Advertisement
ಪ್ರಾಶಯೋಗ ಮತ್ತು ಬವಣೆಗಳು..ಈಗ ಈ ವ್ಯಕ್ತಿ ಯಾರು ಎಂದು ಹೆಸರು ಹೇಳುವುದು ಬೇಡ. ಈತನು ಬೆರಳು ಸನ್ನೆ ಮಾಡಿ ಕರೆದರೆ ಸಾವಿರಾರು ಜನ, ಅಪ್ಪಣೆಯಾಗಬೇಕು ಎಂದು ವಿನಂತಿಸಿ ನಿಲ್ಲುತ್ತಾರೆ. ಬಾಲ್ಯ ಹಾಗೂ ತಾರುಣ್ಯದ ಪ್ರಾರಂಭದ ಕೆಲ ಕಾಲ ಕಷ್ಟಗಳು ಇದ್ದರೂ ತದ ನಂತರ ಪ್ರತ್ಯಕ್ಷ ಮಹಾರಾಜನೇ ಆದದ್ದು ಸುಳ್ಳಲ್ಲ. ಹಣದ ಹೊಳೆ, ಹೆಸರು, ಕೀರ್ತಿ, ಆಳುಕಾಳು, ಮನೆ, ವಾಹನಗಳ ಹೊರೆ ಸಂಪತ್ತು.
ಇವರ ಹೆಸರೂ ಬೇಡ. ಆದರೆ ಇವರು ಚರಿತ್ರೆಯಲ್ಲಿ ಮೂಡಿಸಿ ಹೋದ ಛಾಪು ಅಂತಿಂಥದ್ದಲ್ಲ. ಶ್ರೀಮಂತಿಕೆ, ವರ್ಚಸ್ಸು, ಕೇಳಿದ್ದು ಕ್ಷಣಾರ್ಧದಲ್ಲಿ ಎದುರಿಗೆ ಬಂದು ಬೀಳುವ ಸೌಭಾಗ್ಯ ಇತ್ಯಾದಿ ಒಂದೇ ಎರಡೇ? ಆದರೆ, ಶನೈಶ್ಚರ ಹಾಗೂ ಚಂದ್ರರ ಕಾರಣದಿಂದಾಗಿ ಒದಗಿ ಬಂದ ಪಾಶಯೋಗ, ಎಲ್ಲಾ ಸ್ಥಿತಿವಂತಿಕೆಯ ನಡುವೆಯೂ ಎಲ್ಲೆ ಹೋದರೂ ಒಂದು ಕಾರಾಗೃಹವೇ ನಿರ್ಮಾಣವಾಗುತ್ತಿತ್ತು. ನಿನ್ನದೇ ತಪ್ಪು ಎಂದು ಬೆರಳು ತೋರಿಸಿ ತೀರಾ ಹತ್ತಿರದ ಕುಟುಂಬದ ಸದಸ್ಯರೊಡನೆ “ಸುಮ್ಮನಿರು ಸದ್ಯ’ ಎಂದು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಪ್ರೀತಿಸಿದವನನ್ನು ಮದುವೆಯಾದರೂ ಸಂಬಂಧದ ನಡುವೆ ಹತ್ತಿರದವರೇ ಗೋಡೆಗಳಾಗಿ ನಿಂತ ಪ್ರಾರಬ್ದ. ಅಧಿಕಾರದ ಶಿಖರ ಕೈಗೆ ದೊರೆತಾಗಲೂ ತೀರದ ಕಿರಿಕಿರಿ ತೀರ ಹತ್ತಿರದವರಿಂದ. ಹತ್ತಿರದ ಬಂಧುಗಳೇ ಕರ್ಕಶವಾದ ಶಬ್ದಗಳನ್ನುಪಯೋಗಿಸಿ ಅಪಹಾಸ್ಯ ಮಾಡುತ್ತಿದ್ದರು. ಯಾರದೋ ಜೊತೆ ನೆರವೇರಿದ ದೇಹ ಸಂಬಂಧ. ಮನಸ್ಸಿಗೆ ಇದು ಸರಿಯಲ್ಲ ಎಂದು ತಿಳಿದರೂ ಸರಿಯಾದುದನ್ನೇ ಮಾಡಲಾಗದ ಅಸಹಾಯಕತೆ. ಮನಸ್ಸಿರದಿದ್ದರೂ ಭಟ್ಟಂಗಿಗಳನ್ನು ಸಂಭಾಳಿಸಲೇ ಬೇಕು. ವಿರೋಧಿಗಳ ಕ್ರೂರ ಟೀಕೆಗಳು. ತನ್ನ ಜಾಣತನ, ವ್ಯವಧಾನಗಳಿಂದ ಸುಧಾರಿಸಲೆತ್ನಿಸಿದರೂ ಇವರ ಬೌದ್ಧಿಕ ಎತ್ತರ ತಲುಪಲಾಗದ ಹತ್ತಿರದ ಕುಟುಂಬದ ಸದಸ್ಯರು. ಒಂದು ಬಿಗಿ ಕಾಪಾಡಿಕೊಳ್ಳಲು ಅನಿವಾರ್ಯವಾಗಿ ಒಳ್ಳೆಯವರನ್ನೂ ದೂರ ಮಾಡಿ ಕೊಳ್ಳಬೇಕಾದ ಪ್ರಾರಬ್ಧ. ನಿಜವಾದ ಕಾರಾಗೃಹವಾಸದ ಅವಮಾನ. ಮಾಡಬಾರದ ವಿಚಾರಗಳನ್ನೇ ವಿಧಿ ಮಾಡಿಸುತ್ತಿತ್ತು. ಅನಿವಾರ್ಯವಾಗಿ ಮಾಡಬೇಕಾಗಿಯೇ ಬರುತ್ತಿದ್ದ ಕೆಲಸಗಳ ಬಗೆಗಾಗಿ ಯಾತನೆ ಇರುತ್ತಿತ್ತು. ವರ್ಚಸ್ಸು, ಅಧಿಕಾರ, ಗಟ್ಟಿತನ, ಧೈರ್ಯ, ಹಟಗಳು ಇದ್ದರೂ ಇತಿಹಾಸದಲ್ಲಿ ಕಪ್ಪುಚುಕ್ಕೆ ಇಡದೇ ಇರಲು ಸಾಧ್ಯವಾಗಲಿಲ್ಲ.
Related Articles
ಕಪ್ಪು ಜನರ ಬದುಕಿಗೆ ಬೆಳಕು ತಂದ ಪರಂಜ್ಯೋತಿಯೇ ಆಗಿದ್ದರು ಮಂಡೇಲಾ. ಇವರ ಜಾತಕದಲ್ಲಿನ ನಾಯಕತ್ವದ, ಸಂಘಟನಾ ಚಾತುರ್ಯದ ಶಕ್ತಿ ಅದ್ಬುತವಾದದ್ದು. ವರ್ಚಸ್ಸು, ಹಿಡಿದ ಕೆಲಸಕ್ಕಾಗಿ ಎಂಥದೇ ತ್ಯಾಗಕ್ಕೂ ಮುಂದಾಗುವ ಬುದ್ಧಿ, ಸ್ಥೈರ್ಯ, ಧೈರ್ಯ ಬಲ ಜಾತಕದಲ್ಲಿ ಶ್ರೇಷ್ಠ ಮಟ್ಟದ್ದು. ಆದರೆ ಜಾತಕದಲ್ಲಿ ಪಾಶಯೋಗ ಇದ್ದುದರಿಂದ 30 ವರ್ಷಗಳ ದೀರ್ಘಕಾಲ ಜನಾಂಗೀಯ ಪ್ರಭುತ್ವದ, ಆಡಳಿತದ ಚುಕ್ಕಾಣಿ ಹಿಡಿದವರ ನಿರ್ಧಾರದಿಂದಾಗಿ ಕಾರಾಗೃಹವಾಸ. ಬದುಕಿನ ಬಹು ಮಹತ್ವದ ತಾರುಣ್ಯದ ಕಾಲ, ನಡುವೆಯಸ್ಸಿನ ಕಾಲ ಕಾರಾಗೃಹದಲ್ಲಿಯೇ ನರಳಿಸಿತು. ಒಪ್ಪಿಕೊಂಡ ಬದ್ಧತೆ, ಸೃಜನರ ಸ್ವಾಭಿಮಾನ, ಸ್ವಾತಂತ್ರದ ರಕ್ಷಣೆಗಾಗಿ ಸೆರೆಮನೆಯಲ್ಲಿ ನರಳಾಟ. ಜಾಗತಿಕವಾಗಿ ನೆಲ್ಸನ್ ಮಂಡೇಲಾ ವರ್ಚಸ್ಸಿಗೆ ದೊಡ್ಡ ತೂಕ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಇವರು ರಾಜದ್ರೋಹಿ. ಕಾರಾಗೃಹ ವಾಸದಲ್ಲಿದ್ದಾಗಲೇ ನೊಬೆಲ್ ಪುರಸ್ಕಾರ ಕೂಡ ದೊರೆಯಿತು. ವೈವಾಹಿಕ ಜೀವನದಲ್ಲಿ ಮಧುರತೆಯನ್ನು ತುಂಬಿಕೊಂಡ ಜೀವಗಳೇ ತಲೆ ನೋವು ತಂದು ಕಾಡುತ್ತಿದ್ದರು. ಪ್ರೀತಿಸಿ ಮದುವೆಯಾದವಳನ್ನು ದೂರ ಮಾಡಿ ಕೊಳ್ಳಬೇಕಾಗಿ ಬಂತು. ನೆಲ್ಸನ್ ಮಂಡೇಲಾ ಜಗತ್ತಿನ ನಾಯಕ. ಆದರೆ ಸ್ವಂತ ದೇಶದಲ್ಲಿ ನರಳಿದ್ದು ಸುಳ್ಳಲ್ಲ. ಇದೆಂಥ ವಿಧಿ? ಎಲ್ಲ ಕೊಟ್ಟರೂ ಏನೂ ಕೊಟ್ಟಿಲ್ಲವೆಂಬಂತೆ ನರಳಾಟವೇ ಆದರೆ?
Advertisement
ಒಟ್ಟಿನಲ್ಲಿ ವಿಧಿ ಬರೆದದ್ದನ್ನು ಅನುಭವಿಸಲೇಬೇಕು ಎಂದಾಯಿತು. ಸದ್ಯ ತನ್ನ ಇಹಲೋಕದ ವ್ಯಾಪಾರ ಮುಗಿಸಿ ವಿಧಿವಶರಾದ ಜಯಲಲಿತಾರನ್ನೇ ಗಮನಿಸಿದರೆ ಅವರ ಜಾತಕದಲ್ಲೂ ಪಾಶಯೋಗದ ಸಂವಿಧಾನವಿತ್ತು. ಎಷ್ಟು ಕಷ್ಟ ನಷ್ಟ ಎದುರಿಸಿ ಮುಂದೆ ಬಂದರು? ಆದರೆ ಅವರು ಎದುರಿಸಿದ ಅವಮಾನ? ರಾಜ್ಯದ ಜನ ಪ್ರತ್ಯಕ್ಷ ದೇವರು ಎಂಬುದಾಗಿಯೇ ಅವರನ್ನು ಕರೆದರು. ಅಮ್ಮಾ ಎಂದರು. ಇಂಥ ಅಮ್ಮ, ತಮಿಳುನಾಡಿನ ದೇವಿ ಕಾರಾಗೃಹ ಸೇರಬೇಕಾಗಿ ಬಂದದ್ದನ್ನು ನಾವು ನೋಡಿದ್ದೇವೆ. ರಜತ ಪರದೆಯಲ್ಲಿ ಕಂಗೊಳಿಸಿದ ನಾಯಕಿ ತಮಿಳುನಾಡಿನ ನಾಯಕಿಯಾದಳು. ದೇಶದ ನಾಯಕಿಯಾಗುವುದೂ ಅಸಾಧ್ಯವಾಗೇನಿರಲಿಲ್ಲ.
ಅನಂತ ಶಾಸ್ತ್ರಿ