಗಳನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವಷ್ಟರಲ್ಲಿ ರಾಜ್ಯ ಸರಕಾರಕ್ಕೂ ಒಂದು ರೀತಿಯ ಹಿನ್ನಡೆ ಅಗಿದೆ. ಹೀಗಾಗಿ ಪಟ್ಟಿ ಪರಿಷ್ಕರಣೆ ಆಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಯಾರೆಲ್ಲ ಇದ್ದಾರೆ?
ಹಿರಿಯ ಮುಖಂಡ ಎಂ.ಆರ್‌. ಸೀತಾರಾಂ ಈ ಹಿಂದೆ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಮನ್ಸೂರ್‌ಖಾನ್‌ ಕೆಪಿಸಿಸಿಯಲ್ಲಿ ಪದಾಧಿಕಾರಿಯಾಗಿದ್ದಾರೆ. ಸುಧಾಮ್‌ದಾಸ್‌ ಅವರು ಕೇಂದ್ರ ಸೇವೆಯಿಂದ ಇತ್ತೀಚೆಗಷ್ಟೇ ನಿವೃತ್ತಿಯಾಗಿ ರಾಜಕೀಯ ಪಕ್ಷವೊಂದರ ಜತೆ ಗುರುತಿಸಿಕೊಂಡಿದ್ದಾರೆ. ಅವರನ್ನು ಶಿಕ್ಷಣ, ಸಹಕಾರ, ಸಂಸ್ಕೃತಿ ಹಾಗೂ ಸಮಾಜ ಸೇವೆಯ ಕೋಟಾದಲ್ಲಿ ಹೇಗೆ ನಾಮಕರಣ ಮಾಡಲು ಸಾಧ್ಯ ಎಂಬ ಪ್ರಶ್ನೆಗಳು ಉದ್ಭವವಾಗಿದೆ. ಆದ್ದರಿಂದ ಸರಕಾರದ ಶಿಫಾರಸಿಗೆ ಮನ್ನಣೆ ನೀಡಬಾರದೆಂದು ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು. ನಾಮಕರಣ ಸದಸ್ಯರ ಸಂಭವನೀಯ ಪಟ್ಟಿ ಈಗ ವಿವಾದದ ಸ್ವರೂಪ ಪಡೆದುಕೊಂಡಿರುವುದರಿಂದ ಈ ಮೂವರ ಪೈಕಿ ಒಂದೆರಡು ಹೆಸರುಗಳು ಬದಲಾದರೂ ಅಚ್ಚರಿ ಇಲ್ಲ.

ಉಮಾಶ್ರೀ ಪರ ಸಿದ್ದು, ಶಂಕರ್‌ ಪರ ಡಿಕೆಶಿ
ಮಾಜಿ ಸಚಿವೆ ಉಮಾಶ್ರೀ ಪರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಮೇಲ್ಮನೆ ಮಾಜಿ ಸಭಾಪತಿ ಡಾ| ಬಿ.ಎಲ್‌. ಶಂಕರ್‌ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಲಾಬಿ ಮಾಡತೊಡಗಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಂ.ಸಿ. ವೇಣುಗೋಪಾಲ್‌ ಹೆಸರೂ ಚಲಾವಣೆಗೆ ಬಂದಿದೆ. ಇತ್ತೀಚೆಗಿನ ದಿಲ್ಲಿ ಭೇಟಿ ಸಂದರ್ಭದಲ್ಲಿಯೂ ಈ ವಿಷಯ ಅನಧಿಕೃತವಾಗಿ ಚರ್ಚೆಯಾಗಿವೆ. ಸೀತಾರಾಂ, ಮನ್ಸೂರ್‌ ಖಾನ್‌ ಹಾಗೂ ಸುಧಾಮ್‌ದಾಸ್‌ -ಈ ಮೂವರಲ್ಲಿ ಯಾವುದಾದರೂ ಒಂದು ಹೆಸರು ಕೈಬಿಟ್ಟರೆ ಆ ಜಾಗಕ್ಕೆ ಉಮಾಶ್ರೀ ಹೆಸರು ಸೇರ್ಪಡೆಯಾಗುವ ಅವಕಾಶಗಳು ಹೆಚ್ಚಿವೆ ಎನ್ನಲಾಗಿದೆ. ಬಹುತೇಕ ಸೋಮವಾರದ ಅನಂತರ ರಾಜ್ಯಪಾಲರಿಗೆ ಸರಕಾರ ತನ್ನ ಶಿಫಾರಸು ಪಟ್ಟಿ ಕಳುಹಿಸುವ ಸಾಧ್ಯತೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next